ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ತೆರಿಗೆಗಳ ಕಡಿತದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇಂಧನಗಳ ಬೆಲೆಗಳು ಸತತವಾಗಿ ಏರುಗತಿಯಲ್ಲಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ಜನರ ಕಷ್ಟ ನಮಗೆ ಅರ್ಥವಾಗುತ್ತೆ. ಆದರೆ ನಾವು ಧರ್ಮಸಂಕಟದ ಪರಿಸ್ಥಿತಿ ಅನುಭವಿಸುತ್ತಿದ್ದೇವೆ’ ಎಂದರು.
ಇಂಧನ ಬೆಲೆ ಏರಿಕೆ ಸಮಸ್ಯೆಯ ರಾಜ್ಯ ಸರ್ಕಾರಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಇಂಧನ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆ ಆಗುತ್ತಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆದರೆ ನಾವು ಧರ್ಮಸಂಕಟದ ಸ್ಥಿತಿಯಲ್ಲಿದ್ದೇವೆ. ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಶಯ ನಮಗೂ ಇದೆ ಎಂದು ಸಚಿವರು ನುಡಿದರು.
ಪೆಟ್ರೋಲ್ ಮತ್ತು ಡೀಸೆಲ್ಗಳ ಮೇಲೆ ಕೇಂದ್ರ ಸರ್ಕಾರ ಮಾತ್ರ ತೆರಿಗೆ ವಿಧಿಸುತ್ತಿಲ್ಲ. ರಾಜ್ಯ ಸರ್ಕಾರಗಳೂ ತೆರಿಗೆ ಹಾಕುತ್ತಿವೆ. ಬೆಲೆ ತಗ್ಗಿಸಬೇಕು ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ 41ರಷ್ಟು ಮೊತ್ತ ರಾಜ್ಯಗಳಿಗೆ ಕೊಡಬೇಕಾಗುತ್ತದೆ. ಹೀಗಾಗಿ ತೆರಿಗೆ ಇಳಿಕೆ ಬಗ್ಗೆ ಕೇಂದ್ರ ಸರ್ಕಾರವೊಂದೇ ನಿರ್ಧರಿಸಿದರೆ ಪ್ರಯೋಜನವಾಗುವುದಿಲ್ಲ. ಕೇಂದ್ರ, ರಾಜ್ಯಗಳು ಒಗ್ಗೂಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪುನರುಚ್ಚರಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಜಿಎಸ್‌ಟಿ ಮಂಡಳಿ ತೀರ್ಮಾನ ಕೈಗೊಳ್ಳಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳ ಖಂಡಿಸಿ ಗದಗದಲ್ಲಿ ಕೈ ಕಾರ್ಯಕರ್ತರ ಟ್ರ್ಯಾಕ್ಟರ್ ಮೆರವಣಿಗೆ
ಇದನ್ನೂ ಓದಿ: Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್