
ವಿಜಯಪುರ: ಜಿಲ್ಲೆಯಲ್ಲಿ ಭೀಕರ ಪ್ರವಾಹವಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜನ ನೀರಿನ ನಡುವೆಯೇ ದಿನಗಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ತೊಂದರೆಗಳು, ಪ್ರಕೃತಿ ವಿಕೂಪ ಎದುರಿಸುತ್ತಿದ್ದರೂ ಭಕ್ತರ ಭಕ್ತಿ ಮಾತ್ರ ಕಡಿಮೆಯಾಗಿಲ್ಲ. ಪ್ರವಾಹದ ನಡುವೆಯೇ ಮಹಾನವಮಿ ಪೂಜೆ ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಮುತ್ತಕ್ಕ ಗಂಗನಹಳ್ಳಿ ಎಂಬುವವರು ಮುಳುಗುವಷ್ಟು ನಿಂತಿರುವ ನೀರಿನ ಮಧ್ಯೆಯಿಂದಲೇ ಸಾಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಇವರು ಎರಡು ದಿನಗಳ ಹಿಂದೆ ಮನೆಯಲ್ಲಿ ಮಹಾನವಮಿಯ ಪ್ರಯುಕ್ತ ಘಟದ ದೀಪ ಹಾಕಿಟ್ಟಿದ್ದರು. ಮಾರನೇ ದಿನವೇ ಭೀಮಾನದಿ ಪ್ರವಾಹದಿಂದಾಗಿ ಮುತ್ತಕ್ಕರ ಮನೆ ಜಲಾವೃತಗೊಂಡಿದೆ. ಮನೆ ಮುಳುಗಿದ್ದರೂ ನಿತ್ಯ ಕೃತಕ ದೋಣಿಯಲ್ಲಿ ಮನೆಗೆ ಹೋಗಿ ದೀಪಕ್ಕೆ ಎಣ್ಣೆ ಹಾಕಿ ಬರುತ್ತಿದ್ದಾರೆ. ಇವರ ಮನೆ ಸಂಪೂರ್ಣವಾಗಿ ಮುಳುಗಿದ್ದು, ಮೇಲ್ಭಾಗ ಮಾತ್ರ ಮುಳುಗಿಲ್ಲ. ಹೀಗಾಗಿ ಮನೆಯಲ್ಲಿ ಹಚ್ಚಿದ ದೀಪದ ಕೆಲ ಮಟ್ಟದ ವರೆಗೆ ಮನೆ ಜಲಾವೃತಗೊಂಡಿದೆ.
ಮುತ್ತಕ್ಕನಿಗೆ ಸಹೋದರರ ಸಾಥ್:
ಇನ್ನು ಘಟ ಸ್ಥಾಪನೆ ಮಾಡಿದ ನಂತರ ಸತತ ಒಂಭತ್ತು ದಿನಗಳ ಕಾಲ ದೀಪ ಆರದಂತೆ ನೋಡಿಕೊಳ್ಳುವ ಪದ್ಧತಿ ಇದೆ. ಈ ಪದ್ಧತಿ ಹಿರಿಯರಿಂದ ಬಂದಿದ್ದು, ನಾವೂ ಅದನ್ನು ಉಳಿಸಿಕೊಳ್ಳುತ್ತೇವೆ. ದೇವರ ಮೇಲೆ ಭಾರ ಹಾಕಿ ನಿತ್ಯ ಪ್ರವಾಹದ ನೀರಲ್ಲಿ ಹೋಗಿ ಬರುತ್ತಿದ್ದೇನೆ ಎಂದು ಮುತ್ತಕ್ಕ ತಿಳಿಸಿದ್ದಾರೆ. ಅಲ್ಲದೆ ಸಹೋದರಿ ಮುತ್ತಕ್ಕಳಿಗೆ ಸಿದ್ದನಿಂಗ ಹಾಗೂ ರಾಜಶೇಖರ ಎಂಬ ಸಹೋದರರು ನಿತ್ಯ ದೋಣಿಯಲ್ಲಿ ಪ್ರವಾಹದ ನೀರಲ್ಲಿ ಕರೆದುಕೊಂಡು ಹೋಗಿ ದೀಪಕ್ಕೆ ಎಣ್ಣೆ ಹಾಕಲು ಸಹಾಯ ಮಾಡುತ್ತಿದ್ದಾರೆ. ಹಾಗೂ ಮುತ್ತಕ್ಕಳ ಭಕ್ತಿಗೆ ದೇವಣಗಾಂವ್ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರವಾಹದಲ್ಲೇ ದೇಗುಲದಲ್ಲಿ ಪೂಜೆ ಸಲ್ಲಿಸಿದ ಅರ್ಚಕರು:
ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಆಳೆತ್ತರದ ನೀರಲ್ಲೇ ದೇವಸ್ಥಾನಕ್ಕೆ ಹೋಗಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಪ್ರವಾಹದಿಂದಾಗಿ ಅಫಜಲಪುರ ತಾಲೂಕಿನ ಗಾಣಗಾಪುರದ ಸಂಗಮ ದೇಗುಲ ಜಲಾವೃತಗೊಂಡಿದೆ. ಆದರೆ ಇದನ್ನು ಲೆಕ್ಕಿಸದೆ ಅರ್ಚಕರು ಪೂಜೆ ಸಲ್ಲಿಸಿದ್ದಾರೆ.