
ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಹುದ್ದೆಯನ್ನು ಭಾರತದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಉದಾತ್ತ ವೃತ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೆ ಚಾರ್ಟರ್ಡ್ ಅಕೌಂಟೆಂಟ್‌ಗಳು ಸರ್ಕಾರ ಮತ್ತು ತೆರಿಗೆದಾರರ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೌದು ಜನರ ವೈಯಕ್ತಿಕ, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಹಣಕಾಸಿನ ವಹಿವಾಟುಗಳು ಸರ್ಕಾರ ಸ್ಥಾಪಿಸಿರುವ ನಿಯಮಗಳೊಂದಿಗೆ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಿಕೊಳ್ಳುವಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಿ.ಎ ಗಳು ವಹಿಸುವ ಪಾತ್ರ, ಅವರ ಅಸಾಧಾರಣ ಸಾಮರ್ಥ್ಯ, ಅಚಲ ವೃತ್ತಿಪರತೆಯನ್ನು ಗೌರವಿಸಲು ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಈ ದಿನವು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸ್ಥಾಪನೆಯನ್ನು ಸ್ಮರಿಸುತ್ತದೆ. ICAI ಭಾರತದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಲೆಕ್ಕಪರಿಶೋಧನೆಗೆ ವಿಶೇಷ ಪರವಾನಗಿ ಮತ್ತು ನಿಯಂತ್ರಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು CA ಕೋರ್ಸ್‌ಗಳನ್ನು ಈ ಸಂಸ್ಥೆಯೇ ನಡೆಸುತ್ತದೆ. ಈ ಸಂಸ್ಥೆಯ ಸ್ಥಾಪನಾ ದಿನದ ಸ್ಮರಣಾರ್ಥವಾಗಿ ಜುಲೈ 1 ರಂದು ರಾಷ್ಟ್ರೀಯ ಚಾರ್ಟರ್ ಅಕೌಂಟೆಂಟ್ಸ್ ದಿನವನ್ನು ಆಚರಿಸಲಾಗುತ್ತದೆ.
ಜುಲೈ 1, 1949 ರಂದು, ಭಾರತ ಸರ್ಕಾರವು ಲೆಕ್ಕಪತ್ರ ವೃತ್ತಿಯನ್ನು ನಿಯಂತ್ರಿಸಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವನ್ನು ಸ್ಥಾಪಿಸಿತು. ಯುನೈಟೆಡ್ ಕಿಂಗ್‌ಡಮ್ ನಂತರ ಇಂತಹ ವೃತ್ತಿಪರ ಲೆಕ್ಕಪತ್ರ ಸಂಸ್ಥೆಯನ್ನು ರಚಿಸಿದ ವಿಶ್ವದ ಎರಡನೇ ದೇಶ ಭಾರತವಾಯಿತು. ಅಂದಿನಿಂದ, ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಈ ವೃತ್ತಿಯ ಮಹತ್ವವನ್ನು ಗುರುತಿಸಲು ಜುಲೈ 1 ರಂದು ರಾಷ್ಟ್ರೀಯ ಸಿ.ಎ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳ ಬಳಕೆ ಸಕಾರಾತ್ಮಕ ಮಾರ್ಗದಲ್ಲಿರಲಿ
ಚಾರ್ಟರ್ಡ್ ಅಕೌಂಟೆಂಟ್‌ಗಳು ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವಲ್ಲಿ ಮತ್ತು ಕಾನೂನು ಮತ್ತು ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ವ್ಯಕ್ತಿಗಳು, ಕಂಪೆನಿಗಳು, ವ್ಯವಹಾರಗಳು ಮತ್ತು ಸರ್ಕಾರಗಳು ತಿಳುವಳಿಕೆಯುಳ್ಳ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ