
ಬಡತನವು (poverty) ಜಾಗತಿಕ ಸಮಸ್ಯೆಯಾಗಿದ್ದು, ಇದರ ನಿರ್ಮೂಲನೆಗಾಗಿ ಪ್ರತಿಯೊಂದು ದೇಶದ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಭಿವೃದ್ಧಿಯನ್ನು ಸಾಧಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಈ ಪ್ರಯತ್ನಗಳ ಫಲವಾಗಿ ಇಂದು ಹಲವು ರಾಷ್ಟ್ರಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆಯುತ್ತಿವೆ, ಆ ದೇಶಗಳ ಆರ್ಥಿಕತೆಯು ಸುಧಾರಿಸುತ್ತಿದೆ. ಆದರೆ ಈ ಒಂದು ದೇಶ ಮಾತ್ರ ಇಂದಿಗೂ ಕಡು ಬಡತನದಲ್ಲೇ ಇದೆ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಈ ದೇಶವು ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಜನರು ಬದುಕಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಹ ಹೆಣಗಾಡುತ್ತಿದ್ದಾರೆ. ಅಷ್ಟಕ್ಕೂ ವಿಶ್ವದ ಆ ಬಡ ರಾಷ್ಟ್ರ ಯಾವುದು? ಅಲ್ಲಿನ ಬಡತನಕ್ಕೆ ಮೂಲ ಕಾರಣವೇನು ಎಂಬುದನ್ನು ನೋಡೋಣ ಬನ್ನಿ.
ಪೂರ್ವ ಆಫ್ರಿಕಾದಲ್ಲಿರುವ ಬುರುಂಡಿ, ವಿಶ್ವದ ಅತ್ಯಂತ ಬಡ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ದೇಶವು ಸುಮಾರು 12 ಮಿಲಿಯನ್ ನಷ್ಟು ಜನಸಂಖ್ಯೆಯನ್ನು ಹೊಂದಿದ್ದು, ಇದರಲ್ಲಿ ಶೇ. 85 ರಷ್ಟು ಜನರು ಇಂದಿಗೂ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ವಾರ್ಷಿಕ ಆದಾಯ ವರ್ಷಕ್ಕೆ 180 ಡಾಲರ್, ಅಂದರೆ ಸುಮಾರು 15 ಸಾವಿರ ರೂಪಾಯಿಗಳು. ಪ್ರತಿ 3 ಜನರಲ್ಲಿ ಒಬ್ಬರು ಇಲ್ಲಿ ನಿರುದ್ಯೋಗಿಗಳಾಗಿದ್ದು, ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದರೂ ಜನರು ದಿನಕ್ಕೆ 50 ರೂಪಾಯಿ ಗಳಿಸಲು ಸಾಧ್ಯವಾಗುತ್ತಿಲ್ಲ. ಬುರುಂಡಿಯಲ್ಲಿ ಶಿಶು ಮರಣ ಪ್ರಮಾಣವು ಹೆಚ್ಚಿದ್ದು, ಪ್ರತಿ 1,000 ಶಿಶುಗಳಲ್ಲಿ 87 ಶಿಶುಗಳು ಮರಣ ಹೊಂದುತ್ತಿವೆ. ಇದು ವಿಶ್ವದ ಸರಾಸರಿ ಶಿಶು ಮರಣ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಇಲ್ಲಿ ಜನರಿಗೆ ಸಾಕಷ್ಟು ಆಹಾರವೂ ಸಿಗುತ್ತಿಲ್ಲ. ಇಲ್ಲಿನ ಸಾಕ್ಷರತಾ ಪ್ರಮಾಣವೂ ತುಂಬಾ ಕಡಿಮೆಯಿದೆ. ಈ ದೇಶದಲ್ಲಿ ಮೂಲಭೂತ ಸೌಕರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಕೊರತೆಯಿದೆ. ಇದಲ್ಲದೆ, ಆರ್ಥಿಕತೆಯು ತುಂಬಾ ದುರ್ಬಲವಾಗಿದೆ.
ಬುರುಂಡಿಯಲ್ಲಿ ಯಾವುದೇ ಕೈಗಾರಿಕೆ ಇಲ್ಲ, ಆದ್ದರಿಂದ ಜನಸಂಖ್ಯೆಯ 70 ಪ್ರತಿಶತ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ದೇಶದ ಹೆಚ್ಚಿನ ಜನರ ಜೀವನೋಪಾಯ ಕೃಷಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿನ ಜನರು ತಮ್ಮ ಸ್ವಂತ ಅಗತ್ಯಗಳಿಗಾಗಿ ಮಾತ್ರ ಕೃಷಿ ಮಾಡುತ್ತಾರೆ. ಹವಾಮಾನ ಬದಲಾವಣೆ, ಬರಗಾಲ ಇವೆಲ್ಲವೂ ಇಲ್ಲಿನ ಕೃಷಿಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿವೆ. ಒಂದೆಡೆ, ಜಗತ್ತು ಚಂದ್ರಯಾನ, ಮಂಗಳಯಾನದಂತಹ ಯೋಜನೆಗಳನ್ನು ರೂಪಿಸುತ್ತಿದ್ದರೆ, ಬುರುಂಡಿಯಲ್ಲಿ ಜನ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಹ ಪರದಾಡುತ್ತಿದ್ದಾರೆ.
ಹಿಂದೆ, ಬ್ರಿಟನ್ ಮತ್ತು ಅಮೆರಿಕ ಈ ದೇಶವನ್ನು ಆಳುತ್ತಿದ್ದವು. ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು, ಆದರೆ 1996 ನಂತರ ಪರಿಸ್ಥಿತಿ ಹದಗೆಟ್ಟಿತು. ಜನಾಂಗೀಯ ಸಂಘರ್ಷವೇ ಇದಕ್ಕೆ ಮುಖ್ಯ ಕಾರಣ. ಪ್ರಮುಖ ಬುಡಕಟ್ಟು ಜನಾಂಗಗಳಾದ ಟ್ವಾ, ಟುಟ್ಸಿ ಮತ್ತು ಹುಟುಗಳ ನಡುವಿನ ಸಂಘರ್ಷವು ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ತೀವ್ರವಾಗಿ ಹದಗೆಡಿಸಿತು. 1996 ರಿಂದ 2005 ರವರೆಗೆ ಬುರುಂಡಿಯಲ್ಲಿ ನಡೆದ ಮಹಾ ಜನಾಂಗೀಯ ಗಲಭೆಗಳು ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡವು. ಜೊತೆಗೆ, ಇದು ದೇಶದ ಆರ್ಥಿಕತೆಯನ್ನು ಧ್ವಂಸಗೊಳಿಸಿತು. ಕ್ರಮೇಣ, ಈ ದೇಶವು ಆರ್ಥಿಕವಾಗಿ ಹಿಂದುಳಿದು ವಿಶ್ವದ ಬಡ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಂದಿತು. ಬುರುಂಡಿಯನ್ನು ಹೊರತುಪಡಿಸಿ, ಮಡಗಾಸ್ಕರ್, ಸೊಮಾಲಿಯಾ ಮತ್ತು ಮಧ್ಯ ಆಫ್ರಿಕಾದ ಗಣರಾಜ್ಯ ಸೇರಿದಂತೆ ಅನೇಕ ದೇಶಗಳು ಬಡತನದಿಂದ ಬಳಲುತ್ತಿವೆ.
ಇದನ್ನೂ ಓದಿ: ಮೊಬೈಲ್ ಇಂಟರ್ನೆಟ್ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು
ಸಂಘರ್ಷ: ಬುರುಂಡಿಯಲ್ಲಿ ದಶಕಗಳ ಕಾಲ ನಡೆದ ಅಂತಃಕಲಹವು ದೇಶದ ಆರ್ಥಿಕತೆಯ ಸಾಕಷ್ಟು ಮೇಲೆ ಪರಿಣಾಮ ಬೀರಿದೆ.
ಅಸ್ಥಿರತೆ, ಭ್ರಷ್ಟಾಚಾರ: ರಾಜಕೀಯ ಅಸ್ಥಿರತೆಯು ಅಭಿವೃದ್ಧಿಗೆ ಅಡ್ಡಿಯಾಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅಭಿವೃದ್ಧಿಗಾಗಿ ಸಾರ್ವಜನಿಕ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.
ನೈಸರ್ಗಿಕ ವಿಕೋಪಗಳು: ಬುರುಂಡಿ ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು, ಆಗಾಗ್ಗೆ ಪ್ರವಾಹ, ಭೂಕಂಪಗಳು ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ಎದುರಾಗುತ್ತಿರುತ್ತವೆ.
ಅನಕ್ಷರತೆ: ಬುರುಂಡಿ ದೇಶ ಅನಕ್ಷರತೆಯಿಂದ ಬಳಲುತ್ತಿದೆ, ಇದು ಜನ ಆರ್ಥಿಕವಾಗಿ ಸದೃಢರಾಗುವುದನ್ನು ಮತ್ತು ಸಾಮಾಜಿಕ ಸ್ಥಾನಗಳನ್ನು ತಲುಪುವುದನ್ನು ತಡೆಯುತ್ತದೆ.
ನಿರುದ್ಯೋಗ: ಇಲ್ಲಿನ ಆರ್ಥಿಕ ಅಭದ್ರತೆಗೆ ನಿರುದ್ಯೋಗವು ಮತ್ತೊಂದು ಪ್ರಮುಖ ಕಾರಣವಾಗಿದೆ.
ಆರೋಗ್ಯ ರಕ್ಷಣೆಯ ಕೊರತೆ: ಬುರುಂಡಿಯಲ್ಲಿ ಆರೋಗ್ಯ ಸೇವೆಯ ಕೊರತೆಯಿದೆ, ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆಹಾರ ಭದ್ರತೆ ಕೊರತೆ: ಆಹಾರ ಭದ್ರತೆಯ ಕೊರತೆಯು ಬುರುಂಡಿಯಲ್ಲಿ ಬಡತನಕ್ಕೆ ಪ್ರಮುಖ ಕಾರಣವಾಗಿದೆ, ಇದರಿಂದಾಗಿ ಜನರು ಉತ್ತಮ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ