ವಿಶ್ವ ಚಂದ್ರನ ದಿನ
ಇತಿಹಾಸದ ಪುಟಗಳನ್ನು ತೆರೆದಾಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾನವನ ಸಾಧನೆಗಳು ರೋಮಾಂಚನಕಾರಿಯಾಗಿದೆ. ಈಗಾಗಲೇ ನಂಬಲು ಸಾಧ್ಯವಾಗದ ಅದೆಷ್ಟೋ ಘಟನೆಗಳು ನಡೆದಿವೆ. ಅದರಲ್ಲಿ ಮನುಷ್ಯನು ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ಕ್ಷಣವು ಒಂದಾಗಿದೆ. 1969 ಜುಲೈ 20ರಂದು ನೀಲ್ ಆರ್ಮ್ಸ್ಟ್ರಂಗ್ ಮತ್ತು ಬುಜ್ ಅಲ್ಡ್ರಿನ್ ಅವರು ಚಂದ್ರನ ಅಂಗಳಕ್ಕೆ ಹೆಜ್ಜೆ ಇಟ್ಟರು. ಈ ಮಹತ್ತರ ಸಾಧನೆಯ ಸವಿನೆನಪಿಗಾಗಿ ಜುಲೈ 20 ರಂದು ವಿಶ್ವ ಚಂದ್ರನ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಚಂದ್ರನ ದಿನದ ಇತಿಹಾಸ
ವಿಶ್ವಸಂಸ್ಥೆಯು 2021ರಲ್ಲಿ ತನ್ನ “ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ’ ನಿರ್ಣಯದಲ್ಲಿ ಚಂದ್ರನ ಮೇಲೆ ಮಾನವನು ಮೊದಲ ಹೆಜ್ಜೆಯನ್ನು ಇಟ್ಟ ದಿನವನ್ನು ಅಂತಾರಾಷ್ಟ್ರೀಯ ಚಂದ್ರನ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಿತು. ಅಂದಿನಿಂದ ಪ್ರತಿ ವರ್ಷ ಜುಲೈ 20 ರಂದು ವಿಶ್ವ ಚಂದ್ರನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸುವುದು ಏಕೆ, ಏನಿದರ ಮಹತ್ವ?
ಚಂದ್ರನ ಬಗೆಗಿನ ಕುತೂಹಲಕಾರಿ ಸಂಗತಿಗಳು
- ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯಾದ ಸ್ವಲ್ಪ ಸಮಯದ ನಂತರದಲ್ಲಿ ಮಂಗಳದ ಗಾತ್ರದ ಬಂಡೆಯು ಭೂಮಿಗೆ ಡಿಕ್ಕಿ ಹೊಡೆದಾಗ ಚಂದ್ರನ ಉಗಮವಾಯಿತು.
- ಭೂಮಿಗೆ ಹೋಲಿಕೆ ಮಾಡಿದರೆ ಚಂದ್ರನು ಗಾತ್ರವು ಭೂಮಿಯ ನಾಲ್ಕನೇ ಒಂದರಷ್ಟಿದೆ. ಚಂ ವ್ಯಾಸ 2,159 ಮೈಲಿ (3,476 ಕಿಲೋಮೀಟರ್) ಆಗಿದೆ. ಭೂಮಿಯ ತೂಕ ಚಂದ್ರನ ತೂಕಕ್ಕಿಂತ 80 ಪಟ್ಟು ಹೆಚ್ಚಿದೆ.
- ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವೆಂದರೆ ಅದುವೇ ಚಂದ್ರ. ಇದು ಸೌರವ್ಯೂಹದಲ್ಲಿ ಐದನೇ ಅತಿ ದೊಡ್ಡ ನೈಸರ್ಗಿಕ ಉಪಗ್ರಹ ಎನ್ನಲಾಗಿದೆ.
- ರಾತ್ರಿಯ ಆಕಾಶಕ್ಕೆ ಹೋಲಿಕೆ ಮಾಡಿದರೆ ಚಂದ್ರನು ತುಂಬಾ ಬಿಳಿಯಾಗಿರುವಂತೆ ಕಾಣುತ್ತದೆ. ಆದರೆ ಚಂದ್ರನ ಮೇಲ್ಮೈ ತುಂಬಾನೇ ಕಪ್ಪಾಗಿದೆ.
- ಚಂದ್ರನು ಭೂಮಿ ಎನ್ನುವ ಗ್ರಹದಿಂದ ಪ್ರತಿ ವರ್ಷ ಸುಮಾರು 3.8 ಸೆಂ.ಮೀ ದೂರ ಸಾಗುತ್ತಿದ್ದಾನೆ.
- ಚಂದ್ರನ ಮೇಲೆ ಭೂಕಂಪಗಳು ಸಂಭವಿಸುತ್ತವೆಯಂತೆ. ಈ ಕಂಪನಗಳನ್ನು ಮೂನ್ ಕ್ವೇಕ್ ಎಂದು ಕರೆಯಲಾಗುತ್ತದೆ. ಅವು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಉಂಟಾಗುತ್ತವೆ. ಈ ಕಂಪನಗಳು ಸರಿಸುಮಾರು ಅರ್ಧ ಗಂಟೆಯ ಕಾಲ ಇರುತ್ತವೆ ಎನ್ನಲಾಗಿದೆ.
- ಚಂದ್ರನ ಮೇಲೆ ರಾತ್ರಿಯ ವೇಳೆ ತಾಪಮಾನ -298 ಡಿಗ್ರಿ ಫ್ಯಾರನ್ಹೀಟ್ (-183 ಡಿಗ್ರಿ ಸೆಲ್ಸಿಯಸ್) ಇದ್ದರೆ, ಹಗಲಿನಲ್ಲಿ 224 ಡಿಗ್ರಿ ಫ್ಯಾರನ್ಹೀಟ್ (106 ಡಿಗ್ರಿ ಸೆಲ್ಸಿಯಸ್) ಇರುತ್ತದೆ. ಹಗಲು ಮತ್ತು ರಾತ್ರಿಗಳ ನಡುವೆ ಚಂದ್ರನ ತಾಪಮಾನದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ