
ಭಾರತವು ವಿಶಾಲವಾದ ಕರಾವಳಿ ಪ್ರದೇಶಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, 7,500 ಕಿಲೋಮೀಟರ್‌ಗಳಿಗೂ ಹೆಚ್ಚು ಕರಾವಳಿ ಭಾಗವನ್ನು ಹೊಂದಿದೆ. ಮೂರು ಕಡೆಗಳಲ್ಲಿ ಸಾಗರದಿಂದ ಸುತ್ತುವರೆದಿರುವ ನಮ್ಮ ಈ ರಾಷ್ಟ್ರಕ್ಕೆ ಕಡಲ ಗಡಿ ಭದ್ರತೆಯು ತುಂಬಾನೇ ಮುಖ್ಯವಾಗಿದೆ. ಈ ಕಡಲ ಗಡಿಗಳನ್ನು ಸುರಕ್ಷಿತವಾಗಿಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ICG) ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೇ ಕಡಲ್ಗಳ್ಳತನ, ಕರಾವಳಿ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ, ಸಮುದ್ರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿಯೂ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಭಾರತೀಯ ಕರಾವಳಿ ಭದ್ರತಾ ಪಡೆಯ ಸಿಬ್ಬಂದಿಗಳ ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲುಪಡೆ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಫೆಬ್ರವರಿ 1 ರಂದು ಆಚರಿಸಲಾಗುವ ಭಾರತೀಯ ಕರಾವಳಿ ಕಾವಲು ಪಡೆಯ ದಿನವು 1978 ರಲ್ಲಿ ಕರಾವಳಿ ಕಾವಲು ಪಡೆಯ (ICG) ಸ್ಥಾಪನೆಯ ದಿನವನ್ನು ಸ್ಮರಿಸುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಫೆಬ್ರವರಿ 1, 1977 ರಂದು ಅಸ್ತಿತ್ವಕ್ಕೆ ಬಂದಿತು. ಆ ಸಮಯದಲ್ಲಿ ಅದು ಭಾರತೀಯ ಜಲಪ್ರದೇಶ ಮತ್ತು ವಿಶೇಷ ಆರ್ಥಿಕ ವಲಯದಲ್ಲಿ ಕಣ್ಗಾವಲುಗಾಗಿ ಕೇವಲ ಏಳು ಹಡಗುಗಳ ನೌಕಾಪಡೆಯ ಬಲವನ್ನು ಹೊಂದಿತ್ತು. ನಂತರ ಔಪಚಾರಿಕವಾಗಿ, ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಆಗಿನ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ ಅವರು ಆಗಸ್ಟ್ 19, 1978 ರಂದು ಉದ್ಘಾಟಿಸಿದರು. ಈ ದಿನದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ
ಐಸಿಜಿಯ ಪಾತ್ರವನ್ನು ಗುರುತಿಸುವುದು: ಕಡಲ ಸುರಕ್ಷತೆ, ಭದ್ರತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಕರಾವಳಿ ಪಡೆಯ ಪ್ರಮುಖ ಪಾತ್ರವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ದಿನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಐಸಿಜಿ ಸಿಬ್ಬಂದಿಗಳನ್ನು ಗೌರವಿಸುವುದು: ಭಾರತದ ಕಡಲ ಗಡಿಗಳನ್ನು ಅವಿಶ್ರಾಂತವಾಗಿ ರಕ್ಷಿಸುವ ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳ ಸಮರ್ಪಣೆ ಮತ್ತು ತ್ಯಾಗವನ್ನು ಗೌರವಿಸಲು ಈ ದಿನ ಒಂದು ವೇದಿಕೆಯಾಗಿದೆ.
ಸಾರ್ವಜನಿಕ ಜಾಗೃತಿ ಮೂಡಿಸುವುದು: ಐಸಿಜಿಯ ವೈವಿಧ್ಯಮಯ ಪಾತ್ರಗಳು, ಜವಾಬ್ದಾರಿಗಳು ಮತ್ತು ಸಾಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಭವಿಷ್ಯದ ಪೀಳಿಗೆಗೆ ಸ್ಫೂರ್ತಿ: ಈ ದಿನವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಐಸಿಜಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ದೇಶದ ಕಡಲ ಭದ್ರತೆಗೆ ಕೊಡುಗೆ ನೀಡಲು ಯುವಜನರನ್ನು ಪ್ರೋತ್ಸಾಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ