ಮೈಸೂರು: ಈ ಬರಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಯುತ್ತಿದ್ದ ಎಚ್.ವಿಶ್ವನಾಥ್ಗೆ ಅನರ್ಹತೆ ಅಡ್ಡಿಯಾಗಿದೆ. ಮೈತ್ರಿಸರ್ಕಾರ ಪತನಕ್ಕೆ ಕಾರಣರಾಗಿದ್ದ ಎಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಸೋತಿದ್ದರು. ಸಾಂವಿಧಾನಿಕವಾಗಿ ಮರು ಆಯ್ಕೆ ಆಗದ ಕಾರಣ ಅವರು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ನಿನ್ನೆ ಆದೇಶ ನೀಡಿದ ಬೆನ್ನಲ್ಲೇ, ಶಾಸಕ ಸಾ.ರಾ.ಮಹೇಶ್ ಮತ್ತೆ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಸಾ.ರಾ.ಮಹೇಶ್, ನಾನು ಮತ್ತು ನನ್ನ ಕಾರ್ಯಕರ್ತರು ಬಿಟ್ಟನಿಟ್ಟುಸಿರಿನ ಪರಿಣಾಮ ಇಂದು ವಿಶ್ವನಾಥ್ಗೆ ಶಿಕ್ಷೆಯಾಗಿದೆ. ತಪ್ಪು ಮಾಡಿದವರಿಗೆ ನ್ಯಾಯದೇವತೆಯೇ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದ್ದಾರೆ.
ನಮ್ಮಿಬ್ಬರ ಮಧ್ಯೆ ಆಣೆ-ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಈ ಅನರ್ಹತೆ ತೀರ್ಮಾನ ಬಂದಿದೆ. ಸತ್ಯ ಯಾವುದು ಎಂಬುದು ಗೊತ್ತಾಗಿದೆ. ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು ಕೇಳಿಕೊಂಡಿದ್ದೆ. ತಪ್ಪು ಮಾಡಿದರೂ ಭಂಡತನದಿಂದ ಶಕ್ತಿ ದೇವತೆ ಎದುರು ಬಂದು ಕುಳಿತರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಹಾಗೇ ನಮ್ಮಂಥ ರಾಜಕಾರಣಿಗಳಿಗೆ ಒಂದು ಪಾಠವೂ ಹೌದು ಎಂದ ಸಾ.ರಾ.ಮಹೇಶ್, ಉಳಿದ 16ಮಂದಿಗೆ ಏನೂ ಆಗುವುದಿಲ್ಲ. ಆದರೆ ವಿಶ್ವನಾಥ್ ವಿರುದ್ಧ ಮಾತ್ರ ಅನರ್ಹತೆಯ ತೀರ್ಪು ಬರುತ್ತದೆ ಎಂದರೆ, ಅವರು ದೇವರ ಎದುರು ಹೇಗೆ ನಡೆದುಕೊಂಡರು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ತಾರಕಕ್ಕೆ ಏರಿತ್ತು ಜಟಾಪಟಿ
ಮೈತ್ರಿ ಸರ್ಕಾರ ಪತನವಾದ ನಂತರ ಎಚ್.ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ನಡುವೆ ಜಟಾಪಟಿ ತಾರಕಕ್ಕೆ ಏರಿತ್ತು. ಹುಣಸೂರು ಶಾಸಕ ಎಚ್.ವಿಶ್ವನಾಥ್ ₹ 25 ಕೋಟಿ ರೂಪಾಯಿಗೆ ತಮ್ಮನ್ನು ಮಾರಿಕೊಂಡು ರಾಜೀನಾಮೆ ನೀಡಿದ್ದಾರೆ ಎಂದು ಸಾ.ರಾ.ಮಹೇಶ್ ಆರೋಪಿಸಿದ್ದರು.
ಅದೆಷ್ಟು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು ಎಂದರೆ ಇಬ್ಬರೂ ಮುಖಂಡರು ಆಣೆ ಪ್ರಮಾಣದವರೆಗೆ ಹೋಗಿದ್ದರು. ನಾನು 25 ಕೋಟಿ ರೂ.ತೆಗೆದುಕೊಂಡಿದ್ದು ನಿಜವೇ ಆದರೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ಎದುರು ಬಂದು ಆಣೆ ಮಾಡಿ ಎಂದು ವಿಶ್ವನಾಥ್ ಸವಾಲು ಎಸೆದಿದ್ದರೆ, ಅದಕ್ಕೆ ಪ್ರತಿಯಾಗಿ ಸಾ.ರಾ.ಮಹೇಶ್ ಪ್ರತಿಸವಾಲು ಎಸೆದಿದ್ದರು.
ಹಾಗೇ ಇಬ್ಬರೂ ಚಾಮುಂಡಿಬೆಟ್ಟಕ್ಕೆ ಹೋಗಿದ್ದರೂ ವಿಶ್ವನಾಥ್ ದೇವಿಯೆದುರು ಪ್ರಮಾಣ ಮಾಡಿರಲಿಲ್ಲ. ಆದರೆ ಸಾ.ರಾ. ಮಹೇಶ್ ದೇವಾಲಯಕ್ಕೆ ಹೋಗಿ, ವಿಶ್ವನಾಥ್ 25 ಕೋಟಿ ರೂ.ಪಡೆದಿದ್ದು ಸತ್ಯ ಎಂದು ದೇವಿಗೆ ನಮಸ್ಕರಿಸಿ ಪ್ರಮಾಣ ಮಾಡಿದ್ದರು.
ಇದನ್ನೂ ಓದಿ: H. ವಿಶ್ವನಾಥ್ಗೆ ಬಿಗ್ ಶಾಕ್! R. ಶಂಕರ್, MTB ನಾಗರಾಜ್ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
Published On - 10:56 am, Tue, 1 December 20