ಆಲ್ಝೈಮರ್ (Alzheimer’s) ಕಾಯಿಲೆ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಒಂದು ವ್ಯಾಪಕವಾದ ನ್ಯೂರೋ ಡಿಜೆನೆರೆಟಿವ್ ರೋಗವಾಗಿದೆ. ವಯಸ್ಸಾದ ಜನರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಜೀವನಶೈಲಿಗೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆಯೇ ಎಂಬುದನ್ನು ಕಂಡುಹಿಡಿಯಲು ಹಲವು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಆಲ್ಝೈಮರ್ ರೋಗ ವಯಸ್ಸಾದವರ ಮೇಲೆ ಗಣನೀಯ ಸವಾಲುಗಳನ್ನು ಒಡ್ಡುತ್ತದೆ. ಈ ಸಮಸ್ಯೆ ಉಂಟಾದರೆ ಜನರ ನೆನಪಿನ ಶಕ್ತಿ ಕ್ಷೀಣಿಸುತ್ತದೆ, ಅವರು ಕುಟುಂಬಕ್ಕೆ ಹೊರೆಯಾಗುತ್ತಾರೆ.
ಆಹಾರದ ಆಯ್ಕೆಗಳು ಮುಖ್ಯ:
ಅರಿವಿನ ಆರೋಗ್ಯದ ಮೇಲೆ ಆಹಾರದ ಪ್ರಭಾವವು ಆಲ್ಝೈಮರ್ನ ಸಂಶೋಧನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಆಹಾರದ ಮಾದರಿಗಳು ಆಲ್ಝೈಮರ್ನ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಭಾರತದಲ್ಲಿ ಬಳಸುವ ಸಾಂಪ್ರದಾಯಿಕ ಆಹಾರಗಳು ಹೆಚ್ಚಾಗಿ ಸಸ್ಯ ಆಧಾರಿತವಾಗಿದ್ದು, ವಿವಿಧ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಸೇವಿಸಲಾಗುತ್ತದೆ. ಈ ಆಹಾರಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳು ಸಮೃದ್ಧವಾಗಿವೆ. ಇದು ಆಲ್ಝೈಮರ್ನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೆದುಳನ್ನು ಚುರುಕುಗೊಳಿಸಿ, ಏಕಾಗ್ರತೆ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು?
ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಕ್ಕರೆ ಅಂಶವಿರುವ ಹೆಚ್ಚಿನ ಆಹಾರಗಳು, ಹೆಚ್ಚಾಗಿ ಅರಿವಿನ ಕುಸಿತದ ಅಪಾಯವನ್ನು ಹೆಚ್ಚಿಸುತ್ತವೆ. ನಗರ ಪ್ರದೇಶಗಳಲ್ಲಿ ಸಂಸ್ಕರಿಸಿದ ಮತ್ತು ತ್ವರಿತ ಆಹಾರಗಳ ಹರಡುವಿಕೆಯು ಸ್ಥೂಲಕಾಯತೆ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಆಲ್ಝೈಮರ್ನ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಹೀಗಾಗಿ, ಸಾಂಪ್ರದಾಯಿಕ, ಸ್ಥಳೀಯವಾಗಿ ಬೆಳೆದ ಆಹಾರಗಳನ್ನು ಸೇವಿಸುವುದು ಮತ್ತು ಸಂಸ್ಕರಿಸಿದ ಆಹಾರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಅಗತ್ಯ.
ವ್ಯಾಯಾಮ ಮಾಡಿ:
ಆಲ್ಝೈಮರ್ ರೋಗದ ಅಪಾಯದ ಮೇಲೆ ಆಹಾರದ ಪ್ರಭಾವವು ಮಹತ್ವದ್ದಾಗಿದ್ದರೂ, ದೈಹಿಕ ಚಟುವಟಿಕೆಯ ಪಾತ್ರ ಕೂಡ ಇಲ್ಲವೆಂದೇನಿಲ್ಲ. ಹೃದಯ ಬಡಿತವನ್ನು ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಬಹುದು. ಇದು ಮೆದುಳಿನಲ್ಲಿ ಹೊಸ ನ್ಯೂರಾನ್ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವ್ಯಾಯಾಮದ ಈ ನ್ಯೂರೋಪ್ರೊಟೆಕ್ಟಿವ್ ಅಂಶವು ಆಲ್ಝೈಮರ್ ಅಪಾಯವನ್ನು ಕಡಿಮೆ ಮಾಡಲು ಬಹಳ ಕೊಡುಗೆ ನೀಡುತ್ತದೆ.
ಮಾನವ ಸಂಪರ್ಕ:
ಒಂಟಿಯಾಗಿರುವುದರಿಂದ ಮಾನಸಿಕ ಆರೋಗ್ಯ ಹದಗೆಡುವ ಅಪಾಯ ಜಾಸ್ತಿ. ಹೀಗಾಗಿ, ಗೆಳೆಯರೊಂದಿಗೆ, ಸಂಬಂಧಿಕರೊಂದಿಗೆ ಸಂಪರ್ಕದಲ್ಲಿ ಇರುವುದರಿಂದ ಮನಸು ಚಟುವಟಿಕೆಯಿಂದಿರುತ್ತದೆ. ಹೀಗಾಗಿ, ಒಂಟಿಯಾಗಿರುವ ಬದಲು ಗುಂಪಿನಲ್ಲಿರುವುದು ಅಗತ್ಯ.
ಆಲ್ಝೈಮರ್ ಕಾಯಿಲೆಯು ಮೆದುಳಿನ ಅಸ್ವಸ್ಥತೆಯಾಗಿದ್ದು, ಅದು ನೆನಪಿನ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯಗಳನ್ನು ನಿಧಾನವಾಗಿ ನಾಶಪಡಿಸುತ್ತದೆ. ಕೊನೆಗೆ ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡುವ ಸಾಮರ್ಥ್ಯವೂ ಇಲ್ಲದಂತೆ ಮಾಡುತ್ತದೆ. ಈ ರೋಗ ಇರುವ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ 60 ವರ್ಷವಾದ ನಂತರ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು 30ರಿಂದ 60 ವರ್ಷದ ನಡುವೆ ಆಲ್ಝೈಮರ್ ಲಕ್ಷಣಗಳು ಗೋಚರಿಸುತ್ತವೆ. ಆದರೆ, ಇದು ಬಹಳ ಅಪರೂಪ. ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆಯ ಸಾಮಾನ್ಯ ಕಾರಣವೆಂದರೆ ಆಲ್ಝೈಮರ್ ಕಾಯಿಲೆ.
ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿದ 5 ಜ್ಯೂಸ್ಗಳು ಇಲ್ಲಿವೆ
ಆಲ್ಝೈಮರ್ ಕಾಯಿಲೆಯ ಲಕ್ಷಣಗಳೆಂದರೆ, ಬೇರೆಯವರೊಂದಿಗೆ ಮಾತನಾಡಲು ತೊಂದರೆಯಾಗುವುದು, ಇತ್ತೀಚಿನ ಅನುಭವಗಳು ಅಥವಾ ಸುತ್ತಮುತ್ತಲಿನವರ ಬಗ್ಗೆ ನೆನಪಿಲ್ಲದಿರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಹಲ್ಲಿನ, ಚರ್ಮದ ಮತ್ತು ಕಾಲಿನ ಸಮಸ್ಯೆಗಳು ಹೆಚ್ಚಾಗುವುದು, ನುಂಗಲು ತೊಂದರೆಯಾಗುವುದು, ನರಳುವುದು, ಹೆಚ್ಚು ನಿದ್ರೆ ಮಾಡುವುದು.
ಈ ರೋಗಕ್ಕೆ ಡಾ. ಅಲೋಯಿಸ್ ಆಲ್ಝೈಮರ್ ಅವರ ಹೆಸರನ್ನು ಇಡಲಾಗಿದೆ. 1906ರಲ್ಲಿ ಡಾ. ಆಲ್ಝೈಮರ್ ಅಸಾಮಾನ್ಯ ಮಾನಸಿಕ ಅಸ್ವಸ್ಥತೆಯಿಂದ ಸಾವನ್ನಪ್ಪಿದ ಮಹಿಳೆಯ ಮೆದುಳಿನ ಅಂಗಾಂಶದಲ್ಲಿನ ಬದಲಾವಣೆಗಳನ್ನು ಗಮನಿಸಿದರು. ಆಕೆಯ ರೋಗಲಕ್ಷಣಗಳು ನೆನಪಿನ ಶಕ್ತಿಯ ಕೊರತೆ, ಭಾಷಾ ಸಮಸ್ಯೆಗಳು ಮತ್ತು ಅನಿರೀಕ್ಷಿತ ನಡವಳಿಕೆಯನ್ನು ಒಳಗೊಂಡಿತ್ತು. ಆಕೆ ಸತ್ತ ನಂತರ ಡಾ. ಆಲ್ಝೈಮರ್ ಆಕೆಯ ಮೆದುಳನ್ನು ಪರೀಕ್ಷಿಸಿದರು. ಅದರಲ್ಲಿ ಅನೇಕ ಅಸಹಜ ಕ್ಲಂಪ್‌ಗಳನ್ನು (ಈಗ ಅಮಿಲಾಯ್ಡ್ ಪ್ಲೇಕ್‌ಗಳು ಎಂದು ಕರೆಯಲಾಗುತ್ತದೆ) ಮತ್ತು ಫೈಬರ್‌ಗಳ ಟ್ಯಾಂಗಲ್ಡ್ ಬಂಡಲ್‌ಗಳನ್ನು (ಈಗ ನ್ಯೂರೋಫಿಬ್ರಿಲರಿ ಅಥವಾ ಟೌ, ಟ್ಯಾಂಗಲ್ಸ್ ಎಂದು ಕರೆಯಲಾಗುತ್ತದೆ) ಕಂಡುಹಿಡಿದರು.
ಮೆದುಳಿನಲ್ಲಿರುವ ಈ ಪ್ಲೇಕ್‌ಗಳು ಮತ್ತು ಗೋಜಲುಗಳನ್ನು ಈಗಲೂ ಆಲ್ಝೈಮರ್ ಕಾಯಿಲೆಯ ಕೆಲವು ಮುಖ್ಯ ಲಕ್ಷಣಗಳೆಂದು ಪರಿಗಣಿಸಲಾಗಿದೆ. ಮತ್ತೊಂದು ವೈಶಿಷ್ಟ್ಯವೆಂದರೆ ಮೆದುಳಿನಲ್ಲಿರುವ ನರ ಕೋಶಗಳ (ನ್ಯೂರಾನ್) ನಡುವಿನ ಸಂಪರ್ಕಗಳ ಸಮಸ್ಯೆಯಾಗುವುದು. ನರಕೋಶಗಳು ಮೆದುಳಿನ ವಿವಿಧ ಭಾಗಗಳ ನಡುವೆ ಸಂದೇಶಗಳನ್ನು ರವಾನಿಸುತ್ತವೆ. ಮೆದುಳಿನಿಂದ ದೇಹದ ಸ್ನಾಯುಗಳು ಮತ್ತು ಅಂಗಗಳಿಗೆ ಸಂದೇಶಗಳನ್ನು ತಲುಪಿಸುತ್ತವೆ. ಅನೇಕ ಇತರ ಸಂಕೀರ್ಣ ಮೆದುಳಿನ ಬದಲಾವಣೆಗಳು ಆಲ್ಝೈಮರ್ ರೋಗದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ