ಕಾರವಾರ: ಯಾರ ಜೊತೆ ಸರಸವಾಡಿದ್ರೂ ಕೊರೊನಾದ ಜತೆ ಮಾತ್ರ ಸರಸ ಆಡಬಾರದು. ಹಾಗೇನಾದ್ರೂ ಮಾಡಿದ್ರೆ ಸಾವು ಕಟ್ಟಿಟ್ಟಬುತ್ತಿ. ಯಾಕಂದ್ರೆ ಉತ್ತರ ಕನ್ನಡ ಜಿಲ್ಲೆಯ ಯುವಕನೊಬ್ಬ ಕೊರೊನಾ ಜತೆ ಆಟ ಆಡೋಕ್ಕೆ ಹೋಗಿ ಪ್ರಾಣ ತೆತ್ತಿದ್ದಾನೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 26 ವರ್ಷದ ಯುವಕನಿಗೆ ಕೊರೊನಾ ವೈರಸ್‌ನ ಎಲ್ಲ ಲಕ್ಷಣಗಳಿದ್ದವು. ಆದ್ರೂ ಆತ ಅದನ್ನ ಯಾರಿಗೂ ಹೇಳಿರಲಿಲ್ಲ. ವೈದ್ಯರಿಂದ ಚಿಕಿತ್ಸೆಯನ್ನೂ ಪಡೆದಿರಲಿಲ್ಲ. ಇದಕ್ಕೆ ಕಾರಣ ಅತನ ಮದುವೆ. ಮೇ 25ರಂದು ಆತನ ಮದುವೆಯಿತ್ತು. ಹೀಗಾಗಿ ಮದುವೆಗೆ ತೊಂದರೆಯಾಗದಿರಲಿ ಅಂತಾ ಮುಚ್ಚಿಟ್ಟು ಮದುವೆಯಾಗಿದ್ದ.
ಆದ್ರೆ ಇದನ್ನೆಲ್ಲಾ ಕೊರೊನಾ ರೋಗ ಕೇಳಬೇಕಲ್ಲಾ. ದಿನೇ ದಿನೇ ಆತನನ್ನ ಆವರಿಸಿಕೊಂಡಿದೆ. ಯಾವಾಗ ಸೋಂಕಿನ ಪ್ರಭಾವ ಜಾಸ್ತಿಯಾಯಿತೋ ಆಗ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದ್ರೆ ಆವಾಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಈ ಮಧುಮಗನ ಸ್ವಯಂಕೃತಾಪರಾಧದಿಂದಾಗಿ ಆತನ ಪ್ರಾಣ ಹೋಗಿದೆ. ಅಷ್ಟೇ ಅಲ್ಲ.. ಆತನ ನವವಿವಾಹಿತ ಪತ್ನಿ ಸೇರಿದಂತೆ ಎರಡು ಕುಟುಂಬಗಳೂ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಅಂದ ಹಾಗೆ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದಾದ ಮೊದಲ ಸಾವು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದ್ದಾರೆ.