‘ಸೆಗಣಿ ತಿನ್ನಕ್ಕೆ ಹೋಗ್ರಿ!’
ಸಂಜೆ ಆರೂವರೆಯ ಹೊತ್ತು. ಹೆಗ್ಗೋಡಿನ ರಂಗಮಂದಿರ ಕಿಕ್ಕಿರಿದಿತ್ತು. ನೀನಾಸಂ ಸಂಸ್ಕೃತಿ ಶಿಬಿರದ ಅಂಗವಾಗಿ ಏರ್ಪಾಡಾದ ನಾಟಕಕ್ಕೆ ಘಂಟೆ ಬಾರಿಸಿಯೂ ಆಗಿತ್ತು. ಪ್ರೇಕ್ಷಕವೃಂದದಲ್ಲಿ ಮಾತ್ರ ಗುಸುಗುಸು ಚಾಲ್ತಿಯಲ್ಲೇ ಇತ್ತು. ಆಗ ಸಂಯಮ ಕಳೆದುಕೊಂಡ ರಂಗನಿರ್ದೇಶಕರು ಕೋಪದಲ್ಲಿ ಹೀಗೆ ಗುಡುಗಿದ್ದರು.
ಕೆಲ ಪ್ರಜ್ಞಾವಂತ ಪ್ರೇಕ್ಷಕರಿಗೆ ಈ ವಾಕ್ಯಪ್ರಯೋಗ ಮುಖಕ್ಕೆ ರಾಚಿ ಜೀವವೇ ಬಾಯಿಗೆ ಬಂದಹಾಗಾಗಿದ್ದೂ ವಾಸ್ತವ. ಈಗ ಈ ಪ್ರಸಂಗ ನೆನಪಾಗಲು ಕಾರಣ ನಿನ್ನೆ ಮೈಸೂರಿನ ರಂಗಾಯಣದಲ್ಲಿ ನಡೆದ ಬೇಂದ್ರೆಯವರ ಬದುಕು ಬರಹ ಮತ್ತು ಹಾಡುಗಳನ್ನೊಳಗೊಂಡ ಕಾರ್ಯಕ್ರಮದಲ್ಲಿ ನಡೆದ ಘಟನೆ. ಹಾಡುಗಳ ಮಧ್ಯೆ ಅದಕ್ಕೆ ಸಂಬಂಧಿಸಿದ ವಿವರಣೆ ನಿರೂಪಣೆ ಸಾಗಿದಾಗ, ಕುಟುಂಬಸಮೇತರಾಗಿ ಬಂದ ಸಭಿಕ ಮಹಾಶಯರೊಬ್ಬರು, ‘ರೀ ಸ್ವಾಮಿ ನಾವು ಎರಡನೂರು ರೂಪಾಯಿ ಕೊಟ್ಟು ಹಾಡು ಕೇಳೋದಕ್ಕೆ ಬಂದಿರೋದೇ ಹೊರತು ನಿಮ್ಮ ಭಾಷಣ ಕೇಳೋದಕ್ಕೆ ಅಲ್ಲ. ನಿಲ್ಲಸ್ರೀ ನಿಮ್ಮ ಮಾತು!’ ಎಂದು ಮಾತಿನ ಮಧ್ಯೆ ಕೂಗಿದರು.
ಪ್ರಜಾಪ್ರಭುತ್ವದಡಿ ಏನನ್ನೂ ಹೇಳುವ ಕೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಕಲೆಯ ವಿಚಾರದಲ್ಲಿ ಅದಕ್ಕೆ ಪ್ರಕೃತಿ ಸಹಜವಾಗಿ ತುಸು ಹೆಚ್ಚೇ ಅವಕಾಶವಿದೆ. ನಮ್ಮ ಭಾರತೀಯ ಪ್ರದರ್ಶನ ಕಲಾಜಗತ್ತು ಪೂರ್ತಿ ನಿಂತಿರುವುದು ಸಂವಾದಮಾರ್ಗದ ಮೇಲೆ. ಈ ಮಾರ್ಗವು ಸುಸೂತ್ರವಾಗಿ ಸಾಗಿ ರಸಾನುಭವದ ಸ್ಫುರಣೆಗೆ ಒಳಗೊಳ್ಳಬೇಕೆಂದರೆ ಸಂಯಮವೂ ಬೇಕು ಹಾಗೇ ಮುಕ್ತ ಮನಸ್ಸೂ. ಅದು ಸಂಗೀತವೇ ಆಗಲಿ ನಾಟಕವೇ ಆಗಲಿ ನೃತ್ಯವೇ ಆಗಲಿ. ಶಿಸ್ತು ಮತ್ತು ಪ್ರತಿಸ್ಪಂದನದ ವಿಚಾರವಾಗಿ ಕಲಾವಿದರು ತಾಳ್ಮೆ ಕಳೆದುಕೊಳ್ಳುವುದಕ್ಕೂ ಕಾರಣಗಳಿವೆ. ಪ್ರೇಕ್ಷಕನ ಸಂಸ್ಕಾರಕೊರತೆಗೆ ಕಾಲಘಟ್ಟಕ್ಕೆ ತಕ್ಕಂತೆ ಕಾರಣಗಳೂ ಇದ್ದೇ ಇವೆ.
ಈ ಹಿನ್ನೆಲೆಯಲ್ಲಿ ಹಿರಿಯ ಕವಿ, ಕಥೆಗಾರ್ತಿ ವೈದೇಹಿಯವರು ಕೆಲ ವರ್ಷಗಳ ಹಿಂದೆ ಉಡುಪಿಯಲ್ಲಿ ನಾಟಕ ಪ್ರದರ್ಶನ ನಡೆದಾಗಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ‘ಒಂದು ಕಲೆಯನ್ನು ಆಸ್ವಾದಿಸುವ ವ್ಯಕ್ತಿ ತನ್ನದೇ ಸ್ಥಾಪಿತ ಕಲ್ಪನೆಯ ಹೊರತಾಗಿಯೂ ಗ್ರಹಿಸುವ ಸಂಯಮ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಅವನ ಅರಿವು ವಿಸ್ತರಿಸುತ್ತದೆ. ನನ್ನ ಕಥೆ ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ವನ್ನು ಭಾಗೀರಥಿಬಾಯಿ ಕದಮ್ ರಂಗದ ಮೇಲೆ ತಂದರು. ಶಕುಂತಲೆ ಎಂದರೆ ವನದೇವತೆಯಂತೆ ಕಂಗೊಳಿಸುವ ಚಿತ್ರ ನಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿತವಾಗಿದೆ. ಆದರೆ ಭಾಗೀರತಿಯವರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಟ್ಟ ಶಕುಂತಲೆಯನ್ನು ರಂಗದ ಮೇಲೆ ಕಾಣಿಸಿದರು. ಇದರಿಂದಾಗಿ ನಾಟಕದ ಕಥಾವಸ್ತುವಿಗೆ ಯಾವುದೇ ರೀತಿಯ ಭಂಗವಾಗಲಿಲ್ಲ. ಯಾಕೆಂದರೆ ಶಕುಂತಲೆಯ ಪಾತ್ರದ ಮೂಲಕ ಒಟ್ಟಾರೆಯಾಗಿ ಒಂದು ಹೆಣ್ಣಿನ ಮನಸ್ಸಿನೊಂದಿಗೆ ಸಂವಹನ ಸಾಧಿಸುವ ಸಾಧ್ಯತೆ ಆ ಪಾತ್ರದೊಳಗೆ ಅಡಗಿತ್ತು. ಪ್ರೇಕ್ಷಕರು ಯಾವ ಸಮಸ್ಯೆಯೂ ಇಲ್ಲದೆ, ತನ್ಮಯತೆಯಿಂದ ನಾಟಕವನ್ನು ನೋಡಿದರು, ಗ್ರಹಿಸಿದರು. ನಾಟಕ ಅತ್ಯಂತ ಯಶಸ್ವಿ ಪ್ರಯೋಗವಾಗಿತ್ತು. ಈ ಸಾಧ್ಯತೆಗಳು ನಾಟಕದ ಉಡುಗೆ-ತೊಡಗೆಗಳಿಗಷ್ಟೇ ಅಲ್ಲ, ವಸ್ತುವಿಚಾರಗಳಿಗೂ ಅನ್ವಯಿಸುತ್ತವೆ. ಭಿನ್ನತೆ, ಬದಲಾವಣೆಗಳು ಸೃಜನಶೀಲವಾಗಿ ಕಾಣಿಸಿಕೊಂಡಾಗ ಮಾತ್ರ ಪ್ರೇಕ್ಷಕನ ಮನಸ್ಸಿನಲ್ಲಿ ಯೋಚನೆಗಳು, ಚಿಂತನೆಗಳು ಹೆಚ್ಚುತ್ತಾ ಹೋಗುತ್ತವೆ’ ಎನ್ನುತ್ತಾರೆ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ರಂಗಶಂಕರದಲ್ಲಿ ‘ಒಡಕಲು ಬಿಂಬ’ ಪ್ರದರ್ಶನ ನಡೆದಿತ್ತು. ಮೊಬೈಲ್ ರಿಂಗ್ ಆಗುತ್ತಿದ್ದಂತೆ ಪ್ರೇಕ್ಷಕಿಯೊಬ್ಬರು ಸೆಕೆಂಡುಗಳ ಕಾಲ ಮಾತನ್ನೂ ಮುಗಿಸಿದರು. ನಂತರ ಅರುಂಧತಿ ನಾಗ್ ನಾಟಕದ ಕೊನೆಯಲ್ಲಿ, ಮಾತನಾಡಿದ್ದು ಯಾರು ಕೈ ಎತ್ತಿ ಎಂದರು. ಆ ಪ್ರೇಕ್ಷಕಿ ಎದ್ದು ನಿಂತರು. ಅವರನ್ನು ರಂಗದ ಮೇಲೆ ಕರೆದು, ‘ನಿಮಗೆ ನಾಟಕ ಮಾಡಲು ಆಗುತ್ತಾ?’ ಎಂದು ನೇರವಾಗಿಯೇ ಕೇಳಿಬಿಟ್ಟರು.
ಅಧುನಿಕ ರಂಗಮಂದಿರಗಳಲ್ಲಿ ಒಂದು ಸಣ್ಣ ಪಿಸುಮಾತು, ನಿಟ್ಟುಸಿರು ಕೂಡ ಮೂಲೆಮೂಲೆಯನ್ನೂ ತಲುಪುವಂಥ ವ್ಯವಸ್ಥೆ ನಿರ್ಮಾಣ ಮಾಡಲಾಗಿರುತ್ತದೆ. ಹೀಗಿರುವಾಗ ಪ್ರೇಕ್ಷಕರು ಎಷ್ಟು ಪ್ರಜ್ಞೆಯಿಂದ ಅಲ್ಲಿ ಇದ್ದರೂ ಸಾಲದು. ಈ ವಿಚಾರವಾಗಿ ರಂಗನಿರ್ದೇಶಕ, ಕಥೆಗಾರ ಎಸ್. ಸುರೇಂದ್ರನಾಥ, ‘ಮನೆಯೊಳಗೆ ಬರುವವರಿಗೆ ಮೊದಲೇ ಹೇಳುತ್ತೇವೆ ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಅಂತ. ಹಾಕಿಕೊಂಡೇ ಬರುತ್ತೇನೆ ಎಂದರೆ ಅದು ಧಾರ್ಷ್ಟ್ಯ. ರಂಗಶಂಕರದಲ್ಲಿ ನಾಟಕವನ್ನು ಮಧ್ಯೆ ನಿಲ್ಲಿಸಿ ಸಾಕಷ್ಟು ಸಲ ಕೂಗಾಡಿದ್ದೇನೆ. ಇದು ಶಿಸ್ತಿನ ವಿಷಯ. ಇನ್ನು ವಸ್ತುವಿನ ವಿಷಯಕ್ಕೆ ಬಂದರೆ ಗಿರೀಶ ಕಾರ್ನಾಡ ಅವರ ಮಾತು ನೆನಪಾಗುತ್ತದೆ, ‘ನಾಟಕ ಮುಗಿದ ಮೇಲೆ ಮೌನವಾಗಿರಬೇಕು, ಚರ್ಚಿಸಿದರೆ ರಸಾನುಭಂಗ.’ ನಾನಿದನ್ನು ಭಾಗಶಃ ಒಪ್ಪುತ್ತೇನೆ. ಏಕೆಂದರೆ ನಾಟಕ ಮುಗಿದ ನಂತರವೂ ಪ್ರೇಕ್ಷಕನಿಗೂ ನಟರಿಗೂ ಸಂವಾದ ಮುಂದುವರೆದೇ ಇರುತ್ತದೆ. ಸಹೃದಯನೊಬ್ಬ ಯಾವ ನೆಲೆಯಲ್ಲಿ ನಾಟಕವನ್ನು ಗ್ರಹಿಸುತ್ತಾನೆ ಅನ್ನುವುದು ಅವನ ವೈಯಕ್ತಿಕಕ್ಕೆ ಸಂಬಂಧಿಸಿದ್ದು. ಹಾಗಾಗಿ ಯಾವತ್ತೂ ಆ ಸಂವಾದವನ್ನೂ ಮುರಿದುಕೊಳ್ಳಬಾರದು.’
ಬಹಳ ಹಿಂದೆ ಬರ್ಲಿನ್ನಲ್ಲಿ ಸಂಗೀತ ಕಛೇರಿಗೆ ಹೋದಾಗಿನ ಸಂದರ್ಭವನ್ನು ಮೆಲುಕು ಹಾಕಿದ ಸುರೇಂದ್ರನಾಥ, ಪಾಶ್ಚಾತ್ಯ ಮತ್ತು ಭಾರತೀಯ ರಂಗಭೂಮಿಯ ಪ್ರೇಕ್ಷಕ ಸಂಸ್ಕಾರಗಳಲ್ಲಿರುವ ಸಂಸ್ಕಾರಗಳ ಭಿನ್ನತೆಯ ಬಗ್ಗೆಯೂ ಹೇಳುತ್ತಾರೆ.
‘ಬಹಳ ವರ್ಷಗಳ ಹಿಂದೆ ಬರ್ಲಿನ್ನಲ್ಲಿ ಒಂದು ಸಂಗೀತ ಕಛೇರಿಗೆ ಹೋಗಿದ್ದೆ. ಮೂರು ನಿಮಿಷ ತಡವಾಗಿ ಹೋಗಿದ್ದರಿಂದ ಬಾಗಿಲಲ್ಲೇ ನಿಲ್ಲಬೇಕಾಯಿತು. ಒಂದು Pause ಸಿಗುತ್ತಿದ್ದಂತೆ ಒಳಗೆ ಹೋಗಿ ಎಂದು ತಳ್ಳಿದರು. ಕಛೇರಿಯ ಮಧ್ಯೆ ಮತ್ತೊಂದು Pause ಬರುತ್ತಿದ್ದಂತೆ ಶ್ರೋತೃಗಳೆಲ್ಲ ಒಂದೇ ಸಲಕ್ಕೆ ಕೆಮ್ಮಿ ಗಂಟಲು ಸರಿ ಮಾಡಿಕೊಂಡರು. ಇಲ್ಲಿ ನಾವು ಗಮನಿಸಬೇಕಾಗಿರುವುದು ನಿಶ್ಯಬ್ದ. ವೇದಿಕೆಯ ಮೇಲಿನ ಪ್ರತೀ ಸೂಕ್ಷ್ಮ ಚಲನೆಗಳೂ ಪ್ರತಿಯೊಬ್ಬರಿಗೂ ತಲುಪಬೇಕೆನ್ನುವುದು ಇದರ ಹಿಂದಿನ ಉದ್ದೇಶ. ಆದರೆ ನಮ್ಮ ಭಾರತೀಯ ಕಲಾವಿದರು ಶ್ರೋತೃಗಳ ಪ್ರೋತ್ಸಾಹವನ್ನು ಚಪ್ಪಾಳೆಗಳ ಮೂಲಕವೋ, ಉದ್ಗಾರಗಳ ಮೂಲಕವೋ ನಿರೀಕ್ಷಿಸುತ್ತಾರೆ. ಈ ಪ್ರತಿಸ್ಪಂದನ ಅನುಭೂತಿ ನಮ್ಮ ಜಾನಪದ ರಂಗಭೂಮಿಗೆ ಬೇಕು. ಆದರೆ ಆಧುನಿಕ ರಂಗಭೂಮಿ ಥೇಟ್ ಸಿನೆಮಾದಂತೆ ಸಾಗುತ್ತದೆ. ಇಲ್ಲಿ ಸಂವಾದ ಸಾಧ್ಯವೇ ಇಲ್ಲ. ನೀವು ಹಣ ಕೊಟ್ಟು ಬಂದಿದ್ದೀರಿ ನಾವು ನಿಮಗಾಗಿ ನಾಟಕ ಮಾಡುತ್ತಿದ್ದೇವೆ ಎನ್ನುವ ಅಲಿಖಿತ ಒಪ್ಪಂದ.’
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಕೆಲ ವರ್ಷಗಳ ಹಿಂದೆ ಜಿ.ಬಿ.ಜೋಶಿಯವರ ‘ಆ ಊರು ಈ ಊರು’ ನಾಟಕ ನಡೆದಿತ್ತು. ಏಣಗಿ ಬಾಳಪ್ಪ, ಜಿ.ಬಿ. ಜೋಶಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಏಣಗಿ ನಟರಾಜ ಮುಂತಾದ ಹಿರಿಯರು ಮೊದಲ ಸಾಲಿನಲ್ಲಿ ಕುಳಿತು ನಾಟಕ ನೋಡುತ್ತಿದ್ದರು. ಎಂಟರಿಂದ ಎಂಬತ್ತು ವರ್ಷದ ಕಲಾವಿದರೆಲ್ಲರೂ ಪಾಲ್ಗೊಂಡ ದೊಡ್ಡ ಬಳಗದ ನಾಟಕ ಅದಾಗಿತ್ತು. ಸಭಾಂಗಣ ಪೂರ್ತಿ ತುಂಬಿತ್ತು. ನಾಟಕದ ಮಧ್ಯೆ ಇದ್ದಕ್ಕಿದ್ದಂತೆ ಪ್ರೇಕ್ಷಕವಲಯದಿಂದ ಕೈಗೂಸೊಂದು ಒಂದೇ ಸಮ ಅಳಲು ಶುರು ಮಾಡಿತು. ಅಷ್ಟೇ ಅಲ್ಲ, ತಾಯಿಯ ತೊಡೆಯಿಂದ ಇಳಿಯುವ ಪ್ರಯತ್ನವನ್ನೂ ಮಾಡುತ್ತಿತ್ತು. ಆದರೆ ಆ ತಾಯಿ ಪೂರ್ತಿ ನಾಟಕದಲ್ಲಿ ಮುಳುಗಿ ಹೋಗಿದ್ದರು. ಮುಖ್ಯ ಪಾತ್ರಧಾರಿಯಾಗಿದ್ದ ಹುಲಿಗೆಪ್ಪ ಕಟ್ಟೀಮನಿ ಎರಡು ಹೆಜ್ಜೆ ಮುಂದೆ ಬಂದು, ಆ ಮಗುವನ್ನು ಹೊರಗೆ ಕರೆದುಕೊಂಡು ಹೋಗಲು ಆ ತಾಯಿಗೆ ಕೈಮುಗಿದು ಹೇಳಿದರು. ‘ಕೆಲವೊಮ್ಮೆ ಪಾತ್ರದಿಂದ ಹೊರಬಂದು ಸಂಯಮದಿಂದ ನಾವು ಪ್ರೇಕ್ಷಕರನ್ನು ನಿಭಾಯಿಸಬೇಕಾಗುತ್ತದೆ. ಸಾಂದರ್ಭಿಕವಾಗಿ ಸಂಭಾಷಣೆಗಳನ್ನು ಸೃಷ್ಟಿಸಿಕೊಂಡು ಶಿಸ್ತು ಕಾಯ್ದುಕೊಳ್ಳಬೇಕಾಗುತ್ತದೆ’ ಹುಲಿಗೆಪ್ಪನವರು ಅಂದಿನ ಪ್ರಸಂಗವನ್ನು ಹೀಗೆ ಹಂಚಿಕೊಂಡರು.
ಪ್ರೇಕ್ಷಕರು ಮತ್ತವರ ಮನಸ್ಥಿತಿಗಳು ಯಾವ ಕಾಲಕ್ಕೂ ಒಂದೇ. ಆದರೆ ಅವರ ಪ್ರತಿಕ್ರಿಯೆಗಳನ್ನು, ಸ್ಪಂದನವನ್ನು ನಿಭಾಯಿಸುವಲ್ಲಿ ಕಲಾವಿದನ ಜಾಣ್ಮೆ ಮತ್ತು ಅರಿವು ಅಡಗಿರುತ್ತದೆ. ಈ ಸಂದರ್ಭದಲ್ಲಿ ವೃತ್ತಿರಂಗಭೂಮಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಪ್ರಸಂಗವೊಂದನ್ನು ಇಲ್ಲಿ ಹೇಳಬೇಕೆನ್ನಿಸುತ್ತಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ ಕ್ಯಾಂಪ್ ಹಾಕಿತ್ತು. ಮರಾಠಿ ನಾಟಕ ‘ಪಾವಣ್ಯಾ ಆಲಾ ಚ ಪಾವಣ್ಯಾ ಆಲಾ’ದ ಕನ್ನಡ ರೂಪ ‘ಮಾವ ಬಂದಾನಪೋ ಮಾವ’. ಮಾವನ ಪಾತ್ರಧಾರಿ ಬಾಳಪ್ಪ ದುಖತಪ್ತರಾಗಿ ಟವೆಲ್ ಬಾಯಿಗೆ ಹಿಡಿದುಕೊಂಡು ರಂಗಮಂಚದ ಮೇಲೆ ಬರುವ ಸನ್ನಿವೇಶ. ಊರಹಿರಿಯರು ಎಲೆಯಡಿಕೆ ಮೆಲ್ಲುತ್ತ ಹರಟೆಯಲ್ಲಿ ತೊಡಗಿದ್ದರು. ಪಡ್ಡೆಹುಡುಗರು ರಾಕೆಟ್ ಬಿಡುತ್ತ ಕೇಕೆ ಹೊಡೆಯುತ್ತಿದ್ದರು. ಹೆಣ್ಣುಮಕ್ಕಳು ಸಂಸಾರಸುದ್ದಿಗಳಲ್ಲಿ ಮುಳುಗಿದ್ದರು. ಒಟ್ಟಾರೆ ಗದ್ದಲ. ಆ ದೃಶ್ಯ ಮುಗಿದ ತಕ್ಷಣ ಮತ್ತೆ ರಂಗಕ್ಕೆ ಬಂದ ಬಾಳಪ್ಪನವರು, ‘ನಾಟಕ ನೋಡಾಕ ಬಂದೀರೋ ದನಾ ಕಾಯಾಕ ಬಂದೀರೋ? ಈ ಮಾತು ಬಿರಸ ಆಕ್ಕೇತಿ ಖರೇ. ಆದ್ರ ಎಲ್ಲಾರೂ ರೊಕ್ಕಾ ಕೊಟ್ಟ ನೋಡಾಕ ಬಂದಿರ್ತೀರಿ. ನಾಟಕ ನೋಡೂದು ನಾಟಕ ಮಾಡೂದು ಎರಡೂ ಕ್ರಿಯಾ ಇಲ್ಲಿ ನಡದಿರ್ತಾವ. ಹಿಂಗ ಮಾಡಿದ್ರ ಹೆಂಗ? ನಾಟಕಾ ನೋಡೂದು ದೊಡ್ಡ ಕಲಾ. ಇದು ಎಲ್ಲಾರಿಗೂ ಬರೂವಂಥದ್ದಲ್ಲ. ನಾಟಕ ಹೊರಹಾಕೂ ರಸಕ್ಕ ಸ್ಪಂದನಾ ಬೇಕಾಕ್ಕೇತಿ. ಆಗಷ್ಟ ಪ್ರೇಕ್ಷಕರೂ ಖರೇ ಕಲಾವಿದನಾಗ್ತಾ ಹೋಗ್ತಾನು. ನಮಗಿಂತ ನೀವು ದೊಡ್ಡ ಕಲಾವಿದರು. ಆದ್ರ ನೀವು ಹಿಂಗ ಕ್ಯಾಕಿ ಹೊಡಕೊಂತ ಕುಂತ್ರ ನಾವು ನಾಟಕಾ ಹೆಂಗ ಮಾಡಬೇಕು? ಇದು ಸಭ್ಯತನ ಏನು? ನೀವು ಹಿಂಗ ಪ್ರಜ್ಞೆ ಮೀರಿ ನಡಕೊಂಡ್ರ ಹೆಂಗ? ನೀವು ರೊಕ್ಕಾ ಕೊಟ್ಟ ಬರ್ತೀರಿ, ನಾವು ರೊಕ್ಕಾ ತುಗೊಂಡ ನಾಟಕ ಮಾಡ್ತಿರ್ತೀವಿ. ನಮ್ಮಿಬ್ಬರಿಗೂ ತೃಪ್ತಿ ಬೇಕಲ್ಲ? ಇಷ್ಟರ ಮೇಲೂ ನಾ ಹೆಚ್ಚೂ ಕಮ್ಮೀ ಮಾತಾಡಿದ್ರ ಕ್ಷಮಾ ಮಾಡ್ರೀಪಾ.’
Published On - 7:21 pm, Sun, 3 January 21