ಶಿವಮೊಗ್ಗ: ನಾವು ಮತ್ತೆ ಅಧಿಕಾರಕ್ಕೆ ಬರ್ತೇವೆ Be careful. ಯಡಿಯೂರಪ್ಪ ಕೋಟಿಗಟ್ಟಲೇ ದುಡ್ಡುಕೊಟ್ಟು ಶಾಸಕರನ್ನು ಖರೀದಿ ಮಾಡಿದ್ದಾರೆ. ಇವರೇನು ಸ್ವಂತ ದುಡ್ಡು ಕೊಟ್ರಾ? ಯಡಿಯೂರಪ್ಪ ಏನು ಸತ್ಯಹರಿಶ್ಚಂದ್ರನಾ? ಇಂಥವರು ರಾಜಕೀಯದಲ್ಲಿ ಇರಬೇಕಾ? ಎಂದು ನಗರದಲ್ಲಿ ನಡೆದ ಜನಾಕ್ರೋಶ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.
‘ಪೊಲೀಸರಿಗೆ ಯಡಿಯೂರಪ್ಪ ತಮ್ಮ ಮನೆಯಿಂದ ದುಡ್ಡು ಕೊಡುತ್ತಿಲ್ಲ’
ಪೊಲೀಸರಿಗೆ ಯಡಿಯೂರಪ್ಪ ತಮ್ಮ ಮನೆಯಿಂದ ದುಡ್ಡು ಕೊಡುತ್ತಿಲ್ಲ. ಈಶ್ವರಪ್ಪ ಅಥವಾ ಬಿಜೆಪಿ ನಿಮಗೆ ಸಂಬಳ ನೀಡುತ್ತಿಲ್ಲ. ಜನರ ತೆರಿಗೆ ದುಡ್ಡಿನಲ್ಲಿ ಸಂಬಳ ಕೊಡಲಾಗುತ್ತಿದೆ. ನಿಮಗೆ ಗಿಂಬಳ ಬೇರೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ, ಈಶ್ವರಪ್ಪ ನಿಮಗೆ ಅಧಿಕಾರದ ಮದ. ಎಷ್ಟು ದಿನ ಅಧಿಕಾರದಲ್ಲಿ ಇರ್ತಿರಾ? ನಾವು ಅಧಿಕಾರದಲ್ಲಿದ್ದಾಗ ನೀಚತನ ಮಾಡಿಲ್ಲ. ನಾನು 5 ವರ್ಷದಲ್ಲಿ ಒಂದೇ ಒಂದು ಸಲವೂ ಪೊಲೀಸರನ್ನ ಬಳಸಿಕೊಂಡಿಲ್ಲ. 307 ಕೇಸ್ ಹಾಕ್ತಿರಾ? ಇನ್ನೊಮ್ಮೆ ಓದಿಕೊಳ್ಳಿ. 307 ಸೆಕ್ಷನ್ ಏನು ಅಂತಾ ಓದಿಕೊಳ್ಳಿ. 324 ಸೆಕ್ಷನ್ ಹಾಕಬಹುದು, ಇದೂ ಹಾಕಲು ಆಗಲ್ಲ. ವೈದ್ಯರ ಪ್ರಮಾಣಪತ್ರವನ್ನು ಪೊಲೀಸರು ಬಹಿರಂಗಪಡಿಸಲಿ. ಯಾವ ಅಸ್ತ್ರ ಬಳಸಿದ್ದಾರೆ ಪೊಲೀಸರು ಹೇಳಲಿ. ನಾಚಿಕೆಯಾಗುವುದಿಲ್ಲವೇ? ಇವರಿಗೆ ಮಾನ ಮರ್ಯಾದೆ ಇದ್ಯಾ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.
‘ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ’
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜನಾಕ್ರೋಶ ಸಮಾವೇಶದಲ್ಲಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಭದ್ರಾವತಿ, ಶಿಕಾರಿಪುರ ಸೇರಿದಂತೆ ಎಲ್ಲಾ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಪೊಲೀಸ್ ದೌರ್ಜನ್ಯ ವಿರುದ್ಧ ಕಾಂಗ್ರೆಸ್ ಹೋರಾಡುತ್ತದೆ. ಪೊಲೀಸರು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ನಾವು ಅಧಿಕಾರಕ್ಕೆ ಬಂದ್ರೆ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
‘ಸಿಎಂ ಬಿಎಸ್ವೈ ಜಾಮೀನಿನ ಮೇಲೆ ಹೊರಬಂದಿದ್ದಾರೆ’
ಸಿಎಂ ಬಿಎಸ್ವೈ ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಿರಾಣಿ ಮತ್ತು ಬಿಎಸ್ವೈ ಮೇಲೆ ಭೂಮಿ ಕಬಳಿಕೆ ಪ್ರಕರಣ ಇದೆ. ಪೆಟ್ರೋಲ್, ಡೀಸಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ಎಂದು ಸಹ ಹೇಳಿದರು.
ಪೊಲೀಸ್ ನೇಮಕ ಆಗಿರೋದು ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು. ನಾನು ಈ ಹಿಂದೆ ಎಸ್.ಪಿ ಜೊತೆ ಮಾತನಾಡಿದೆ. ಸುಳ್ಳು ಕೇಸ್ ದಾಖಲಿಸಿದ್ದೀರಿ. ಯಾರನ್ನು ಬಂಧಿಸಬಾರದು ಅಂತಾ ಹೇಳಿದ್ದೆ. ಆದರೆ, ಮರುದಿನವೇ ಶಾಸಕರ ಪುತ್ರನನ್ನು ಬಂಧಿಸಿದ್ದಾರೆ. ಅಂದು ಯಾವ ದೊಡ್ಡ ಗಲಾಟೆ ನಡೆದಿಲ್ಲ. ಕಬಡ್ಡಿ ಆಟ ನಡೆಯುವಾಗ ಅನಗತ್ಯವಾಗಿ ಜೈ ಶ್ರೀರಾಮ್ ಎಂದು ಕೂಗುವ ಮೂಲಕ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ದೂರಿಗೆ ಯಾಕೆ ಯಾರನ್ನು ಬಂಧಿಸಿಲ್ಲ? ಇದು ಸರ್ಕಾರದ ಕುಮ್ಮಕ್ಕು ಅಲ್ವಾ? ಸರ್ಕಾರ ಹೇಳಿದಂತೆ ಪೊಲೀಸರು ಕುಣಿದಿದ್ದಾರೆ. ಹಾಗಾಗಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ನಾವು ಇಲ್ಲಿ ಸೇರಿದ್ದೇವೆ ಎಂದು ಹೇಳಿದರು.
‘ಯಡಿಯೂರಪ್ಪ, ಈಶ್ಬರಪ್ಪ ಮಧ್ಯೆ ಆಸ್ತಿ ಮಾಡಲು ಕಾಂಪಿಟೇಷನ್ ನಡೆಯುತ್ತಿದೆ’
ಯಡಿಯೂರಪ್ಪ, ಈಶ್ಬರಪ್ಪ ಮಧ್ಯೆ ಆಸ್ತಿ ಮಾಡಲು ಕಾಂಪಿಟೇಷನ್ ನಡೆಯುತ್ತಿದೆ. ಈಶ್ವರಪ್ಪ ಮನೆಯಲ್ಲಿ ದುಡ್ಡು ಎಣಿಸುವ ಮೆಷೀನ್ ಇತ್ತು. ಇಲ್ಲಿ ಯಾರ ಹತ್ರ ಆದ್ರೂ ದುಡ್ಡು ಎಣಿಸೋ ಮೆಷೀನ್ ಇದ್ಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಆಗ ನನ್ನ ಬಳಿ ಇದೆ ಎಂದು ರಮೇಶ್‌ಕುಮಾರ್ ನಗೆಚಟಾಕಿ ಹಾರಿಸಿದರು. ಅದಕ್ಕೆ, ಕೈಯಿಂದ ಎಣಿಸಲು ನಿಮ್ಮ ಬಳಿ ದುಡ್ಡಿಲ್ಲ. ನಿಮಗೆ ಮೆಷೀನ್ ಯಾಕೆ ಬೇಕು ಎಂದು ಸಿದ್ದರಾಮಯ್ಯ ಜೋಕ್ ಹೊಡೆದರು.
‘ಮಿಸ್ಟರ್ ಯಡಿಯೂರಪ್ಪ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ರು’
ಯಡಿಯೂರಪ್ಪ ಮಾತೆತ್ತಿದರೆ ಹಸಿರು ಶಾಲು ಹಾಕುತ್ತಾರೆ. ಆದರೆ, ಮಿಸ್ಟರ್ ಯಡಿಯೂರಪ್ಪ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ರು. ಸಾಲಮನ್ನಾ ಮಾಡುತ್ತೇನೆ ಅಂತಾ ಮಿಸ್ಟರ್ ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಭರವಸೆ ಈಡೇರಿಸಿದ್ರಾ ಹಸಿರು ಟವಲ್ ಯಡಿಯೂರಪ್ಪ? ರೈತರಿಗೆ ಒಂದು ರೂಪಾಯಿ ಕೊಡಲಿಲ್ಲ. ಇವರು ರೈತರ ಮಕ್ಕಳಾ? ನಾನು ಭರವಸೆ ನೀಡಿರಲಿಲ್ಲ. ಆದರೂ ಸಾಲಮನ್ನಾ ಮಾಡಿದ್ದೆ. ಆದರೆ ನಾನು ಯಾವತ್ತೂ ಹಸಿರು ಟವಲ್ ಹಾಕಿಲ್ಲ. ಯಡಿಯೂರಪ್ಪ ಡೋಂಗಿ ನಾಟಕ ಆಡ್ತಾರೆ ಎಂದು ಸಿದ್ದರಾಮಯ್ಯ ಗುಡುಗಿದರು.
ಮಾನ ಮರ್ಯಾದೆ ಇದ್ದರೆ ಬಿಎಸ್ವೈ ಸಿಎಂ ಸ್ಥಾನದಲ್ಲಿ ಒಂದು ಸೆಕೆಂಡ್ ಇರಬಾರದು. ಸಿಎಂ ಬಿಎಸ್ವೈ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಆದ್ರೂ ಕುರ್ಚಿ ಬಿಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಹೇಳಿದರು.
ಇದನ್ನೂ ಓದಿ:ಸಿಡಿ ಯುವತಿಯಿಂದ ಲೇಟೆಸ್ಟ್ ವಿಡಿಯೋ ಬಿಡುಗಡೆ: ರಮೇಶ್ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹೀಗಿದೆ