
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿದಾಯಕ ಆಹಾರವನ್ನು ಸೇವಿಸುವಂತೆ ರಾತ್ರಿ ಹಗುರವಾದ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೆಲಸದ ಒತ್ತಡ, ಆಯಾಸ ಮತ್ತು ಕೆಲವೊಮ್ಮೆ ಕೋಪದಿಂದಾಗಿ ಅನೇಕ ಜನರು ರಾತ್ರಿ (night) ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ರಾತ್ರಿ ಊಟವನ್ನು ಸ್ಕಿಪ್ ಮಾಡುತ್ತಾರೆ. ರಾತ್ರಿ ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುವ ಈ ಅಭ್ಯಾಸವು ದೇಹಕ್ಕೆ ತುಂಬಾ ಹಾನಿಕಾರಕವಂತೆ. ಹಾಗಿದ್ದರೆ ಊಟ ಮಾಡದೆ ಮಲಗುವುದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.
ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆ ಅಪಾಯ ಹೆಚ್ಚಾಗುತ್ತದೆ: ದೀರ್ಘಕಾಲ ಖಾಲಿ ಹೊಟ್ಟೆಯಲ್ಲಿ ಇದ್ದರೆ ಇದು ಜಠರದುರಿತ, ಆಮ್ಲೀಯತೆ, ಎದೆಯುರಿ ಮತ್ತು ಹೊಟ್ಟೆಯ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ ರಾತ್ರಿ ಊಟ ಮಾಡದೆ ಮಲಗಿದೆ ವಿಶೇಷವಾಗಿ ಬೆಳಿಗ್ಗೆ ಎದ್ದ ನಂತರ ತಲೆನೋವು, ವಾಕರಿಕೆ ಮತ್ತು ಆಯಾಸದಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.
ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಹಸಿವಿನಿಂದ ಕೆಲವರಿಗೆ ಗಾಢ ನಿದ್ರೆ ಬರದಿರಬಹುದು. ಇದರಿಂದಾಗಿ ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಳ್ಳುವುದು, ಮಧ್ಯರಾತ್ರಿ ಹಸಿವಾಗುವುದು, ಬೆಳಿಗ್ಗೆ ಉತ್ಸಾಹವಿಲ್ಲದೆ ಎಚ್ಚರಗೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಲಘು ಭೋಜನವು ಉತ್ತಮ ನಿದ್ರೆ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪೌಷ್ಟಿಕಾಂಶದ ಕೊರತೆಯ ಸಾಧ್ಯತೆ: ರಾತ್ರಿ ಊಟ ಮಾಡದೆ ಮಲಗುವ ಅಬ್ಯಾಸದಿಂದ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗಬಹುದು, ಇದು ಸ್ನಾಯು ದೌರ್ಬಲ್ಯ, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ತೀವ್ರ ಆಯಾಸಕ್ಕೆ ಕಾರಣವಾಗಬಹುದು.
ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಆಗಾಗ್ಗೆ ಭೋಜನವನ್ನು ಬಿಟ್ಟುಬಿಡುವುದು ಅಥವಾ ಸರಿಯಾಗಿ ತಿನ್ನದಿದ್ದರೆ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಅಡ್ಡಿಪಡಿಸಬಹುದು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸದಿರುವುದು ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ
ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು, ಹಗುರವಾದ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ ಮೀಲ್, ಹಣ್ಣುಗಳು, ಮೊಸರು, ಸಣ್ಣ ಪ್ರಮಾಣದಲ್ಲಿ ಚಪಾತಿ ಮತ್ತು ಹೆಸರುಕಾಳಿನ ಗಂಜಿ ಮುಂತಾದ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರುವುದಿಲ್ಲ.
ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಕ್ಕಿಂತ ಮಲಗುವ ಎರಡು ಅಥವಾ ಮೂರು ಗಂಟೆಗಳ ಮೊದಲು ಮಧ್ಯಮ ಮತ್ತು ಆರೋಗ್ಯಕರ ಊಟವನ್ನು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಊಟವನ್ನು ಬಿಟ್ಟುಬಿಡುವ ಬದಲು, ಸಮತೋಲಿತ ಆಹಾರ, ವ್ಯಾಯಾಮ ಮತ್ತು ನಿಯಮಿತ ಜೀವನಶೈಲಿಯನ್ನು ಅನುಸರಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ