ಜಗತ್ತೇ ಬದಲಾಗಿದೆ, ಬದಲಾಗುತ್ತಿದೆ. ಈ ಬದಲಾವಣೆಯ ಪ್ರಮಾಣ ಎಷ್ಟೆಂದರೆ ನಿನ್ನೆ ಇರುವುದು ಇಂದಿಲ್ಲ, ಈಗಿರುವುದು ನಾಳೆಯಿಲ್ಲ. ಮೊದಲೊಂದು ಕಾಲವಿತ್ತು. ಒಂದು ಸಭೆ ಎಂದರೆ ಅದಕ್ಕೊಂದು ಘನತೆ, ಗೌರವ. ಸಭೆಗೆ ಹಾಜರಾಗುವವರು ಶಿಸ್ತಿನ ಸಿಪಾಯಿಗಳ ಪ್ರತಿರೂಪದಂತೆಯೇ ಭಾಸವಾಗುತ್ತಿದ್ದರೆ. ಆದರೆ ಈಗ? ಸಭೆಯೂ ಮನೆಯಲ್ಲೇ ನಡೆಯುತ್ತದೆ. ಮನೆಯಲ್ಲಿ ನಡೆಯುವ ಸಭೆಯಲ್ಲಿ ಮನೆಯವರೂ ಭಾಗವಹಿಸುತ್ತಾರೆ. ಇದೊಂದು ಅವಕಾಶವೂ ಹೌದು, ಅಯ್ಯೋ! ಅಂತೆಯೇ, ಈಗಿನ ವರ್ಚುವಲ್ ಮೀಟಿಂಗ್ಗಳು ಚಿತ್ರವಿಚಿತ್ರ ಘಟನೆಗಳು ನಡೆಯುವಂತಹ ಸ್ಥಳವೂ ಹೌದು. ಒಮ್ಮೊಮ್ಮೆ ವರ್ಚುವಲ್ ಮೀಟಿಂಗ್ಗಳಲ್ಲಿ ಆಗುವ ಘಟನೆಗಳು ಊಹಿಸಿಕೊಳ್ಳಲೂ ಆಗದ್ದಂತದ್ದು!
ಆರ್ಪಿಜಿ ದೇಶದ ಬಹು ಖ್ಯಾತ ಉದ್ಯಮ ಸಂಸ್ಥೆ. ಈ ಸಂಸ್ಥೆಯನ್ನು ಸದ್ಯ ಮುನ್ನಡೆಸುತ್ತಿರುವವರು ಹರ್ಷ ಗೋಯೆಂಕಾ. ಆರ್ಪಿಜಿ ಎಂದೇ ಖ್ಯಾತವಾದ ರಾಮ ಪ್ರಸಾದ್ ಗೋಯಂಕಾ ಎಂಟರ್ಪ್ರೈಸಸ್ನ ಮುಖ್ಯಸ್ಥ ಹರ್ಷ ಗೋಯೆಂಕಾ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ? ಅವರ ಟ್ವೀಟ್ ವರ್ಚುವಲ್ ಸಭೆಗಳಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೆ ಸಂಬಂಧಿಸಿದ್ದೇ ಆಗಿದೆ. ಏನದು? ಈ ಸ್ಟೋರಿ ಓದಿ.
ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಕುಳಿತು ಝೂಮ್ ಮೀಟಿಂಗ್ನಲ್ಲಿ ನಿರತನಾಗಿದ್ದ. ಮನೆಯಲ್ಲಿ ಕುಳಿತಾಗ ಮನೆಯವರ ಮಾತು ಕೇಳದಂತೆ, ಮನೆಯವರು ಫ್ರೇಮ್ನಲ್ಲಿ ಬರದಂತೆ ನೋಡಿಕೊಳ್ಳಬೇಕು ತಾನೇ? ಆದರೆ ಈ ಪುಣ್ಯಾತ್ಮ ಅದನ್ನು ಮರೆತಿದ್ದ. ಝೂಮ್ ಮೀಟಿಂಗ್ನಲ್ಲಿ ಇದ್ದಾಗಲೇ ಈತನ ಮುದ್ದಿನ ಹೆಂಡತಿ ಫ್ರೇಮ್ನಲ್ಲಿ ಕಾಣಿಸಿಕೊಂಡಳು. ಕೇವಲ ಕಾಣಿಸಿಕೊಂಡಿದ್ದರೆ ಪರವಾಗಿರಲಿಲ್ಲ. ತನ್ನ ಪತಿರಾಯನ ಮೇಲೆ ಪ್ರೀತಿ ಉಕ್ಕಿ ಬಂದು ತನ್ನ ಕೆಂದುಟಿಗಳಿಂದ (?) ಆತನಿಗೆ ಚುಂಬನದ ಮಳೆ ಸುರಿಸಲು ಮುಂದಾಗಿದ್ದಳು! ಪಾಪ..ತನ್ನ ಪಾಡಿಗೆ ತಾನು ಮೀಟಿಂಗ್ ನಲ್ಲಿದ್ದ ಪತಿ ಒಂದು ಕ್ಷಣಕ್ಕೆ ಗಾಬರಿಬಿದ್ದುಹೋದ. ಆಗಿಂದಾಗಲೇ ಹೆಂಡತಿಯ ಮುಖಾರವಿಂದವನ್ನು ಕಂಪ್ಯೂಟರ್ ಫ್ರೇಮ್ನಿಂದ ಆಚೆಗೆ ಸರಿಸಿ ತಾನು ಮೀಟಿಂಗ್ನಲ್ಲಿರುವುದಾಗಿ ಭಿನ್ನವಿಸಿದ. ಆದರೆ ಅಲ್ಲಿಯವರೆಗಿನ ಈ ಪ್ರಹಸನ ಝೂಮ್ನಲ್ಲಿ ದಾಖಲಾಗಿತ್ತು. ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ ಹರ್ಷ ಗೋಯೆಂಕಾ.
Zoom call …..so funny ? ??pic.twitter.com/6SV62xukMN
— Harsh Goenka (@hvgoenka) February 19, 2021
ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ತುಣುಕನ್ನು ಮರು ಶೇರ್ ಮಾಡಿದ್ದಾರೆ ಮಹೇಂದ್ರಾ ಆ್ಯಂಡ್ ಮಹೇಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೇಂದ್ರಾ. ಪ್ರೇಮವುಕ್ಕಿ ಝೂಮ್ ಮೀಟಿಂಗ್ ಮಧ್ಯೆಯೇ ಮುದ್ದಿನ ಮಾಲೆ ಹಾಕಲು ಅತ್ಯುತ್ಸಾಹದಿಂದ ಧಾವಿಸಿದ ಈತನ ಪತ್ನಿಗೆ ‘ವರ್ಷದ ಪತ್ನಿ’ ಎಂಬ ಬಿರುದು ನೀಡಬಹುದು ಎಂದು ಅವರು ಕುಚೋದ್ಯ ಮಾಡಿದ್ದಾರೆ. ಪತಿಯೂ ಅವಳಿಗೆ ಸಹಕರಿಸಿದ್ದರೆ ಇಬ್ಬರಿಗೂ ‘ವರ್ಷದ ದಂಪತಿ’ ಪ್ರಶ್ಸ್ತಿ ನೀಡಬಹುದಿತ್ತು ಎಂದು ತಮಾಶೆಯಿಂದ ಕಾಲೆಳೆದಿದ್ದಾರೆ ಆನಂದ್ ಮಹೇಂದ್ರಾ.
Haha. I nominate the lady as the Wife of the Year. And if the husband had been more indulgent and flattered, I would have nominated them for Couple of the Year but he forfeited that because of his grouchiness! @hvgoenka https://t.co/MVCnAM0L3W
— anand mahindra (@anandmahindra) February 19, 2021
ಈಘಟನೆ ಕುರಿತು ಪ್ರೇಮಿಗಳ ಸಂಘದ ರಾಷ್ಟ್ರಾಧ್ಯಕ್ಷರು ‘ಪ್ರೀತಿಯಲ್ಲಿ ಪರವಶವಾದ ದಂಪತಿಗೆ ಕಾಲವುಂಟೆ ಘಳಿಗೆಯುಂಟೇ? ಜಗದ ವಿದ್ಯಮಾನಗಳನ್ನು ಮರೆತು ಎಂದಿಗೂ ಪ್ರೇಮ; ಎಂದೆಂದಿಗೂ ಪ್ರೇಮ ಎಂದು ಹಾಡುತ್ತ ಪರಸ್ಪರ ಮಧುರವಾದ ಚುಂಬನವಿತ್ಯಾದಿ ಕ್ರಿಯೆಗಳಲ್ಲಿ ನಿರತರಾಗುವುದೇ ತಮ್ಮ ಪಾಲಿನ ಪ್ರಪಂಚ’ ಎಂದು ಗಾಸಿಪ್ ಬ್ಯೂರೋಗೆ ಪ್ರತಿಕ್ರಿಯಿಸಿದ್ದಾರೆ!
ಇದನ್ನೂ ಓದಿ: 365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ
Valentine’s Day: ನಿರಂತರವಾಗಿ ಹರಿವ ಪ್ರೇಮದ ತೊರೆಯಲ್ಲಿ ಮಿಂದೇಳುತ್ತಲೇ ಇರೋಣ.. ಧನ್ಯವಾದ ಓದುಗರೇ
Published On - 6:09 pm, Sat, 20 February 21