ಬೆಂಗಳೂರು: ಕಂದಾಯ ಸಚಿವ ಅಶೋಕ್ ಸ್ವಕ್ಷೇತ್ರದಲ್ಲೇ ಮಳೆರಾಯ ಭಾರಿ ಅವಾಂತರ ಸೃಷ್ಟಿಸಿದ್ದಾನೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ಮಳೆ ಬಂದಾಗಲೆಲ್ಲಾ ಸಮಸ್ಯೆ ಎದುರಾಗುತ್ತಿದೆ.
ಈ ಬಾರಿ ಸಹ ಹೊಸಕೆರೆಹಳ್ಳಿ ವಾರ್ಡ್‌ನ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಳೆದ 5 ವರ್ಷದಿಂದ ಸಮಸ್ಯೆಯಾಗ್ತಿದ್ದರೂ ಪರಿಹಾರ ಮಾತ್ರ ಇಲ್ಲ ಎಂದು ಸ್ಥಳೀಯರು ತಮ್ಮ ನೋವು ತೋಡಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸಲು ಸ್ಥಳೀಯರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಡೋಂಟ್ ಕೇರ್.
ಬಿಬಿಎಂಪಿ ಮತ್ತು BWSSB ಮಧ್ಯೆ ಸಮನ್ವಯತೆಯ ಕೊರತೆಯಿರುವ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ಪದೇ ಪದೆ ಅವಾಂತರಗಳು ಸೃಷ್ಟಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೊನ್ನೆ ಮಳೆ ಬಂದು ಸಾಕಷ್ಟು ಅವಾಂತರಗಳು ಎದುರಾಗಿತ್ತು. ಆಗ, ಸ್ಥಳಕ್ಕೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಭೇಟಿಕೊಟ್ಟು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಆದರೆ ಸಮಸ್ಯೆ ಬಗೆಹರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಜೊತೆಗೆ, ಮನೆಯ ಸಂಪ್‌ಗಳಲ್ಲಿ ಕೊಳಚೆ ನೀರು ಸೇರಿರುವ ಹಿನ್ನೆಲೆಯಲ್ಲಿ ಏರಿಯಾದಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದಿದೆ. ಎಲ್ಲರಿಗೂ ದಸರಾ ಹಬ್ಬದ ಸಂಭ್ರಮ, ನಮಗೆ ಮಾತ್ರ ಸ್ವಚ್ಛತೆ ಕೆಲಸ ಎಂದು ಸ್ಥಳೀಯರು ತಮ್ಮ ನೋವು ತೋಡಿಕೊಂಡರು.
ಇತ್ತ, ನಿನ್ನೆ ಸಂಜೆ ಸುರಿದ ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಅದರ ನೀರಿನಲ್ಲಿ ತೇಲಿಕೊಂಡು ಹೋಗಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಇಂದು ಪಕ್ಕದ ರಸ್ತೆಯಲ್ಲಿ ಪತ್ತೆಯಾಗಿದೆ. ಓವರ್ ಫ್ಲೋ ಆದ ರಾಜಕಾಲುವೆಯ ನೀರಿನ ರಭಸಕ್ಕೆ ಸಿಲುಕಿದ ಕಾರು ಪಕ್ಕದ ರೋಡಿಗೆ ತೇಲಿಕೊಂಡು ಬಂದಿದೆ. ಮಳೆಯ ರಭಸಕ್ಕೆ ಕಾರಿನಡಿ ಬೈಕ್ ಒಂದು ಸಿಲುಕಿರುವುದು ಸಹ ತಿಳಿದುಬಂದಿದೆ.
Published On - 8:55 am, Sat, 24 October 20