
ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ಮತ್ತು ಸಾಕು ಪ್ರಾಣಿಗಳ ಜೀವ ರಕ್ಷಕ ಅಂದ್ರೇ ವೆಟರ್ನರಿ ಡಾಕ್ಟರ್. ಆದ್ರೆ ವೈದ್ಯ ಮಹಾಶಯ ಮಾಡಿದ ಯಡವಟ್ಟಿಗೆ ಮೂಕ ಪ್ರಾಣಿಗಳು ಪ್ರಾಣತೆತ್ತ ಮನಕಲುಕುವ ಘಟನೆ ಬೆಳಗಾವಿಯಲ್ಲಿ ಸಂಭವಿಸಿದೆ.
ಹೌದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ಬಾಳೇಶ್ ಕೊಲೆಕರ್ ಎಂಬುವವರು ಉಸ್ಮಾನಬಾದಿ ತಳಿಯ ಐವತ್ತು ಮೇಕೆಗಳನ್ನ ಸಾಕಿದ್ದಾರೆ. ಆದ್ರೇ ಇದರಲ್ಲಿ ಹತ್ತು ಆಡುಗಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದವು. ಎರಡು ದಿನಗಳಿಂದ ಸೊಪ್ಪು ಕೂಡ ತಿನ್ನದೇ ಒದ್ದಾಡುತ್ತಿದ್ದ ಮೇಕೆಗಳಿಗೆ ಚಿಕಿತ್ಸೆ ಕೊಡಿಸಲು ಕೊಗನೊಳ್ಳಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿದ್ದ ವೈದ್ಯರನ್ನ ಕರೆದುಕೊಂಡು ಬಂದು ತಪಾಸಣೆ ಮಾಡಿಸಿದ್ದಾರೆ.
ಹೊಟ್ಟೆನೋವು ಬದಲು ಜಂತು ಔಷಧಿ ನೀಡಿದ ವೈದ್ಯ
ಹೀಗೆ ಚಿಕಿತ್ಸೆ ನೀಡಲು ಬಂದ ಆ ವೈದ್ಯ ಮಹಾಶಯ ಹೊಟ್ಟೆ ನೋವಿಗೆ ಚಿಕಿತ್ಸೆ ನೀಡುವುದನ್ನ ಬಿಟ್ಟು ಜಂತು ಆಗಿವೆ ಅಂತಾ ಜಂತಿನ ಔಷಧಿಯನ್ನ ಮೇಕೆಗಳಿಗೆ ನೀಡಿದ್ದಾರೆ. ಅದೂ ಹೈ ಡೋಸ್ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮೇಕೆಗಳಿಗೆ ಡೋಸ್ ನೀಡಿರುವುದು ಒಂದು ಕಡೆಯಾದ್ರೇ, ಅಸಲಿ ಖಾಯಿಲೆಗೆ ಔಷಧಿ ನೀಡುವುದು ಬಿಟ್ಟು ಇನ್ಯಾವುದೋ ಔಷಧಿಯನ್ನ ನೀಡಿದ್ದಕ್ಕೆ ಒಂದೇ ದಿನದಲ್ಲಿ ಹತ್ತು ಮೇಕೆಗಳು ಒದ್ದಾಡಿ ಪ್ರಾಣವನ್ನ ಬಿಟ್ಟಿವೆ.
ಮೂಕ ಪ್ರಾಣಿಗಳ ಸಾವಿನಿಂದ ಕಂಗಾಲಾದ ರೈತ
ಸಾವಿರಾರು ರೂಪಾಯಿ ಖರ್ಚು ಮಾಡಿ ಜೀವನಾಧಾರಕ್ಕೆಂದು ಸಾಕುತ್ತಿದ್ದ ಹತ್ತು ಮೇಕೆಗಳು ಸತ್ತು ಹೋಗಿದ್ದಕ್ಕೆ ಮಾಲೀಕ ಕಂಗಾಲಾಗಿದ್ದಾನೆ. ಅಷ್ಟೇ ಅಲ್ಲದೆ ಔಷಧಿ ಕುರಿತು ವೈದ್ಯರ ಬಳಿ ಕೇಳಿದ್ರೇ ನಾನು ನೀಡಿದ ಔಷಧಿಯಿಂದ ಸತ್ತಿಲ್ಲ ಇನ್ಯಾವುದಕ್ಕೋ ಸತ್ತಿವೆ ಎಂದು ಉಢಾಪೆ ಉತ್ತರ ನೀಡುತ್ತಿದ್ದಾರೆ. ಒಂದು ಮೇಕೆಗೆ ಐದು ಸಾವಿರ ರೂಪಾಯಿಯಂತೆ ಹತ್ತು ಮೇಕೆಗಳಿಗೆ ಐವತ್ತು ಸಾವಿರ ರೂಪಾಯಿಯಷ್ಟು ರೈತನಿಗೆ ನಷ್ಟವಾಗಿದೆ.
ಪಶುವೈದ್ಯನ ಯಡವಟ್ಟಿಗೆ ರೈತರಲ್ಲಿ ಆತಂಕ
ಈ ಬಗ್ಗೆ ತನ್ನ ಗೋಳನ್ನು ತೊಡಿಕೊಂಡಿರುವ ರೈತ, ವೈದ್ಯರ ನಿರ್ಲಕ್ಷ್ಯಕ್ಕೆ ಅವರ ಮೇಲಾಧಿಕಾರಿಗಲು ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಹಾಗೂ ತನಗೆ ಪಶು ಸಂಗೋಪನಾ ಇಲಾಖೆಯಿಂದ ಪರಿಹಾರ ಕೊಡಬೇಕು, ಇಲ್ಲದಿದ್ದರೆ ತಾನು ಹಾಗೂ ತನ್ನ ಕುಟುಂಬ ಸಂಕಷ್ಟದಲ್ಲಿ ಸಿಲುಕುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ವೆಟರ್ನರಿ ವೈದ್ಯರ ಬೇಜವಾಬ್ದಾರಿ ಮತ್ತು ಯಡವಟ್ಟು ಜಿಲ್ಲೆಯ ರೈತರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. -ಸಹದೇವ ಮಾನೆ
Published On - 8:55 pm, Tue, 21 July 20