ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್

| Updated By: ರಶ್ಮಿ ಕಲ್ಲಕಟ್ಟ

Updated on: Jan 12, 2021 | 5:56 PM

ಮಂತ್ರ ಪಠಣೆ, ಪಾಠ, ಭಜನೆ, ಹಾಡುಗಳ ವಿಚಾರದಲ್ಲೂ ಹರ್ಷಾನಂದರಿಗೆ ಹರ್ಷಾನಂದರೇ ಸಾಟಿ. ಹರ್ಷಾನಂದರ ಜ್ಞಾನದ ಎತ್ತರ ಅರಿವಾಗಲು ಅವರ ಸುಮಾರು 75ನೇ ವರ್ಷದಲ್ಲಿ ಪ್ರಕಟವಾದ Encyclopedia of Hinduismನ ಮೂರು ಸಂಪುಟಗಳನ್ನು ನೋಡಬೇಕು.

ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್
Encyclopedia of Hinduism ಬರೆದವರು ಸ್ವಾಮಿ ಹರ್ಷಾನಂದ
Follow us on

ಬೆಂಗಳೂರು: ಬಸವನಗುಡಿಯ ರಾಮಕೃಷ್ಣಾಶ್ರಮದ ಗಿಡ, ಮರ, ಪಕ್ಷಿಗಳ ಜೊತೆಗೆ ನೆಲಹಾಸು, ಬೆಂಚು, ಮಂದಿರಗಳಿಗೂ ಪರಿಚಿತರಾಗಿದ್ದವರು, ಅವನ್ನೂ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದವರು ಸ್ವಾಮಿ ಹರ್ಷಾನಂದ ಮಹಾರಾಜ್ (1930-2021). ಮಕ್ಕಳಿಂದ ವೃದ್ಧರವರೆಗೆ, ಎಲ್ಲ ಜಾತಿ, ಧರ್ಮಗಳ ಜನರೂ ಹರ್ಷಾನಂದರ ಉಪನ್ಯಾಸಗಳಿಗೆ ಮಾರುಹೋಗುತ್ತಿದ್ದರು. ವೇದಿಕೆ ಮೇಲಿನ ಉಪನ್ಯಾಸಗಳಷ್ಟೇ ಅಲ್ಲ, ಆಪ್ತ ಖಾಸಗಿ ಮಾತುಕತೆಗಳಲ್ಲೂ ಹರ್ಷಾನಂದರು ಧರ್ಮದ ಹಾದಿಯನ್ನು ಅತ್ಯಂತ ಸರಳವಾಗಿ, ಎಂಥವರಿಗೂ ಮನಮುಟ್ಟುವಂತೆ ಹೇಳುತ್ತಿದ್ದರು.

ಸಾಧಕರು ಮಾತಿನಲ್ಲಿ ಬಳಸುವ ಪದಗಳಲ್ಲಿ ಜೀವಂತಿಕೆ ತುಳುಕುತ್ತಿರುತ್ತದೆ. ಹರ್ಷಾನಂದ ಒಡನಾಟಕ್ಕೆ ಬಂದವರಿಗೆ ಅದು ಹೇಗಿರುತ್ತದೆ ಎಂಬ ಅರಿವು ಉಂಟಾಗುತ್ತಿತ್ತು. ಹರ್ಷಾನಂದರೊಂದಿಗೆ ಮಾತನಾಡುವಾಗ, ಅಷ್ಟೇಕೆ ಸಿಡಿಗಳಲ್ಲಿ ಅಥವಾ ಯುಟ್ಯೂಬ್​ನಲ್ಲಿ ಅವರ ಉಪನ್ಯಾಸ ಕೇಳುವಾಗಲೂ ಕೇಳುವವರ ಮನಸ್ಸಿನಲ್ಲಿ ಅಂಥದ್ದೇ ಭಾವನೆಗಳು ಮೈದುಂಬುತ್ತಿತ್ತು. ಏಕೆಂದರೆ ಹರ್ಷಾನಂದರು ತಾವು ಕಂಡದ್ದನ್ನು ಕಂಡಂತೆ ಮಾತನಾಡುತ್ತಿರಲಿಲ್ಲ. ಕಲಿತು ಅನುಭವಿಸಿದ ಭಾರತದ ಅಧ್ಯಾತ್ಮ ಪರಂಪರೆಯನ್ನು ಭಾಷೆಯ ಮೂಲಕ ಎದುರಿಗಿದ್ದವರಿಗೆ ದಾಟಿಸುತ್ತಿದ್ದರು.

ಮಂತ್ರ ಪಠಣೆ, ಪಾಠ, ಭಜನೆ, ಹಾಡುಗಳ ವಿಚಾರದಲ್ಲೂ ಹರ್ಷಾನಂದರಿಗೆ ಹರ್ಷಾನಂದರೇ ಸಾಟಿ. ಹರ್ಷಾನಂದರ ಜ್ಞಾನದ ಎತ್ತರ ಅರಿವಾಗಲು ಅವರ ಸುಮಾರು 75ನೇ ವರ್ಷದಲ್ಲಿ ಪ್ರಕಟವಾದ Encyclopedia of Hinduismನ ಮೂರು ಸಂಪುಟಗಳನ್ನು ನೋಡಬೇಕು. 30 ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಬೆಳಕು ಕಂಡ ಈ ಕೃತಿಗಳಲ್ಲಿ ಹಿಂದೂ ಧರ್ಮದ ಸಕಲ ಪಾರಿಭಾಷಿಕ ಪದಗಳೂ ಅಡಗಿರುವುದು ಕೌತುಕ. ವ್ಯಕ್ತಿಯೊಬ್ಬ ತನ್ನ ಒಂದು ಜೀವಮಾನದಲ್ಲಿ ಇಂಥ ಕೃತಿ ರಚಿಸಬಹುದೇ ಎಂದು ಈ ಸಂಪುಟಗಳು ಪ್ರಕಟವಾದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು.

ವಿರಜಾನಂದರ ಶಿಷ್ಯರು
ಹರ್ಷಾನಂದರು ಸ್ವಾಮಿ ವಿವೇಕಾದನಂದರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿರಜಾನಂದ ಅವರಿಂದ ಮಂತ್ರದೀಕ್ಷೆ ಪಡೆದವರು. ಮೆಕಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಚಿನ್ನದ ಪದಕದೊಡನೆ ಮುಗಿಸಿ 1954ರಲ್ಲಿ ಬೆಂಗಳೂರು ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮ ಜೀವನ ಆರಂಭಿಸಿದರು. 1962ನೇ ಇಸವಿಯಲ್ಲಿ ಅಂದಿನ ರಾಮಕೃಷ್ಣ ಮಹಾಸಂಘದ 8ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾನಂದಜಿ ಮಹಾರಾಜ್ ಅವರಿಂದ ಸಂನ್ಯಾಸ ದೀಕ್ಷೆ ಪಡೆದರು.

ರಾಮಕೃಷ್ಣಾಶ್ರಮದ ಬೆಂಗಳೂರು, ಮಂಗಳೂರು, ಮೈಸೂರು ಶಾಖೆಗಳಲ್ಲಿ ಹಾಗೂ ಮಹಾಸಂಘದ ಮೂಲ ಕೇಂದ್ರವಾದ ಬೇಲೂರು ಮಠದಲ್ಲಿ ಹಾಗೂ ಅಲಹಾಬಾದ್​ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಬೆಂಗಳೂರು ಶಾಖೆಗೆ ಬಂದ ಸ್ವಾಮೀಜಿ ಇಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಸುಮಾರು 31 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಹೋದರು. ಮಠದ ಕೀರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದರು.

ಸಂಸ್ಕೃತ, ಕನ್ನಡ, ತೆಲುಗು, ಹಿಂದಿ, ಬಂಗಾಲಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತರಾಗಿದ್ದರು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು. ಅತ್ಯುತ್ತಮ ಸಂಗೀತಗಾರರು, ವಾಗ್ಮಿಗಳೂ ಆಗಿದ್ದರು. ಆಳವಾದ ಚಿಂತಕರು ಹಾಗೂ ಹಿಂದೂ ಧರ್ಮದ ವಿಷಯದಲ್ಲಿ ಪ್ರಭುತ್ವ ಪಡೆದಿದ್ದರು. ಇಸ್ಲಾಂ ಮತ್ತು ಕ್ರಿಶ್ಚಿಯನ್​ ಧರ್ಮಗಳ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ್ದರು. ಇವರ ಅನೇಕ ಕೃತಿಗಳು ವಿಶ್ವದ ಹಲವು ಭಾಷೆಗಳಿಗೆ ಅನುವಾದವಾಗಿವೆ.

ವಿವೇಕಾನಂದರ ಜನ್ಮ ದಿನವಾದ ಇಂದೇ ಇಹಲೋಕ ತ್ಯಜಿಸಿದ ಸ್ವಾಮಿ ಹರ್ಷಾನಂದ

Published On - 5:29 pm, Tue, 12 January 21