
ನಾನ್‌ವೆಜ್ (non-veg) ಪ್ರಿಯರಿಗೆ ಚಿಕನ್, ಮಟನ್, ಫಿಶ್ ಎಲ್ಲವೂ ಸಖತ್ ಇಷ್ಟ. ಅದರಲ್ಲೂ ಭಾನುವಾರ ಮಾಂಸಹಾರಿ ಭಕ್ಷ್ಯಗಳು ಇರಲೇಬೇಕು. ಹೀಗೆ ನಾನ್‌ವೆಜ್ ಊಟ ಸೇವಿಸುವಾಗ ಹಾಗೂ ಸೇವನೆ ಮಾಡಿದ ತಕ್ಷಣ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಮಾಂಸಾಹಾರ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವುದರಿಂದ ಅವುಗಳ ಹಿತಮಿತ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಮಾಂಸಾಹಾರ ಸೇವಿಸಿದ ತಕ್ಷಣ ಈ ವಿಷಯಗಳನ್ನು ನಿರ್ಲಕ್ಷಿಸಿದರೆ, ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹೌದು ನಾನ್‌ವೆಜ್ ಭಕ್ಷ್ಯಗಳನ್ನು ಸೇವನೆ ಮಾಡಿದ ತಕ್ಷಣ ಈ ಕೆಲವು ಆಹಾರ ಸೇವನೆ ಮಾಡಿದರೆ ಅಜೀರ್ಣ, ಆಮ್ಲೀಯತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಚಿಕನ್, ಮಟನ್ ತಿಂದ ಬಳಿಕ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ತಪ್ಪನ್ನು ಮಾಡಬೇಡಿ.
ತಣ್ಣೀರು ಮತ್ತು ಐಸ್ ಕ್ರೀಮ್: ಮಾಂಸಾಹಾರಿ ಆಹಾರವನ್ನು ಸೇವಿಸಿದ ತಕ್ಷಣ ತಣ್ಣೀರು ಕುಡಿಯುವುದನ್ನು ಅಥವಾ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ತಣ್ಣನೆಯ ಆಹಾರಗಳು ಮತ್ತು ಪಾನೀಯಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಬಹುದು.
ಸಿಟ್ರಸ್ ಹಣ್ಣುಗಳು: ಮೀನು ಅಥವಾ ಮಾಂಸ ತಿಂದ ತಕ್ಷಣ ನಿಂಬೆಹಣ್ಣು, ಕಿತ್ತಳೆ ಮುಂತಾದ ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಈ ಹಣ್ಣುಗಳು ಬೇಗನೆ ಜೀರ್ಣವಾಗುತ್ತವೆ, ಆದರೆ ಮಾಂಸಾಹಾರಿ ಆಹಾರವು ಜೀರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಗ್ಯಾಸ್ ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳು: ಮೀನು ಅಥವಾ ಮಾಂಸವನ್ನು ತಿಂದ ತಕ್ಷಣ ಹಾಲು, ಮಜ್ಜಿಗೆ, ಮೊಸರು ಅಥವಾ ಇತರ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಮಾಂಸಾಹಾರಿ ಮತ್ತು ಹಾಲಿನಲ್ಲಿರುವ ಪ್ರೋಟೀನ್‌ಗಳ ಜೀರ್ಣಕ್ರಿಯೆಯ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಇದರಿಂದಾಗಿ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ನೋವು ಅಥವಾ ಇತರ ಸಮಸ್ಯೆಗಳು ಉಂಟಾಗಬಹುದು.
ಚಹಾ ಮತ್ತು ಕಾಫಿ: ನಾನ್‌ವೆಜ್ ಭಕ್ಷ್ಯಗಳನ್ನು ಸೇವಿಸಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯಬಾರದು. ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್‌ಗಳಂತಹ ಅಂಶಗಳು ಮಾಂಸ ಮತ್ತು ಸಮುದ್ರಾಹಾರದಲ್ಲಿರುವ ಕಬ್ಬಿಣವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ಇದರಿಂದಾಗಿ ದೇಹವು ಅಗತ್ಯವಾದ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಅಡುಗೆಯ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ
ಸಿಹಿತಿನಿಸು: ನಾನ್‌ವೆಜ್ ಸೇವನೆ ಮಾಡಿದ ತಕ್ಷಣ ಸಿಹಿತಿಂಡಿಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನವಾಗಬಹುದು. ಹೌದು ಮಾಂಸಹಾರ ಮತ್ತು ಸಮುದ್ರಾಹಾರದ ಪ್ರೋಟೀನ್‌ಗಳು ಮತ್ತು ಕೊಬ್ಬುಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ತಕ್ಷಣವೇ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಮತ್ತಷ್ಟು ನಿಧಾನಗೊಳಿಸಬಹುದು ಜೊತೆಗೆ ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆಭಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಕಾರ್ಬೋಹೈಡ್ರೇಟ್ ಆಹಾರ: ಆಲೂಗಡ್ಡೆ ಮತ್ತು ಇತರ ಪಿಷ್ಟ ತರಕಾರಿಗಳಂತಹ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಕೊಬ್ಬಿನಾಂಶಗಳಿರುವ ಮಾಂಸ ಭಕ್ಷ್ಯಗಳ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಇದು ಆಲಸ್ಯವನ್ನುಂಟುಮಾಡಬಹುದು ಮತ್ತು ಅಜೀರ್ಣ, ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Sun, 21 June 26