
ಬೆಂಗಳೂರು: ಬೆಂಗಳೂರಿನ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ರಾಜಕೀಯ ಪ್ರೇರಿತ ಎಂದು SDPI ಸಂಘಟನೆ ಆರೋಪಿಸಿದೆ.
ರಾತ್ರಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಿಢೀರ್ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿರುವ SDPI ಸಂಘಟನೆಯ ಮುಖಂಡರು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲರ ಕೆಲಸ. ನಿನ್ನೆ ರಾತ್ರಿ ನಡೆದಿರುವ ಘಟನೆ ರಾಜಕೀಯ ಪ್ರೇರಿತ. ನಮ್ಮ ಕಾರ್ಯಕರ್ತ ಮುಜಾಮಿಲ್‌ನನ್ನ ಟಾರ್ಗೆಟ್ ಮಾಡಿದ್ದಾರೆ. ಮುಜಾಮಿಲ್ ಪಾಷಾ ಈ ಗಲಭೆಯನ್ನು ಸೃಷ್ಟಿಸಿಲ್ಲ ಎಂದು ಸಂಘಟನೆ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ನಿರಾಕರಿಸಿದ್ದಾರೆ.
ಒಂದು ಧರ್ಮದ ಪ್ರವಾದಿಯನ್ನು ನಿಂದಿಸುವುದು ತಪ್ಪು. ಈ ಹಿಂದೆಯೂ ನವೀನ್, ಮುಸ್ಲಿಮರನ್ನು ನಿಂದಿಸಿದ್ದಾನೆ. ಈ ಬಗ್ಗೆ ದೂರು ನೀಡಿದ್ದರೂ ಸರಿಯಾಗಿ ಸ್ಪಂದಿಸಿರಲಿಲ್ಲ. ನಿನ್ನೆ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಕಾದಿದ್ದಾರೆ. ಠಾಣೆ ಎದುರು ನವೀನ್‌ನನ್ನು ಬಂಧಿಸುವಂತೆ ಆಗ್ರಹಿಸಿ ಕಾದಿದ್ದಾರೆ. ಆದ್ರೆ ರಾತ್ರಿ 8ಕ್ಕೆ ಡಿಸಿಪಿ ಶರಣಪ್ಪ ಎಫ್‌ಐಆರ್ ದಾಖಲಿಸಿದ್ರು ಎಂದು ಪೊಲೀಸರ ಮೇಲೆಯೇ ಆರೋಪ ಮಾಡಿದ್ದಾರೆ.
ಪತ್ರಿಕಾಗೊಷ್ಟಿಯಲ್ಲಿ ಇದ್ದ ಮತ್ತೊಬ್ಬ SDPI ಮುಖಂಡ ಮಂಗಳೂರು ಮೂಲದ ಇಲಿಯಾಸ್ ತುಂಬೆ, ನವೀನ್ ಎಂಬುವವನು ಬಹಳ ದಿನಗಳಿಂದ ಸಮುದಾಯದ ನಿಂದನೆ ಮಾಡುತ್ತಿದ್ದ. ಆದರೂ ಯಾಕೆ ಪೊಲೀಸರು ಪ್ರಕರಣ ದಾಖಲಿಸಿ ನವೀನ್ ನನ್ನು ಅರೆಸ್ಟ್ ಮಾಡಿರಲಿಲ್ಲ? ಪೊಲೀಸರ ನಿರ್ಲಕ್ಷ, ಗುಪ್ತಚರ ಮಾಹಿತಿ ಕೊರತೆಯಿಂದ ಘಟನೆ ನಡೆದಿದೆ ಎಂದು ಆರೋಪಿಸಿದ್ದಾನೆ.
Published On - 3:21 pm, Wed, 12 August 20