ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

|

Updated on: Mar 17, 2021 | 5:23 PM

ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಎಷ್ಟು ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಎಂಬುದಕ್ಕೆ ಈ ಲೇಖನದಲ್ಲಿ ವಿವರಣೆ ಇದೆ. ಒಂದು ವೇಳೆ ಆದಾಯಕ್ಕೂ ಚಿನ್ನದ ಪ್ರಮಾಣಕ್ಕೂ ತಾಳೆ ಆಗದಿದ್ದಲ್ಲಿ ಆಗ ಪ್ರಶ್ನೆಗಳು ಶುರುವಾಗುತ್ತವೆ.

ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?
ಸಾಂದರ್ಭಿಕ ಚಿತ್ರ
Follow us on

ಭಾರತೀಯರಿಗೆ ಚಿನ್ನ ಅಂದರೆ ಬಲು ಪ್ರೀತಿ ಎಂಬ ಸಂಗತಿಯನ್ನು ಹೊಸದಾಗಿ ಹೇಳಬೇಕಾದ ಅಗತ್ಯವಿಲ್ಲ. ವಯಸ್ಸು ಹಾಗೂ ಆದಾಯದ ಲೆಕ್ಕಾಚಾರಗಳನ್ನೂ ಮೀರಿ ನಾನಾ ಕಾರಣಗಳಿಗಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಕೆಲವರಿಗೆ ಹೂಡಿಕೆ ಉದ್ದೇಶ ಇದ್ದರೆ, ಮತ್ತೆ ಕೆಲವರಿಗೆ ಮದುವೆ, ಹಬ್ಬ- ಹರಿದಿನಗಳು ಎಂಬ ವಿಶೇಷ ಕಾರಣಗಳು ಇರುತ್ತವೆ. ಹಬ್ಬ, ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಶುಭ ಮತ್ತು ಅದೃಷ್ಟ ಬರುತ್ತದೆ ಎಂಬ ಭಾವನೆ ಆಳವಾಗಿ ಬೇರೂರಿದೆ. ಇನ್ನೊಂದು ವರ್ಗದ ಜನರಿದ್ದಾರೆ. ಯಾವಾಗೆಲ್ಲ ಹೆಚ್ಚುವರಿಯಾಗಿ ಇವರ ಬಳಿ ಹಣ ಇರುತ್ತದೋ ಆಗ ಇದು ಸರಿಯಾದ ಸಮಯವೋ ತಪ್ಪಾದ ಸಮಯವೋ ಎಂದೆಲ್ಲ ನೋಡದೆ ಚಿನ್ನವನ್ನು ಖರೀದಿ ಮಾಡಿಬಿಡುತ್ತಾರೆ.

ಯಾವಾಗ ಬೇಕೋ ಆಗ ಮಾರಿ, ಚಿನ್ನವನ್ನು ನಗದು ಮಾಡಿಸಬಹುದು ಎಂಬ ಸ್ಥಿತಿ ಹಾಗೂ ಚಿನ್ನದ ಬಗ್ಗೆ ಇರುವ ಭಾವನಾತ್ಮಕ ಬಾಂಧವ್ಯದ ಕಾರಣಕ್ಕೆ ಸ್ವಲ್ಪ ಮಟ್ಟದಲ್ಲಾದರೂ ಚಿನ್ನವನ್ನು ಇಟ್ಟುಕೊಂಡಿರುವವರು ಕಾಣಸಿಗುತ್ತಾರೆ. ಆದರೆ ಬಹುದೊಡ್ಡ ಪ್ರಶ್ನೆ ಏನೆಂದರೆ, ಭಾರತದಲ್ಲಿ ಒಬ್ಬ ವ್ಯಕ್ತಿಯು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು? ಯಾವಾಗ ಕಪ್ಪು ಹಣದ ಬಗ್ಗೆ ಚರ್ಚೆ ವಿಪರೀತವಾಯಿತೋ ಹಾಗೂ ಆದಾಯ ತೆರಿಗೆ ಕಾನೂನಿಗೂ ಬದಲಾವಣೆ ತರಲಾಯಿತೋ ಆಗಿನಿಂದ ಇಂಥದ್ದೊಂದು ಪ್ರಶ್ನೆ ಸುಳಿದಾಡುತ್ತಲೇ ಇದೆ.

ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 132
ಆದರೆ, ತಜ್ಞರು ಹೇಳುವ ಪ್ರಕಾರ, ನಿಮಗೆ ಬಂದ ಆದಾಯಕ್ಕೆ ನ್ಯಾಯಬದ್ಧವಾದ ತೆರಿಗೆ ಕಟ್ಟಿ, ಅದರ ಮೂಲವೂ ಕಾನೂನುಬದ್ಧ ಆಗಿದ್ದಲ್ಲಿ ಯಾವುದೇ ಚಿಂತೆ ಅಗತ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 132ರ ಪ್ರಕಾರ, ಶೋಧ ಕಾರ್ಯಾಚರಣೆ ನಡೆಸುವ ವೇಳೆ ವಿವರಣೆ ಒದಗಿಸದ ಆಭರಣ, ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯುವ ಅಧಿಕಾರ ಭಾರತೀಯ ತೆರಿಗೆ ಅಧಿಕಾರಿಗಳಿಗೆ ಇರುತ್ತದೆ. ನಿಮ್ಮ ಬಳಿ ಇರುವ ಚಿನ್ನವನ್ನು ಕಾನೂನುಬದ್ಧವಾಗಿರುವ ಆದಾಯ ಮೂಲದಿಂದ ಖರೀದಿಸಿದ್ದು, ಅದನ್ನು ವಿವರಿಸುವುದಕ್ಕೆ ಸಾಧ್ಯವಿದ್ದಲ್ಲಿ ಒಬ್ಬ ವ್ಯಕ್ತಿಯ ಬಳಿ ಯಾವ ಪ್ರಮಾಣದಲ್ಲಿ ಬೇಕಾದರೂ ಚಿನ್ನ ಇರಬಹುದು.

ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವಿವರಣೆ ಅಂದರೆ, ಚಿನ್ನದ ಖರೀದಿಯ ಅಥವಾ ಚಿನ್ನವನ್ನು ಬದಲಿಸಿಕೊಂಡಿದ್ದಲ್ಲಿ ಅದಕ್ಕೆ ಇನ್​ವಾಯ್ಸ್​ಗಳನ್ನು ಒದಗಿಸಬೇಕು. ಒಂದು ವೇಳೆ ಪಿತ್ರಾರ್ಜಿತವಾಗಿ ಬಂದ ಚಿನ್ನಾಭರಣ ಅಥವಾ ಗಟ್ಟಿ ಆದಲ್ಲಿ ಅದಕ್ಕೆ ವಿಲ್​​ನ ನಕಲು ಪ್ರತಿ ಅಥವಾ ಕುಟುಂಬದ ಮಧ್ಯೆ ಆಗಿರುವ ಪಾಲಿನ ಪತ್ರ ತೋರಿಸಬೇಕಾಗುತ್ತದೆ. ಅಥವಾ ಯಾರ ಮೂಲಕವಾದರೂ ದಾನವಾಗಿ ಅಥವಾ ಉಡುಗೊರೆಯಾಗಿ ಬಂದಿದ್ದಲ್ಲಿ ದಾನಪತ್ರವನ್ನು ದಾಖಲೆಯಾಗಿ ತೋರಿಸಬೇಕಾಗುತ್ತದೆ.

ಡಿಸೆಂಬರ್ 1, 2016ರಂದು ಪತ್ರಿಕಾ ಪ್ರಕಟಣೆ
ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಇಟ್ಟುಕೊಳ್ಳಬಹುದು ಎಂಬ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿಯು ಡಿಸೆಂಬರ್ 1, 2016ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಪಿತ್ರಾರ್ಜಿತವಾಗಿ ಬಂದಿದ್ದು ಸೇರಿಕೊಂಡು, ಯಾವ ಮೂಲದಿಂದ ಚಿನ್ನ ಬಂದಿದೆ ಎಂಬುದನ್ನು ವಿವರಿಸುವುದಕ್ಕೆ ಸಾಧ್ಯವಿದ್ದಲ್ಲಿ ಯಾವುದೇ ಮಿತಿಯಿಲ್ಲ. ಆದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುವ ವೇಳೆಯಲ್ಲಿ ಆ ವ್ಯಕ್ತಿಯ ಆದಾಯದೊಂದಿಗೆ ಹೋಲಿಸಿ ಚಿನ್ನ ಎಷ್ಟಿದೆ ಎಂಬ ಬಗ್ಗೆ ಪ್ರಶ್ನೆ ಮಾಡಬಹುದಾಗಿದೆ. ಒಂದು ವೇಳೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದ ಸಂದರ್ಭದಲ್ಲಿ ತೆರಿಗೆದಾರರ ಬಳಿ ಆದಾಯಕ್ಕೆ ಹೋಲಿಕೆ ಆಗದಷ್ಟು ಪ್ರಮಾಣದ ಚಿನ್ನ ಮೇಲ್ನೋಟಕ್ಕೆ ಕಂಡುಬಂದರೂ ಅದನ್ನು ವಶಪಡಿಸಿಕೊಳ್ಳಲಾಗದ ಕೆಲವು ಸಂದರ್ಭಗಳಿವೆ.

ವಿವಾಹಿತ ಮಹಿಳೆ ಬಳಿ 500 ಗ್ರಾಮ್ ಚಿನ್ನ, ಅವಿವಾಹಿತ ಮಹಿಳೆ ಬಳಿ 250 ಗ್ರಾಮ್ ಚಿನ್ನ ಹಾಗೂ ಪುರುಷ ಸದಸ್ಯರ ಬಳಿ 100 ಗ್ರಾಮ್ ಚಿನ್ನವಿದ್ದರೂ ಅದನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಳ್ಳುವುದಿಲ್ಲ. ಇನ್ನೂ ಒಂದು ಸಂಗತಿ ಏನೆಂದರೆ, ಈ ಮೇಲ್ಕಂಡ ಮಿತಿಗಿಂತ ಹೆಚ್ಚಿನ ಚಿನ್ನ ಕಂಡುಬಂದಾಗಲೂ ಅದನ್ನು ವಶಪಡಿಸಿಕೊಳ್ಳದಿರುವ ವಿವೇಚನಾಧಿಕಾರ ತೆರಿಗೆ ಅಧಿಕಾರಿಗಳಿಗೆ ಇರುತ್ತದೆ. ಇನ್ನು ಕೌಟುಂಬಿಕ ಸಂಪ್ರದಾಯ ಹಾಗೂ ಪದ್ಧತಿ ಮತ್ತಿತರ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

Published On - 5:19 pm, Wed, 17 March 21