
ಇಂದಿನ ಕಾಲದಲ್ಲಿ ಹೆಚ್ಚು ರಾಸಾಯನಿಕ ಮತ್ತು ಕೀಟನಾಶಗಳನ್ನು ಬಳಸಿಯೇ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಿಂದ ತಂದಂತಹ ಹಣ್ಣು ಮತ್ತು ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿಯೇ ಬಳಸಬೇಕು ಎಂದು ತಜ್ಞರು ಸಲಹೆ ನೀಡುವುದು. ಆದರೆ ದ್ರಾಕ್ಷಿ ಹಣ್ಣಿನ (grapes) ವಿಚಾರಕ್ಕೆ ಬಂದ್ರೆ ಇದನ್ನು ಬರೀ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ, ಇದನ್ನು ಸ್ವಚ್ಛಗೊಳಿಸಲು ಸರಿಯಾದ ಕ್ರಮಗಳನ್ನು ಪಾಲಿಸಬೇಕಾಗುವುದು ತುಂಬಾನೇ ಮುಖ್ಯ. ಹೌದು ಇದರ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ, ರಾಸಾಯನಿಕಗಳನ್ನು ಅಂಟಿರುವುದರಿಂದ ಅವನ್ನು ಸಂಪೂರ್ಣವಾಗಿ ಹೋಗಲಾಡಿಸಲು, ದ್ರಾಕ್ಷಿ ಕ್ಲೀನ್ ಮಾಡುವ ಸಮಯದಲ್ಲಿ ಈ ಒಂದಷ್ಟು ಕ್ರಮಗಳನ್ನು ಅನುಸರಿಸಬೇಕು.
ದ್ರಾಕ್ಷಿಯಲ್ಲಿ ಹೆಚ್ಚು ಕೀಟನಾಶಕಗಳು ಏಕೆ ಇರುತ್ತವೆ?
ಬೇರೆ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಕೀಟನಾಶಕ, ರಾಸಾಯನಿಕಗಳಿರುತ್ತವೆ. ಇದರ ಹಿಂದಿನ ಕಾರಣವೆಂದರೆ ಕೃಷಿಯ ಸಮಯದಲ್ಲಿ ದ್ರಾಕ್ಷಿಗಳಿಗೆ ಕೀಟಗಳು ಹೆಚ್ಚು ಆವರಿಸುತ್ತದೆ, ಅಲ್ಲದೆ ಇವುಗಳಲ್ಲಿ ಶಿಲೀಂಧ್ರಗಳು ಬೆಳೆಯುತ್ತವೆ. ಈ ಸಮಸ್ಯೆಗಳಿಂದ ದ್ರಾಕ್ಷಿಯನ್ನು ಕಾಪಾಡಿಕೊಳ್ಳಲು ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ.
ಉಪ್ಪು ನೀರಿನಿಂದ ತೊಳೆಯಿರಿ: ಬರೀ ನೀರಿನ ಬದಲು ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ದ್ರಾಕ್ಷಿ ಹಣ್ಣನ್ನು ತೊಳೆಯಿರಿ. ಅದಕ್ಕಾಗಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀಚಮಚ ಉಪ್ಪು ಸೇರಿಸಿ ಅದರಲ್ಲಿ ದ್ರಾಕ್ಷಿಯನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿ. ನಂತರ ಅವುಗಳನ್ನು ಮತ್ತೊಮ್ಮೆ ಶುದ್ಧ ನೀರಿನಿಂದ ತೊಳೆಯಿರಿ.ಉಪ್ಪು ನೀರುಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಅಡುಗೆ ಸೋಡಾ: ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕಗಳನ್ನು ತೆಗೆದುಹಾಕಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ನೀರಿಗೆ ಅರ್ಧ ಟೀ ಚಮಚ ಅಡಿಗೆ ಸೋಡಾವನ್ನು ಹಾಕಿ, ದ್ರಾಕ್ಷಿಯನ್ನು ಈ ದ್ರಾವಣದಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ. ಈ ವಿಧಾನ ದ್ರಾಕ್ಷಿಯಲ್ಲಿ ಅಂಟಿರುವ ರಾಸಾಯನಿಕ ಮತ್ತು ಕೀಟನಾಶಕಗಳನ್ನು ತೆಗೆದುಹಾಕಲು ತುಂಬಾನೇ ಸಹಕಾರಿ.
ಇದನ್ನೂ ಓದಿ: ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು
ಬಿಳಿ ವಿನೆಗರ್: ಬಿಳಿ ವಿನೆಗರ್ ಕೂಡ ದ್ರಾಕ್ಷಿಯನ್ನು ಸ್ವಚ್ಛಗೊಳಿಸಲು ಸಹಕಾರಿ. ಒಂದು ಬೌಲ್ ನೀರಿಗೆ ಸ್ವಲ್ಪ ವಿನೆಗರ್ ಸೇರಿಸಿ ಈ ಮಿಶ್ರಣದಲ್ಲಿ ದ್ರಾಕ್ಷಿಯನ್ನು 10 ರಿಂದ 15 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ವಿನೆಗರ್ ದ್ರಾಕ್ಷಿಯಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಮತ್ತು ಅವುಗಳ ಮೇಲ್ಮೈಗೆ ಅಂಟಿಕೊಂಡಿರುವ ಯಾವುದೇ ಕೊಳಕು ಅಥವಾ ಶೇಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಹೀಗೆ ದ್ರಾಕ್ಷಿ ಹಣ್ಣನ್ನು ಚೆನ್ನಾಗಿ ತೊಳೆದ ನಂತರ, ಅವುಗಳನ್ನು ಸ್ವಚ್ಛವಾದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ ಒಣಗಲು ಬಿಡಿ. ನಂತರವೇ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ