ಹಳೆಯ ಬೆಳ್ಳಿ ಆಭರಣಗಳು ಫಳ ಫಳ ಹೊಳಿಬೇಕು ಅಂದ್ರೆ, ಈ ಕ್ಲೀನಿಂಗ್‌ ಟಿಪ್ಸ್‌ ಪಾಲಿಸಿ

ಕಾಲ್ಗೆಜ್ಜೆ, ಕಾಲುಂಗುರ, ಕಡಗ, ತಟ್ಟೆ, ದೀಪ ಸೇರಿದಂತೆ ಹಲವು ಬೆಳ್ಳಿ ಸಾಮಾಗ್ರಿಗಳು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತವೆ. ಆದ್ರೆ ಈ ಬೆಳ್ಳಿ ವಸ್ತುಗಳು ಬಹುಬೇಗನೆ ಹೊಳಪನ್ನು ಕಳೆದುಕೊಳ್ಳುತ್ತದೆ, ಕಪ್ಪಾಗಿ ಕಾಣಿಸಲು ಪ್ರಾರಂಭಿಸುತ್ತದೆ. ಹೀಗಿರುವಾಗ ಚಿನ್ನದಂಗಡಿಗೆ ಹೋಗಿ ಪಾಲಿಶ್‌ ಮಾಡಿಸುವ ಬದಲು ಈ ಕೆಲವೊಂದು ಕ್ಲೀನಿಂಗ್‌ ಟಿಪ್ಸ್‌ ಪಾಲಿಸುವ ಮೂಲಕ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಬಹುದು, ಅವುಗಳ ಹೊಳಪನ್ನು ಮರಳಿ ಪಡೆಯಬಹುದು.

ಹಳೆಯ ಬೆಳ್ಳಿ ಆಭರಣಗಳು ಫಳ ಫಳ ಹೊಳಿಬೇಕು ಅಂದ್ರೆ, ಈ ಕ್ಲೀನಿಂಗ್‌ ಟಿಪ್ಸ್‌ ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 15, 2026 | 6:36 PM

ಚಿನ್ನದಂತೆ ಬೆಳ್ಳಿ ಆಭರಣಗಳನ್ನು (silver jewelry) ಸಹ ಬಹುತೇಕ ಹೆಚ್ಚಿನವರು ಇಷ್ಟಪಟ್ಟು ಧರಿಸುತ್ತಾರೆ. ಹೆಚ್ಚಿನ ಮಹಿಳೆಯರು ಬೆಳ್ಳಿ ಕಾಲುಂಗುರ, ಉಂಗುರ, ಕಾಲ್ಗೆಜ್ಜೆಯನ್ನೇ ಧರಿಸುತ್ತಾರೆ. ಆದರೆ ಈ ಬೆಳ್ಳಿ ಆಭರಣಗಳು ಬಹುಬೇಗನೇ ಹೊಳಪನ್ನು ಕಳೆದುಕೊಂಡು ಕಪ್ಪಾಗಿ ಕಾಣಿಸುತ್ತದೆ. ಗಾಳಿ, ತೇವಾಂಶ ಮತ್ತು ಧೂಳಿಗೆ  ಒಡ್ಡಿಕೊಳ್ಳುವುದರಿಂದ ಬೆಳ್ಳಿ ವಸ್ತುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ಬೆಳ್ಳಿ ವಸ್ತುಗಳಿಗೆ ಆಭರಣದಂಗಡಿಯಲ್ಲಿ ಪಾಲಿಶ್‌ ಮಾಡಿಸುತ್ತಾರೆ. ಈ ರೀತಿ ದುಡ್ಡು ಖರ್ಚು ಮಾಡುವ ಬದಲು ಈ ಕೆಲವೊಂದು ಕ್ಲೀನಿಂಗ್‌ ಟಿಪ್ಸ್‌ಗಳನ್ನು ಪಾಲಿಸುವ  ಮೂಲಕ ಮನೆಯಲ್ಲಿಯೇ ಬೆಳ್ಳಿ ವಸ್ತುಗಳನ್ನು ಸ್ವಚ್ಛಗೊಳಿಸಬಹುದು, ಅವುಗಳಿಗೆ ಹೊಳಪನ್ನು  ನೀಡಬಹುದು. ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸುವ ಸಿಂಪಲ್‌ ಟಿಪ್ಸ್‌ ಇಲ್ಲಿದೆ.

ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸುವ ಸರಳ ಸಲಹೆ:

ಟೂತ್‌ಪೇಸ್ಟ್‌:  ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್  ಬಳಸಬಹುದು. ಟೂತ್‌ಪೇಸ್ಟ್‌ನಲ್ಲಿ ಬೆಳ್ಳಿಯನ್ನು ಹೊಳಪು ಮಾಡುವಲ್ಲಿ ಪರಿಣಾಮಕಾರಿಯಾದ ರಾಸಾಯನಿಕಗಳಿವೆ. ನಿಮ್ಮ ಬೆಳ್ಳಿ ಆಭರಣಗಳು ಮಸುಕಾಗಲು ಪ್ರಾರಂಭಿಸಿದರೆ, ಆ ಭರಣಗಳಿಗೆ ಸ್ವಲ್ಪ ಪ್ರಮಾಣದ ಪೇಸ್ಟ್ ಅನ್ನು ಹಚ್ಚಿ ಮತ್ತು ಬ್ರಷ್‌ನಿಂದ ವೃತ್ತಾಕಾರದ ಚಲನೆಗಳಲ್ಲಿ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ, ಟೂತ್‌ಪೇಸ್ಟ್‌ನಲ್ಲಿ ನೆನೆಸಿ ಆಭರಣವನ್ನು ಐದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.

ಅಲ್ಯೂಮಿನಿಯಂ ಫಾಯಿಲ್: ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಬಹುದು. ಇದನ್ನು ಮಾಡಲು, ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ಕುದಿಸಿ. ಅಲ್ಯೂಮಿನಿಯಂ ಫಾಯಿಲ್ ಅನ್ನು ಸಣ್ಣ ತುಂಡುಗಳಾಗಿ ಹರಿದು ಆ ನೀರಿನಲ್ಲಿ ಅದ್ದಿ. ಒಂದು ಟೀಚಮಚ ಅಡಿಗೆ ಸೋಡಾ ಸೇರಿಸಿ ಮತ್ತು ಬೆಳ್ಳಿಯನ್ನು ಅದರಲ್ಲಿ ಕೆಲವು ನಿಮಿಷಗಳ ಕಾಲ ನೆನೆಸಿಡಿ. ನಂತರ, ಬ್ರಷ್‌ನಿಂದ ಆಭರಣಗಳನ್ನು ಚೆನ್ನಾಗಿ ಉಜ್ಜಿದರೆ ಕಪ್ಪು ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗಿ ಬೆಳ್ಳಿ ಆಭರಣ ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತದೆ.

ವಿನೆಗರ್: ಬೆಳ್ಳಿಯನ್ನು ಹೊಳೆಯುವಂತೆ ಮತ್ತು ಹೊಸದಾಗಿ ಕಾಣುವಂತೆ ಮಾಡಲು ವಿನೆಗರ್‌ ಕೂಡ ಸಹಕಾರಿ. ಅರ್ಧ ಕಪ್ ಬಿಳಿ ವಿನೆಗರ್ ಮತ್ತು ಎರಡು ಟೀ ಚಮಚ ಅಡಿಗೆ ಸೋಡಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಬೆಳ್ಳಿ ವಸ್ತುವನ್ನು ಈ ಮಿಶ್ರಣದಲ್ಲಿ 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಬೆಳ್ಳಿ ಆಭರಣದ ಹೊಳಪನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ

ಅಡಿಗೆ ಸೋಡಾ: ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಸಹ ಬಳಸಬಹುದು. ಅಡುಗೆ ಸೋಡಾಕ್ಕೆ ಸ್ವಲ್ಪ ನೀರನ್ನು ಬೆರೆಸಿ  ಪೇಸ್ಟ್ ತಯಾರಿಸಿಕೊಳ್ಳಿ, ನಂತರ ಅದರಲ್ಲಿ ಬೆಳ್ಳಿ ಆಭರಣಗಳನ್ನು ಅದ್ದಿ ಅದನ್ನು ಬ್ರಷ್‌ನಿಂದ ಬೆಳ್ಳಿ ಉಜ್ಜಿ. ಐದು ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ.

ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ: ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾ ಮತ್ತು ವಿನೆಗರ್ ತುಂಬಾನೇ ಸಹಕಾರಿ. ಒಂದು ಬಟ್ಟಲಿನಲ್ಲಿ 2 ಚಮಚ ಅಡಿಗೆ ಸೋಡಾ ಮತ್ತು 3 ಚಮಚ ವಿನೆಗರ್ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಬೆಳ್ಳಿ ಆಭರಣಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಹಳೆಯ ಟೂತ್ ಬ್ರಷ್ ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ. ಇದರಿಂದ ಆಭರಣಗಳು ಹೊಸದರಂತೆ ಹೊಳೆಯುತ್ತವೆ.

ನಿಂಬೆ ಮತ್ತು ಉಪ್ಪು: ನಿಂಬೆ ರಸ ಮತ್ತು ಉಪ್ಪಿನ ಮಿಶ್ರಣ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ತುಂಬಾನೇ ಸಹಕಾರಿ. ಇದಕ್ಕಾಗಿ ನಿಂಬೆ ರಸಕ್ಕೆ ಚಿಟಿಕೆ ಉಪ್ಪು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ ಅನ್ನು ಆಭರಣಗಳಿಗೆ ಹಚ್ಚಿ 5-7 ನಿಮಿಷಗಳ ಹಾಗೆಯೇ ಬಿಡಿ, ನಂತರ ಒಂದು ಬ್ರಷ್‌ ಸಹಾಯದಿಂದ ಉಜ್ಜಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒಣ ಬಟ್ಟೆಯಿಂದ ಒರೆಸಿ. ಈ ವಿಧಾನವು ಬೆಳ್ಳಿ ಆಭರಣಗಳ ಹೊಳಪನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us