- Kannada News Photo gallery Cricket photos T20 World Cup Super 8: Abhishek Sharma's Struggles and India's Opening Woes
IND vs SA: ಸೊನ್ನೆ ಸುಳಿಯಿಂದ ಹೊರಬಂದರೂ ಪ್ರಯೋಜನಕ್ಕೆ ಭಾರದ ಅಭಿಷೇಕ್ ಶರ್ಮಾ
Abhishek Sharma's T20 World Cup 2026 Form: 2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೂಪರ್ 8 ಹಂತಕ್ಕೇರಿದರೂ, ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಸವಾಲಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಅವರು, ಸೂಪರ್ 8ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 15 ರನ್ ಗಳಿಸಿದರು. ಆದರೆ, ತಂಡಕ್ಕೆ ಅಗತ್ಯವಾದ ದೊಡ್ಡ ಇನ್ನಿಂಗ್ಸ್ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ಮುಂಬರುವ ಪಂದ್ಯಗಳಲ್ಲಿ ಭಾರತದ ಆರಂಭಿಕ ಜೋಡಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು.
Updated on: Feb 22, 2026 | 10:20 PM

2026 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಸೂಪರ್ 8 ರಲ್ಲಿ ಸ್ಥಾನ ಪಡೆದುಕೊಂಡಿತು. ಭಾರತೀಯ ತಂಡವು ಪ್ರತಿ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿತ್ತಾದರೂ ಕೆಲವು ಕ್ಷೇತ್ರಗಳಲ್ಲಿ ತಂಡದ ದೌರ್ಬಲ್ಯ ಜಗಜ್ಜಾಹೀರಾಗಿತ್ತು. ಅದರಲ್ಲಿ ಅತ್ಯಂತ ಮಹತ್ವದ ಅಂಶವೆಂದರೆ ಅಭಿಷೇಕ್ ಶರ್ಮಾ ಅವರ ಫಾರ್ಮ್. ಟಿ20 ವಿಶ್ವಕಪ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅಭಿಷೇಕ್ ತಮ್ಮ ಖಾತೆಯನ್ನು ತೆರೆದಿರಲಿಲ್ಲ.

2026 ರ ಟಿ20 ವಿಶ್ವಕಪ್‌ನ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಎಂಟು ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಗಳಿಸಲು ವಿಫಲರಾದರು. ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಅಭಿಷೇಕ್, ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ, ನಾಲ್ಕು ಎಸೆತಗಳನ್ನು ಎದುರಿಸಿ ರನ್ ಗಳಿಸಲು ವಿಫಲರಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ನಿರಾಶೆ ಮೂಡಿಸಿದ್ದರು.

ಹೀಗಾಗಿ ಸೂಪರ್ 8 ಸುತ್ತಿಗೂ ಮುನ್ನ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಈ ಸುತ್ತಿನಲ್ಲಿ ಅಭಿಷೇಕ್ ಹೇಗೆ ತಮ್ಮ ಹಳೆಯ ಲಯಕ್ಕೆ ಮರಳುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಅದೃಷ್ಟವಶಾತ್ ಅಭಿಷೇಕ್ ಈ ಪಂದ್ಯದಲ್ಲಿ ಖಾತೆ ತೆರೆದರಾದರೂ ತಂಡಕ್ಕೆ ಬೇಕಾಗುವಂತಹ ಇನ್ನಿಂಗ್ಸ್ ಆಡಲಿಲ್ಲ.

ಭಾರತ ತಂಡ ತನ್ನ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಪಂದ್ಯದಲ್ಲೂ ಭಾರತದ ಆರಂಭಿಕರ ಸೊನ್ನೆ ಸುತ್ತುವ ಕಯಾಲಿ ಮುಂದವರೆಯಿತು.

ಗುರಿ ಬೆನ್ನಟ್ಟಿದ ಭಾರತ ಮೊದಲ ಓವರ್ನಲ್ಲಿಯೇ ವಿಕೆಟ್ ಕಳೆದುಕೊಂಡಿತು. ಈ ಬಾರಿ ಆರಂಭಿಕ ಇಶಾನ್ ಕಿಶನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಅಭಿಷೇಕ್ ಶರ್ಮಾ ಬೌಂಡರಿ ಬಾರಿಸುವ ಮೂಲಕ ಈ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತಮ್ಮ ರನ್ ಖಾತೆ ತೆರೆದರು. ಇದು ಅಭಿಮಾನಿಗಳಿಗೆ ಸಂತಸ ತಂದಿತು.

ಆದರೆ ಅಭಿಷೇಕ್ ರನ್ ಖಾತೆ ತೆರೆದರಾದರೂ ರನ್ ಗಳಿಸಲು ಸಾಕಷ್ಟು ತಿಣುಕಾಡಿದರು. ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾದ ಅಭಿಷೇಕ್ನ ಕಟ್ಟಿಹಾಕುವಲ್ಲಿ ಆಫ್ರಿಕಾ ವೇಗಿಗಳು ಯಶಸ್ವಿಯಾದರು. ಹೀಗಾಗಿ ಒತ್ತಡಕ್ಕೊಳಗಾದ ಅಭಿಷೇಕ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 15 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

ಅಂದರೆ ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆದರಾದರೂ ತಂಡಕ್ಕೆ ಬೇಕಾದಂತಹ ಕೊಡುಗೆ ನೀಡುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಅಭಿಷೇಕ್ ಅವರಿಂದ ಒಂದೊಳ್ಳೆ ಇನ್ನಿಂಗ್ಸ್ನ ನಿರೀಕ್ಷೆ ಇಡಲಾಗಿತ್ತು. ಆದರೆ ಇದೀಗ ಅದು ಹುಸಿಯಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿಯಲ್ಲಿ ಬದಲಾವಣೆಗಳನ್ನು ಕಾಣುವ ಸಾಧ್ಯತೆಗಳಿವೆ.
