ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ

| Updated By: ಶ್ರೀದೇವಿ ಕಳಸದ

Updated on: Mar 06, 2021 | 6:18 PM

NS Lakshminarayana Bhatta Death: ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್, ಎಂದೇ ಮನೆಮಾತಾಗಿದ್ದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಂದು ಬೆಳಗಿನ ಜಾವ (ಮಾ.6) 4:45ರ ಸುಮಾರಿಗೆ ಬನಶಂಕರಿಯ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ
ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು
Follow us on

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್, ಎಂದೇ ಮನೆಮಾತಾಗಿದ್ದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಂದು ಬೆಳಗಿನ ಜಾವ (ಮಾ.6) 4:45ರ ಸುಮಾರಿಗೆ ಬನಶಂಕರಿಯ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ’ರು, ‘ಭಾವಗೀತೆ ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ, ಮುಂತಾದ ಹಲವರು ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದರು. ಜೊತೆಗೆ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅಪಾರ ಸಾಹಿತ್ಯ ಕೃಷಿ ಮಾಡಿದ್ದ ಡಾ. ಎನ್‌ಎಸ್ ಲಕ್ಷ್ಮೀನಾರಾಯಣ ಭಟ್ಟರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬೆಳಗ್ಗೆ 10:30ರ ವರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ವ್ಯಕ್ತಿ ಪರಿಚಯ..
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936ಅಕ್ಟೋಬರ 29 ರಂದು ಶಿವಮೊಗ್ಗೆಯಲ್ಲಿ ಜನಿಸಿದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಶಿವಮೊಗ್ಗದಲ್ಲಿ ಇಂಟರ್ ಮೀಡಿಯೆಟ್ ಮುಗಿಸಿ, ಕನ್ನಡ ಎಂ.ಎ. ಆನರ್ಸ್ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜ್​ನಲ್ಲಿ ಪಡೆದರು. ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ ಹೊಂದಿದ್ದ ಅವರು, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. 1965 ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ 1990 ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಈ ಎಲ್ಲಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಕನ್ನಡ ಕಾವ್ಯ ಕುರಿತು ಪಿಎಚ್​ಡಿ ಪದವಿ ಪಡೆದರು. ಇಂಗ್ಲೀಷ್ ಮತ್ತು ಸಂಸ್ಕೃತ ಸಾಹಿತ್ಯದಲ್ಲೂ ಅವರ ಅಧ್ಯಯನ ಪುಟಗೊಂಡಿದೆ. ಶಿಶುಸಾಹಿತ್ಯ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಎನ್.ಸಿ.ಆರ್.ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್, ಮತ್ತು ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡ ಮಾತು ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ.

***

ಸುಗಮ ಸಂಗೀತಕ್ಕೆ ದೊಡ್ಡ ಕೊಡುಗೆ: ಡಾ. ಪೂರ್ಣಿಮಾ ಆರ್

ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಎನ್​.ಎಸ್​. ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಅಧ್ಯಾಪಕರಾಗಿದ್ದರು. ಅಲ್ಲಿಯೇ ನನ್ನ ತಂದೆ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು. ನಾನಾಗ ಮಿಡಲ್​ ಸ್ಕೂಲಿನಲ್ಲಿದ್ದೆ. ವರ್ಷದ ಕೊನೆಗೆ ಕಾಲೇಜಿನಲ್ಲಿ ಅನಕೃ, ಕೈಲಾಸಂ ನಾಟಕಗಳನ್ನು ಮಾಡಿಸುತ್ತಿದ್ದ ಸಂದರ್ಭದಲ್ಲಿ ಇವರು ನಮ್ಮ ಮನೆಗೆ ಬರುತ್ತಿದ್ದರು. ನಂತರ ಕೊನೇ ದಿನ ನಾವೆಲ್ಲ ಕಾಲೇಜಿಗೆ ನಾಟಕ ನೋಡಲು ಹೋಗುತ್ತಿದ್ದೆವು. ಮುಂದೆ ನಾನು ಸೆಂಟ್ರಲ್ ಕಾಲೇಜಿಗೆ ಎಂಎ ಮಾಡಲು ಸೇರಿಕೊಂಡಾಗ ಅವರೇ ಕನ್ನಡದ ಮೇಷ್ಟ್ರಾಗಿ ಬಂದರು. ನವ್ಯಕಾವ್ಯ ಚಳವಳಿಯಲ್ಲಿದ್ದ ಅವರು ಭಾವಗೀತೆ ಪ್ರಕಾರಕ್ಕೆ ಹೊರಳಿಕೊಳ್ಳುತ್ತಿದ್ದ ಸಮಯವದು. ಅಂದಿನಿಂದ ಇಂದಿನವರೆಗೂ ಭಾವಗೀತೆಗಳ ಮೂಲಕ ಅವರು ನಮ್ಮೆಲ್ಲರೊಳಗೆ ಜೀವಂತವಾಗಿದ್ದಾರೆ. ಸುಗಮ ಸಂಗೀತ ಬೆಳವಣಿಗೆಗೆ ಇವರ ಕೊಡುಗೆ ಅಪಾರ.

ಅಗ್ರಹಾರ ಕೃಷ್ಣಮೂರ್ತಿ

ಅವರು ನನಗೆ ಮೇಷ್ಟ್ರು ಆಗಿದ್ದುದರಿಂದ ಅಂಥಾ ಒಡನಾಟವೇನೂ ಇರಲಿಲ್ಲ. ತುಂಬಾ ಒಳ್ಳೆಯ ಮೇಷ್ಟ್ರು. ನಮಗೆ ಛಂದಸ್ಸು ಕುರಿತ ಪಾಠ ಮಾಡುತ್ತಿದ್ದರು. ಅವರ ಕೊನೆ ದಿನಗಳಲ್ಲಿ ಬನಶಂಕರಿ ವಿಹಾರ ಕೇಂದ್ರವೆಂಬ ಕ್ಲಬ್ಬಿಗೆ ಬರುತ್ತಿದ್ದರು. ಆಗ ಒಮ್ಮೊಮ್ಮೆ ಮಾತಾಡಿಸುತ್ತಿದ್ದೆ. ನೀವೆಲ್ಲಾ ನನ್ನ ಬಗ್ಗೆ ಇಷ್ಟೊಂದು ಅಭಿಮಾನ ಇಟ್ಟುಕೊಂಡಿರುವುದು ನನಗೆ ಗೊತ್ತೇ ಇಲ್ಲವಲ್ಲಪ್ಪ ಎಂದು ಸಂತೋಷಪಡುತ್ತಿದ್ದರು. ಅವರು ಇನ್ನಷ್ಟು ದಿನ ಇರಬೇಕಿತ್ತು

ಇದನ್ನೂ ಓದಿ: ಲಕ್ಷ್ಮೀನಾರಾಯಣ ಭಟ್ಟ ಭಾವನಮನ: ಅವರ ಊರ್ವಶಿಯನ್ನು ರಂಗದ ಮೇಲೆ ತರುವುದೇ ನಾನು ಸಲ್ಲಿಸುವ ಶ್ರದ್ಧಾಂಜಲಿ

Published On - 9:15 am, Sat, 6 March 21