ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ವೈಶಿಷ್ಟ್ಯ ಏನು ಗೊತ್ತಾ? ಅವರ ರನ್ ಗಳಿಸಿದರೂ ಸುದ್ದಿಯಲ್ಲಿರುತ್ತಾರೆ ಹಾಗೆಯೇ ಅದನ್ನು ಗಳಿಸುವಲ್ಲಿ ವಿಫಲರಾದರೂ ಸಹ! ಈಗ ಅವರ ಕುರಿತಾಗಿ ಚರ್ಚೆಯೊಂದು ಆರಂಭವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ಮನ್, ಹೌದಾ? ನಾವು ಚರ್ಚೆ ಆರಂಭಿಸುವ ಮೊದಲು ಈ ರೇಸ್ನಲ್ಲಿ ಯಾರೆಲ್ಲ ಇದ್ದಾರೆ ಅನ್ನುವುದನ್ನು ಗಮನಿಸುವ. ರೋಹಿತ್ ಶರ್ಮ, ಡೇವಿಡ್ ವಾರ್ನರ್ ಆರನ್ ಫಿಂಚ್, ಮಾರ್ಟಿನ್ ಗಪ್ಟಿಲ್. ಇಂಗ್ಲೆಂಡ್ನ ಡೇವಿಡ್ ಮಲಾನ್ ಪ್ರಸ್ತುತವಾಗಿ ಟಿ20 ಕ್ರಿಕೆಟ್ ರ್ಯಾಂಕಿಂಗ್ಗಳಲ್ಲಿ ಮೊದಲ ಸ್ಥಾನದಲ್ಲಿದ್ದರೂ ಅವರು ಕೆಲವಷ್ಟೇ ಪಂದ್ಯಗಳನ್ನಾಡಿರುವುದರಿಂದ ಪರಿಗಣಿಸಿಲ್ಲ.
ಓಕೆ, ಈ ರೇಸ್ನಲ್ಲಿ ಕೊಹ್ಲಿಯನ್ನು ಉಳಿದವರಿಗಿಂತ ಮುಂದಿರಿಸಿರುವುದು ಟಿ20ಐ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್ಗೆ ಸಂಬಂಧಿಸಿದ ಅಂಕಿ-ಅಂಶಗಳು. ಅವುಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಈ ಫಾರ್ಮಾಟ್ನಲ್ಲಿ ಕೊಹ್ಲಿ ನಿಸ್ಸಂದೇಹವಾಗಿ ದೈತ್ಯ!
ಈ ಆವೃತ್ತಿಯ ಯಾವುದೇ ಅಯಾಮವನ್ನು ಗಮನಿಸಿ, ಟಾಪ್ನಲ್ಲಿ ನಿಮಗೆ ಕೊಹ್ಲಿ ಕಾಣಿಸುತ್ತಾರೆ. ವೈಯಕ್ತಿಕವಾಗಿ ಅತ್ಯಧಿಕ ರನ್ಗಳು (3.078ರನ್, 88 ಪಂದ್ಯಗಳಿಂದ), 50 ಕ್ಕಿಂತ (56.16) ಹೆಚ್ಚು ಸರಾಸರಿಯೊಂದಿಗೆ 1,000 ಕ್ಕಿಂತ ಜಾಸ್ತಿ ರನ್ ಗಳಿಸಿರುವ ವಿಶ್ವದ ಏಕೈಕ ಆಟಗಾರ, ಅತಿಹೆಚ್ಚು ಅರ್ಧ ಶತಕಗಳು (27), ಮತ್ತು ಅತಿ ಹೆಚ್ಚು ಬೌಂಡರಿಗಳು (278). ಆದರೆ ಈ ಅಂಕಿ-ಅಂಶಗಳು ಅವರ ಯಾವ ಪರಿಸ್ಥಿತಿಯಲ್ಲಿ ರನ್ ಗಳಿಸಿರಬಹುದೆನ್ನುವುದನ್ನು ವ್ಯಾಖ್ಯಾನಿಸುವುದಿಲ್ಲ. ಶರ್ಮ, ಗಪ್ಟಿಲ್ ಮತ್ತು ವಾರ್ನರ್ ಅವರಂತೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದಿಲ್ಲ. ಅವರ ಹೊಡೆತಗಳು ಸಾಂಪ್ರದಾಯಿಕ ಶೈಲಿಯವಾಗಿರುತ್ತವೆ, ಕ್ರಿಸ್ ಗೇಲ್ ಅಥವಾ ಅಯಾನ್ ಮೋರ್ಗನ್ ಅವರಂತೆ ಬಾಲನ್ನು ಗಾಳಿಯಲ್ಲಿ ಬಾರಿಸುವುದಿಲ್ಲ.
ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್ಮನ್ಗಳು ಆಕ್ರಮಣಕಾರಿ ಆಟವಾಡುತ್ತಾರೆ, ಪ್ರತಿ ಎಸೆತವನ್ನು ಬೌಂಡರಿಗಟ್ಟುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ರಿಸ್ಕ್ ಅಂಶ ಜಾಸ್ತಿಯಿರುತ್ತದೆ. ಆದರೆ, ಕೊಹ್ಲಿ ಈ ಆವೃತ್ತಿಯಲ್ಲೂ ಕ್ಲ್ಯಾಸಿಕಲ್ ಶೈಲಿಯಲ್ಲಿ ಆಡುತ್ತಾರೆ. ಪವರ್-ಹಿಟ್ಟಿಂಗ್, ಅಕ್ರಮಣಶೀಲತೆಯ ಮಂತ್ರದಲ್ಲಿ ಅವರಿಗೆ ವಿಶ್ವಾಸವಿಲ್ಲ. ಆದರೆ, ಗಮನಿಸಬೇಕಾದ ಆಂಶವೆಂದರೆ, ಟೆಸ್ಟ್ ಕ್ರಿಕೆಟ್ ಶ್ರೇಷ್ಠರೆನಿಸಿಕೊಂಡಿರುವ ಹಲವಾರು ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಯಂತೆ ಯಶ ಕಂಡಿಲ್ಲ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ಇದಕ್ಕೆ ಹೊರತಾಗಿದ್ದಾರೆ. ಕಿರು ಆವೃತ್ತಿಯಲ್ಲಿ ಅವರ ಸಾಕಷ್ಟು ಯಶ ಕಂಡಿದ್ದಾರೆ. ಅದರೆ ಉಳಿದ ಬ್ಯಾಟ್ಸ್ಮನ್ಗಳು ಮಾತ್ರ ಈ ವಿಷಯದಲ್ಲಿ ಬಹಳ ಹಿಂದುಳಿದಿದ್ದಾರೆ. ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ ವಿಕೆಟ್ ಉಳಿಸಿಕೊಳ್ಳುವತ್ತ ಗಮನ ನೀಡಿ ನಿರಾಯಸವಾಗಿ ರನ್ ಗಳಿಸುತ್ತಾರೆ. ಟೆಸ್ಟ್ ಪಂದ್ಯಗಳಲ್ಲಿನ ಹಾಗೆ ಗ್ಯಾಪ್ಗಳಲ್ಲಿ ಚೆಂಡನ್ನು ತಳ್ಳಿ ಸ್ಟ್ರೈಕ್ ರೋಟೇಟ್ ಮಾಡುವುದನ್ನು ಅವರಿಗಿಂತ ಚೆನ್ನಾಗಿ ಬೇರೆ ಯಾರೂ ಮಾಡಲಾರರು.
ಮಂಗಳವಾರದ ಪಂದ್ಯವನ್ನೇ ಒಮ್ಮೆ ಗಮನಿಸಿ. ಮೊದಲ 28 ರನ್ಗಳನ್ನು ಅವರು 29 ಎಸೆತಗಳಲ್ಲಿ ಗಳಿಸಿ ಮುಂದಿನ 49 ರನ್ಗಳನ್ನು ಕೇವಲ 19 ಎಸೆತಗಳಲ್ಲಿ ಬಾರಿಸಿದರು. ಕೇವಲ ಯುವರಾಜ ಸಿಂಗ್ ಮಾತ್ರ ಅವರಿಗಿಂತ ಉತ್ತಮ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. 2007 ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ನಲ್ಲಿ ಯುವಿ ಇಂಗ್ಲೆಂಡ್ ವಿರುದ್ಧ ಕೇವಲ 16 ಎಸೆತಗಳಲ್ಲಿ 58 ರನ್ ಬಾರಿಸಿದ್ದರು. ಅದೇ ಇನ್ನಿಂಗ್ಸ್ನಲ್ಲಿ ಅವರು ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್ನ ಎಲ್ಲ 6 ಎಸೆತಗಳನ್ನು ಸಿಕ್ಸರ್ಗೆ ಎತ್ತಿದ್ದು!
ವಿರಾಟ್ ಕೊಹ್ಲಿ ಆಡುವಾಗ ಬ್ಯಾಟಿಂಗ್ ಮಾಡೋದು ಇಷ್ಟು ಸುಲಭವಾ ಅನಿಸಿಬಿಡುತ್ತದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಅವರು ಸೊನ್ನೆಗೆ ಔಟಾದಾಗ ತೀವ್ರ ಟೀಕೆಗೊಳಗಾದರು. ಅವರ ಫಾರ್ಮನಲ್ಲಿಲ್ಲ ಎಂದು ಅನೇಕರು ಹೀಯಾಳಿಸಿದರು. ಆದರೆ, ಕೊಹ್ಲಿ ನಿಶ್ಚಿತವಾಗಿಯೂ ಬಹಳ ಗಟ್ಟಿ ಮನಸ್ಸಿನವರು. ಟೀಕೆ, ಹೀಯಾಳಿಕೆ ಅವರನ್ನು ಧೃತಿಗೆಡಿಸುವುದಿಲ್ಲ. ಪಂದ್ಯದ ನಂತರ ಅವರು ತಮ್ಮ ಆಪ್ತಮಿತ್ರ ಎಬಿಡಿ ವಿಲಿಯರ್ಸ್ ಅವರರೊಂದಿಗೆ ಮಾತಾಡಿ ಸಲಹೆಯನ್ನು ಕೇಳಿದಾಗ, ‘ಚೆಂಡಿನ ಮೇಲೆ ನಿಗಾ ಇರಲಿ’, ಎಂದು ಹೇಳಿದರಂತೆ. ಅವರ ಸಲಹೆಯನ್ನು ಅನೂಚಾನಾಗಿ ಪಾಲಿಸಿದ ಕೊಹ್ಲಿ ಎರಡನೇ ಪಂದ್ಯದಲ್ಲಿ ಮ್ಯಾಚ್ವಿನ್ನಿಂಗ್ ಅಜೇಯ 73 ರನ್ ಬಾರಿಸಿದರು.
ಪಂದ್ಯ ಮುಗಿದ ನಂತರ ಅವರು ಈ ವಿಷಯವನ್ನು ಹಂಚಿಕೊಳ್ಳುವಾಗ, ತಾವು ಬ್ಯಾಟಿಂಗ್ನ ಮೂಲ ಅಂಶಗಳ ಕಡೆಯೂ ಗಮನ ಹರಿಸಿದ್ದನ್ನು ಹೇಳಿದರು. ಕೊಹ್ಲಿಯಂಥ ಶ್ರೇಷ್ಠ ಆಟಗಾರರು ಪಿಚ್ನ ಸ್ವರೂಪ ಎಂಥದ್ದೇ ಅಗಿರಲಿ, ಸ್ಪಿನ್ ಇಲ್ಲವೇ ವೇಗದ ದಾಳಿಯಾಗಿರಲಿ, ಮೈದಾನ ದೊಡ್ಡದಿರಲಿ ಅಥವಾ ಚಿಕ್ಕದು-ಈ ಅಂಶಗಳನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡು ಟಿ20 ಕ್ರಿಕೆಟ್‌ನಲ್ಲಿ ಸಲೀಸಾಗಿ ರನ್ ಗಳಿಸುತ್ತಾರೆ.
ಹಾಗೆ ನೋಡಿದರೆ, ಚೇಸ್ ಮಾಡುವ ಪಂದ್ಯಗಳಲ್ಲಿ ಕೊಹ್ಲಿ ಸರ್ವಕಾಲಿಕ ಶ್ರೇಷ್ಠ ಅನಿಸುತ್ತಾರೆ. ಚೇಸ್ ಮಾಡುವ ಸಂದರ್ಭಗಳಲ್ಲಿ ಕನಿಷ್ಠ 20ಪಂದ್ಯಗಳಲ್ಲಿ ಜಯ ಗಳಿಸಿರುವ ಅಂಶವನ್ನು ಆಧಾರವಾಗಿಟ್ಟುಕೊಂಡು ವಿಶ್ವದ ಎಲ್ಲ ಬ್ಯಾಟ್ಸ್ಮನ್ಗಳ ಸಾಧನೆಯನ್ನು ಗಮನಿಸಿದ್ದೇಯಾದರೆ, ಕೊಹ್ಲಿ 31 ಗೆಲುವುಗಳನ್ನು, ನಂಬಲಸದಳ 108.3ರ ಸರಾಸರಿಯೊಂದಿಗೆ ಭಾರತಕ್ಕೆ ದೊರಕಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವವರು 29 ಗೆಲುವುಗಳಲ್ಲಿ ಭಾಗಿಯಾಗಿದ್ದು 72.54 ಸರಾಸರಿ ಹೊಂದಿರುವ ಭಾರತದ ಮಾಜಿ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ. ಇಂಗ್ಲೆಂಡ್ನ ಜೋಸ್ ಬಟ್ಲರ್ 71.85 ಸರಾಸರಿಯೊಂದಿಗೆ 21 ಗೆಲುವುಗಳಲ್ಲಿ ಭಾಗಿಯಾಗಿದ್ದಾರೆ. ಎರಡನೇ ಪಂದ್ಯದಲ್ಲಿ ಇಶಾನ್ ಕಿಷನ್ ಆಕ್ರಮಣಕಾರಿ ಆಟವಾಡಿ ಅರ್ಧ ಶತಕ ಗಳಿಸಿದ್ದರಿಂದ 164ರನ್ ಮೊತ್ತವನ್ನು ಚೇಸ್ ಮಾಡುವುದು ಕೊಹ್ಲಿಗೆ ಸುಲಭವಾಗಿದ್ದು ನಿಜ.
ಆದರೆ, 2016 ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ 160 ರನ್ಗಳನ್ನು ಬೆನ್ನಟ್ಟುವುದು ಸುಲಭವಾಗಿರಲಿಲ್ಲ. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ; ಶಿಖರ್ ಧವನ್, ರೋಹಿತ್ ಶರ್ಮ ಮತ್ತು ಸುರೇಶ್ ರೈನಾ ಅವರ ವಿಕೆಟ್ಗಳನ್ನು ಬೇಗ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆಯ 12 ಓವರ್ಗಳಲ್ಲಿ ಪ್ರತಿ ಓವರ್ಗೆ 9 ಕ್ಕಿಂತ ಜಾಸ್ತಿ ರನ್ ಗಳಿಸಬೇಕಿತ್ತು. ಕೊಹ್ಲಿ ಯಾವುದೇ ತೆರನಾದ ಆತುರ ತೋರದೆ, ವಿಕೆಟ್ ಮಧ್ಯೆ ಚುರುಕಾಗಿ ಓಡುತ್ತಾ, ತನ್ನ ನೆಚ್ಚಿನ ಕವರ್ ಡ್ರೈವ್ಗಳನ್ನು ಬಾರಿಸುತ್ತಾ ಇನ್ನೂ 5 ಎಸೆತಗಳಿರುವಂತೆಯೇ ಭಾರತಕ್ಕೆ ಜಯ ದೊರಕಿಸಿಕೊಟ್ಟರು. ಅಂದು ಅವರು 51 ಎಸೆತಗಳಲ್ಲಿ 92 ರನ್ ಬಾರಿಸಿ ಔಟಾಗದೆ ಉಳಿದರು. 2017ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 170 ರನ್ ಮೊತ್ತವನ್ನು ಚೇಸ್ ಮಾಡುವಾಗ ಅವರ 82 ರನ್ ಗಳಿಸಿದ್ದರು. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 207 ರನ್ ಚೇಸ್ ಮಾಡುವಾಗ 94 ರನ್ ಬಾರಿಸಿದ್ದರು. ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲೂ (ಐಪಿಎಲ್) ಕೊಹ್ಲಿ ತಮ್ಮ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಇಲ್ಲೂ ಅವರು ಅತ್ಯಧಿಕ ರನ್ ಗಳಿಸಿದ್ದಾರೆ (192 ಪಂದ್ಯಗಳಿಂದ 5,878). ಒಂದು ಋತುವಿನಲ್ಲಿ ಅತ್ಯಧಿಕ ರನ್ (973, 2016ಸೀಸನ್), 5 ಶತಕಗಳು (ಕೇವಲ ಕ್ರಿಸ್ ಗೇಲ್ ಅವರಿಗಿಂತ 1 ಶತಕ ಹೆಚ್ಚು ಬಾರಿಸಿದ್ದಾರೆ). ಈ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ, ಯಾಕೆ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಅನ್ನೋದು ವಿದಿತವಾಗುತ್ತದೆ. 2008 ಐಪಿಎಲ್ನಲ್ಲಿ 105 ಇದ್ದ ಅವರ ಸ್ಟ್ರೈಕ್ ರೇಟ್ 2016ರಲ್ಲಿ 152 ಆಗಿತ್ತು. ಅದರರ್ಥ ಅವರ ಅಡಾಪ್ಟೇಬಿಲಿಟಿ ಅಪ್ರತಿಮವಾಗಿದೆ. ಐಪಿಎಲ್ಗೆ ಹೊರತಾದ ಪಂದ್ಯಗಳಲ್ಲೂ ಅವರ ಸ್ಟ್ರೈಕ್ರೇಟ್ ಕ್ರಮೇಣ ಹೆಚ್ಚುತ್ತಲೇ ಸಾಗಿದೆ. 2018 ಒಂದನ್ನು ಬಿಟ್ಟರೆ 2016ರಿಂದ ಅವರ ಸ್ಟ್ರೈಕ್ರೇಟ್ ಯಾವತ್ತೂ 140 ಕ್ಕಿಂತ ಕೆಳಗಿಳಿದಿಲ್ಲ.
ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಂತೆ ಬ್ಯಾಟ್ ಮಾಡಿದರೂ ಅವರ ಸ್ಟ್ರೈಕ್ರೇಟ್ ಟೀಮಿನ ರನ್ರೇಟ್ ಕಡಿಮೆಯಾಗುವುದಿಲ್ಲ. ಕೇವಲ ಚೇಸ್ ಮಾಡುವಾಗ ಮಾತ್ರ ಅಂತಲ್ಲ, ಭಾರತ ಮೊದಲು ಬ್ಯಾಟ್ ಮಾಡುವಾಗಲೂ ಅವರು ವೇಗವಾಗಿ ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಲು ನೆರವಾಗುತ್ತಾರೆ.
ಈ ಅಂಶಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ನೋಡಿದರೆ, ಕೊಹ್ಲಿ ನಿಸ್ಸಂದೇಹವಾಗಿ ಟಿ20 ಕ್ರಿಕೆಟ್ನ ದೈತ್ಯ!
ಮುಂದೆಯೂ ಕೊಹ್ಲಿ ಭಾರತಕ್ಕೆ ಆನೇಕ ಪಂದ್ಯಗಳನ್ನು ಗೆದ್ದುಕೊಡಲಿರುವುದು ನಿಶ್ಚಿತ. ಅವರಲ್ಲಿ ಆ ಸಾಮರ್ಥ್ಯವಿದೆ. ಅವರನ್ನು ಟಿ20 ಕ್ರಿಕೆಟ್‌ನಲ್ಲಿ ಸರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್ಮನ್ ಎಂದು ಕರೆಯುವುದರಲ್ಲಿ ಅತಿಶಯೋಕ್ತಿ ಇದೆಯೇ? ಇಲ್ಲವೆನಿಸುತ್ತದೆ.
ಇದನ್ನೂ ಓದಿ: India vs England: ವೈಯಕ್ತಿಕ ಉದಾರಣೆಯೊಂದಿಗೆ ಟೀಮಿನ ಆತ್ಮವಿಶ್ವಾಸ ಹೆಚ್ಚಿಸಿರುವ ಕೊಹ್ಲಿ
Published On - 10:13 pm, Wed, 17 March 21