ನಮ್ಮ ದೇಶದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಸಂಸ್ಥೆ ಟೆಸ್ಲಾ ಭಾರತಕ್ಕೆ ಕಾಲಿಡಲು ಸಿದ್ಧವಾಗಿದೆ. ಮುಂದಿನ ವರ್ಷದ ಆರಂಭದಿಂದ ಟೆಸ್ಲಾ ಬುಕಿಂಗ್ ಭಾರತದಲ್ಲಿ ಆರಂಭವಾಗಲಿದೆ. ಈ ಮೂಲಕ ಈ ಸಂಸ್ಥೆಯ ಕಾರು ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
ನಮ್ಮಲ್ಲಿ ಸಿಗುವ ಮಾಡೆಲ್ಗಳಾವವು?
ಟೆಸ್ಲಾ ಸಂಸ್ಥೆ ಈ ಮೊದಲಿನಿಂದಲೂ ಭಾರತದ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದೆ. 2016ರರಲ್ಲೇ ಸಂಸ್ಥೆ ಪ್ರೀ ಬುಕಿಂಗ್ ಆರಂಭಿಸಿತ್ತು. ಈ ವೇಳೆ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ, ವೂನಿಕ್ ಮುಖ್ಯಸ್ಥ ಸುಜಯತ್ ಅಲಿ, ಪಿನ್ಸ್ಟಾರ್ಮ್ ಮುಖ್ಯಸ್ಥ ಮಹೇಶ್ ಮೂರ್ತಿ ಟೆಸ್ಕಾ ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡಿದ್ದರು.
ಈಗ ದೊಡ್ಡ ಪ್ರಮಾಣದಲ್ಲಿ ಬುಕಿಂಗ್ ಆರಂಭಗೊಂಡಿದೆ. ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ 3 ಲಭ್ಯವಾಗುತ್ತಿದೆ. ಜನವರಿಯಲ್ಲಿ ಬುಕಿಂಗ್ ಆರಂಭಗೊಳ್ಳಲಿದ್ದು, ನಂತರದ ಮೂರು ತಿಂಗಳ ಒಳಗಾಗಿ ಕಾರು ಡೆಲಿವರಿ ಸಿಗುವ ಸಾಧ್ಯತೆ ಇದೆ.
ಭಾರತದಲ್ಲಿ ಟೆಸ್ಲಾ ಘಟಕ?
ಭಾರತದ ಕಾರು ಮಾರುಕಟ್ಟೆ ದಿನೇ ದಿನೇ ದೊಡ್ಡದಾಗಿ ಬೆಳೆಯುತ್ತಿದೆ. ಜನರು ಎಲೆಕ್ಟ್ರಿಕ್ ಕಾರಿನತ್ತ ಒಲವು ತೋರುತ್ತಿದ್ದಾರೆ. ಈ ಕಾರಣಕ್ಕೆ ಟೆಸ್ಲಾ ಭಾರತದಲ್ಲಿ ಕಾರು ನಿರ್ಮಾಣ ಘಟಕ ಸ್ಥಾಪಿಸುವ ಆಲೋಚನೆ ಇಟ್ಟುಕೊಂಡಿದೆ. ಇದಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
ಮಾಡೆಲ್ 3 ವಿಶೇಷತೆ ಏನು?
ಮಾಡೆಲ್ 3 ಟೆಸ್ಲಾದ ಪ್ರಾಥಮಿಕ ಮಾದರಿಯಾಗಿದೆ. ಈ ಕಾರಿನ ಬ್ಯಾಟರಿ ಗಾತ್ರ 50 kWh ನಿಂದ 75 kWh ಇದೆ. ಈ ಕಾರು ಸದ್ಯ ಸ್ಟ್ಯಾಂಡರ್ಡ್ ರೇಂಜ್ (RWD), ಸ್ಟ್ಯಾಂಡರ್ಡ್ ರೇಂಜ್ ಪ್ಲಸ್ (RWD), ಲಾಂಗ್ ರೇಂಜ್ (AWD) ಮತ್ತು ಲಾಂಗ್ ರೇಂಜ್ ಪರ್ಫಾರ್ಮೆನ್ಸ್ (AWD) ವಿಧದಲ್ಲಿ ಲಭ್ಯವಿದೆ. ಒಮ್ಮೆ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದರೆ, 381-580 ಕಿ.ಮೀವರೆಗೆ ಚಲಿಸಬಹುದಾಗಿದೆ. ಈ ಲಕ್ಸುರಿ ಕಾರಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 55 ಲಕ್ಷ ರೂಪಾಯಿ.
ಧರ್ಮಸ್ಥಳದ ದೇಸಿ ಕಾರ್ ಮುಂದೆ ಟೆಸ್ಲಾದ ಎಲೆಕ್ಟ್ರಿಕ್ ಕಾರೂ ಮಂಡಿಯೂರುವುದೇ! ಕಾಲೆಳೆದ ಆನಂದ್ ಮಹೀಂದ್ರಾ
Published On - 3:02 pm, Sun, 27 December 20