ಬೆಳಿಗ್ಗೆ ಅಥವಾ ಸಂಜೆ; ನೆಲ ಒರೆಸಲು ಉತ್ತಮ ಸಮಯ ಯಾವುದು?

ಸ್ವಚ್ಛತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಸಹ ಪ್ರತಿನಿತ್ಯ ಮನೆಯನ್ನು ಗುಡಿಸಿ ಒರೆಸುತ್ತಾರೆ. ಕೆಲವರು ಬೆಳಗ್ಗೆ ಬೇಗನೇ ನೆಲ ಒರೆಸಿದರೆ, ಇನ್ನೂ ಕೆಲವರು ಸಂಜೆ ಹೊತ್ತಿನಲ್ಲಿ ನೆಲ ಒರೆಸಿ, ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಇವೆರಡರಲ್ಲಿ ನೆಲ ಒರೆಸಲು ಯಾವ ಸಮಯ ಉತ್ತಮ? ಯಾವ ಸಮಯದಲ್ಲಿ ನೆಲ ಒರೆಸಿದರೆ ಮನೆ ಸಂಪೂರ್ಣವಾಗಿ ಕ್ಲೀನ್‌ ಆಗಿರುತ್ತದೆ, ಮನೆ ಶುಚಿಗೊಳಿಸುವಿಕೆಯ ಸರಿಯಾದ ವಿಧಾನ ಎಂಬುದನ್ನು ತಿಳಿದುಕೊಳ್ಳಿ.

ಬೆಳಿಗ್ಗೆ ಅಥವಾ ಸಂಜೆ; ನೆಲ ಒರೆಸಲು ಉತ್ತಮ ಸಮಯ ಯಾವುದು?
ಸಾಂದರ್ಭಿಕ ಚಿತ್ರ
Image Credit source: vecteezy

Updated on: Oct 03, 2026 | 6:37 PM

ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಮನೆಯ ಶುಚಿತ್ವದ (Cleanliness) ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ದಿನನಿತ್ಯ ಗುಡಿಸಿ ಒರೆಸುವುದರಿಂದ ಮನೆ ಸ್ವಚ್ಛವಾಗಿರುವುದು ಮಾತ್ರವಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ನೆಲೆಸುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಸಹ ಪ್ರತಿನಿತ್ಯ ತಮ್ಮ ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಕೆಲವರು ಬೆಳಗಿನ ಹೊತ್ತಿನಲ್ಲಿ ನೆಲ ಒರೆಸಿದರೆ, ಇನ್ನೂ ಕೆಲವರು ಸಂಜೆ ಹೊತ್ತಿನಲ್ಲಿ ನೆಲ ಒರೆಸಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಆದರೆ  ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನೆಲ ಒರೆಸುವುದರಿಂದ ಮಾತ್ರ ನೆಲ ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ ಮತ್ತು ನೆಲದ ಹೊಳಪು ದೀರ್ಘಕಾಲದವರೆಗೆ ಇರುತ್ತದೆ. ಹಾಗಿದ್ರೆ ಯಾವ ಸಮಯ ನೆಲ ಒರೆಸಲು ಸೂಕ್ತ ಎಂಬುದನ್ನು ನೋಡೋಣ ಬನ್ನಿ.

ನೆಲ ಒರೆಸಲು ಸರಿಯಾದ ಸಮಯ ಯಾವುದು?

ಸ್ವಚ್ಛತೆಯ ದೃಷ್ಟಿಕೋನದಿಂದ, ಮನೆಯಲ್ಲಿ ಮನೆ ಮಂದಿಯ ಓಡಾಟ ಕಡಿಮೆ ಇದ್ದಾಗ, ಗುಡಿಸುವುದು, ಧೂಳು ತೆಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿ ಎಲ್ಲಾ ಕೆಲಸಗಳು ಮುಗಿದ ಬಳಿಕ ನೆಲ ಒರೆಸುವುದು ಉತ್ತಮ. ಸಾಮಾನ್ಯವಾಗಿ ಬೆಳಗಿನ ಹೊತ್ತು ಮಕ್ಕಳು ಶಾಲೆಗೆ ಹೋಗುವ, ಮನೆ ಮಂದಿ ಕೆಲಸಕ್ಕೆ ಹೋಗುವ ಗದ್ದಲವಿರುತ್ತದೆ. ಆ ಸಂದರ್ಭದಲ್ಲಿ ಓಡಾಟವೂ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ನೆಲ ಒರೆಸುವುದರಿಂದ ಒದ್ದೆ ನೆಲದ ಮೇಲೆ ಪದೇ ಪದೇ ಕಾಲಿಡುತ್ತಾರೆ. ಇದರಿಂದಾಗಿ ಮನೆ ಸಂಪೂರ್ಣವಾಗಿ ಸ್ವಚ್ಛವಾಗುವುದಿಲ್ಲ. ಹಾಗಾಗಿ ಮನೆಯಲ್ಲಿ  ಮನೆಮಂದಿ ಇರದ ವೇಳೆ ಮಧ್ಯಾಹ್ನ ಅಥವಾ ಸಂಜೆ ಹೊತ್ತು ನೆಲ ಒರೆಸುವುದು ಸೂಕ್ತ. ಮನೆಯ ಸದಸ್ಯರ ಓಡಾಟವಿಲ್ಲದಿದ್ದರೆ ನೀವು ಬೆಳಗ್ಗಿನ ಹೊತ್ತು ಸಹ ನೆಲ ಒರೆಸಬಹುದು.

ಬೆಳಗಿನ ಹೊತ್ತು ನೆಲ ಒರೆಸುವುದು ಯಾಕೆ ಸೂಕ್ತವಲ್ಲ?

ಬಹುತೇಕ ಹೆಚ್ಚಿನವರು ಬೆಳಗ್ಗಿನ ಹೊತ್ತಿನಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡಲು ಬಯಸುತ್ತಾರೆ. ಆದರೆ ಈ ಸಮಯ ನೆಲ ಒರೆಸಲು ಅಷ್ಟು ಸೂಕ್ತವಲ್ಲ. ಏಕೆಂದರೆ ಬೆಳಗ್ಗಿನ ಹೊತ್ತಿನಲ್ಲಿ ಮಕ್ಕಳು ಶಾಲೆ, ಮನೆಯವರು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿರುತ್ತಾರೆ. ಈ ಸಮಯದಲ್ಲಿ ನೆಲ ಒರೆಸಿದರೆ ಅವರು ಒದ್ದೆ ನೆಲದ ಮೇಲೆಯೇ ಓಡಾಡುತ್ತಾರೆ. ಇದರಿಂದ ನೆಲದ ಮೇಲೆ ಹೆಜ್ಜೆಯ ಗುರುತುಗಳು ಕಾಣಿಸುತ್ತದೆ, ಸ್ವಚ್ಛಗೊಳಿಸಿದ ಸ್ವಲ್ಪ ಸಮಯದೊಳಗೆಯೇ ನೆಲ ಕೊಳಕಾಗಿ ಕಾಣಿಸುತ್ತದೆ. ಕೊಳೆ ಕಾಣಿಸಿಕೊಂಡರೆ ಎರಡೆರಡು ಬಾರಿ ನೆಲವನ್ನು ಸ್ವಚ್ಛಗೊಳಿಸಬೇಕಾಗುತ್ತದೆ.

ಇದನ್ನೂ ಓದಿ: ಚಹಾ ಮಾಡಿದ ಬಳಿಕ ಉಳಿದ ಟೀ ಪುಡಿ ಎಸೆಯಬೇಡಿ; ಮನೆಯ ಸ್ವಚ್ಛತೆಗೆ ಹೀಗೆ ಬಳಸಿ

ಸಂಜೆ ನೆಲ ಒರೆಸುವುದರಿಂದ ಏನು ಪ್ರಯೋಜನ?

ನಿಮ್ಮ ಮನೆ ದಿನವಿಡೀ ಚಟುವಟಿಕೆಯಿಂದ ತುಂಬಿದ್ದರೆ, ನೆಲ ಒರೆಸಲು ಸಂಜೆ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಮಧ್ಯಾಹ್ನ ಊಟ ಮಾಡಿದ ನಂತರ, ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಮತ್ತು ಇತರ ಕೆಲಸಗಳನ್ನು ಮುಗಿಸಿದ ನಂತರ ಸಂಜೆ ಹೊತ್ತಿನಲ್ಲಿ ನೆಲವನ್ನು ಸ್ವಚ್ಛಗೊಳಿಸುವುದರಿಂದ ಅವ್ಯವಸ್ಥೆ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಮನೆಯು ಸಂಪೂರ್ಣವಾಗಿ ಸ್ವಚ್ಛವಾಗಿ ಕಾಣಿಸುತ್ತದೆ. ಅದರಲ್ಲೂ ಅಡುಗೆಮನೆ ಕ್ಲೀನಿಂಗ್‌ಗೆ ಈ ವಿಧಾನವನ್ನು ಹೆಚ್ಚು ಪರಿಣಾಮಕಾರಿ. ಮೊದಲು ಅಡುಗೆ ಮುಗಿಸಿ ನಂತರ ನೆಲವನ್ನು ಒರೆಸಿ, ಇದರಿಂದ ಎಣ್ಣೆ, ಮಸಾಲೆಗಳು ಅಥವಾ ನೀರಿನ ಸಿಂಪಡಣೆಗಳು ಶುಚಿಗೊಳಿಸುವಿಕೆಯನ್ನು ಹಾಳು ಮಾಡುವುದಿಲ್ಲ.

ನೆಲ ಒರೆಸುವ ಮೊದಲು ಗುಡಿಸುವುದು  ಅತ್ಯಗತ್ಯ:

ಬೆಳಗ್ಗೆ ಒಂದು ಬಾರಿ ನೆಲವನ್ನು ಗುಡಿಸಿದರೂ ಸಹ ನೆಲವನ್ನು ಒರೆಸುವ ಮೊದಲು ಮತ್ತೊಂದು ಬಾರಿ ಗುಡಿಸುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಧೂಳು, ಕೂದಲು, ಆಹಾರ ಕಣಗಳು, ಇತರೆ ಕಸ ಕಡ್ಡಿಗಳು ಹಾಗೆಯೇ ಉಳಿದು ಬಿಡುತ್ತದೆ. ಇದು ನೆಲವನ್ನು ಮತ್ತಷ್ಟು ಕೊಳಕಾಗಿ ಕಾಣಿಸುತ್ತದೆ. ಆದ್ದರಿಂದ ನೆಲ ಒರೆಸುವ ಮೊದಲು ಗುಡಿಸುವುದು ಅತ್ಯಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us