ಹಣಕಾಸಿನ ಸಮಸ್ಯೆಯಿಂದ ಪಾರಾಗಲು ಸಂಬಳವಾದ ತಕ್ಷಣವೇ ಈ ಕೆಲಸಗಳನ್ನು ಮಾಡಬೇಕು

ಸಾಮಾನ್ಯವಾಗಿ ಅನೇಕ ಜನರು ತಿಂಗಳ ಕೊನೆಯಲ್ಲಿ ಸಾಕಷ್ಟು ಹಣದ ಸಮಸ್ಯೆಯನ್ನು ಎದುರಿಸುತ್ತಾರೆ. ತಿಂಗಳ ಕೊನೆಯಲ್ಲಿ ಉದ್ಬವಿಸುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸ್ನೇಹಿತರು, ಪರಿಚಯಸ್ಥರಿಂದ ಸಾಲವನ್ನು ಸಹ ಪಡೆಯುತ್ತಾರೆ. ಈ ಸಾಲ ಪಡೆಯುವ ಅಭ್ಯಾಸ ಹಣದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹೀಗಿರುವಾಗ ಸಂಬಳ ಬಂದ ತಕ್ಷಣ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಒಂದಷ್ಟು ಅಗತ್ಯ ಕೆಲಸಗಳನ್ನು ಮಾಡಿದರೆ ತಿಂಗಳ ಕೊನೆಯಲ್ಲಿ ಯಾವುದೇ ಹಣದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಹಣಕಾಸಿನ ಸಮಸ್ಯೆಯಿಂದ ಪಾರಾಗಲು ಸಂಬಳವಾದ ತಕ್ಷಣವೇ ಈ ಕೆಲಸಗಳನ್ನು ಮಾಡಬೇಕು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 05, 2026 | 7:44 PM

ಸಂಬಳ (salary) ಬಂದ ತಕ್ಷಣವೇ ಮಾಡುವ ಅಜಾಗರೂಕ ಖರ್ಚು ತಿಂಗಳ ಅಂತ್ಯದ ವೇಳೆಗೆ ಸಾಕಷ್ಟು ಕೊರತೆಯನ್ನು ಉಂಟು ಮಾಡುತ್ತದೆ. ಬಂದ ಸಂಬಳವನ್ನು ಖರ್ಚು, ಉಳಿತಾಯಗಳಾಗಿ ಹೇಗೆ ವಿಭಜಿಸಬೇಕು ಎಂಬ ವಿಷಯ ಗೊತ್ತಿಲ್ಲದೆ, ಬೇಕಾಬಿಟ್ಟಿ ಖರ್ಚು ಮಾಡಿ ತಿಂಗಳ ಕೊನೆಯಲ್ಲಿ ಹಣದ ಕೊರತೆಯನ್ನು ಎದುರಿಸುತ್ತಾರೆ. ಇದೇ ರೀತಿ ನಿಮ್ಮ ಕೈಯಲ್ಲಿದ್ದ ಹಣವೂ ಸಹ ತಿಂಗಳ ಕೊನೆಯಲ್ಲಿ ಖಾಲಿಯಾಗುತ್ತಾ? ಒಂದು ವೇಳೆ ಹೀಗಾದರೆ  ಸಂಬಳ ನಿಮ್ಮ ಕೈಗೆ  ಬಂದ ತಕ್ಷಣ ತಿಂಗಳ ಖರ್ಚು ವೆಚ್ಚ, ಉಳಿತಾಯದ ಬಗ್ಗೆ ಸರಿಯಾಗಿ ಯೋಜನೆ ಮಾಡಿ. ಹೀಗೆ ಬಾಡಿಗೆ, ವಿದ್ಯುತ್ ಬಿಲ್‌ಗಳು, ಇಎಂಐಗಳು, ದಿನಸಿ ಮತ್ತು ಇತರ ಅಗತ್ಯ ವೆಚ್ಚ, ಉಳಿತಾಯದ ಬಗ್ಗೆ ಸರಿಯಾದ ಯೋಜನೆಯನ್ನು ರೂಪಿಸಿದರೆ, ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು ಜೊತೆಗೆ ತಿಂಗಳ ಕೊನೆಯಲ್ಲಿ ಇತರರ ಕೈಯಿಂದ ಹಣವನ್ನು ಸಾಲ ಪಡೆಯುವುದನ್ನು ಸಹ ತಪ್ಪಿಸಬಹುದು. ಹಣ ಉಳಿತಾಯ ಮಾಡಲು ಸಂಬಳ ಬಂದ ತಕ್ಷಣವೇ ಈ ಮುಖ್ಯ ಕೆಲಸಗಳನ್ನು ಮಾಡಿ.

ಮೊದಲು ಅಗತ್ಯ ವೆಚ್ಚಗಳಿಗೆ ಬೇಕಾದ ಹಣವನ್ನು ತೆಗೆದಿಟ್ಟುಕೊಳ್ಳಿ:

ಸಂಬಳ ಬಂದ ತಕ್ಷಣ, ಮೊದಲು ಪ್ರತಿ ತಿಂಗಳು ಮಾಡಬೇಕಾದ ಖರ್ಚುಗಳಿಗಾಗಿ ಹಣವನ್ನು ತೆಗೆದಿಡಿ. ಮತ್ತು ದಿನಸಿ, ಬಾಡಿಗೆ, ವಿದ್ಯುತ್, ನೀರು, ಗ್ಯಾಸ್, ಮೊಬೈಲ್, ಇಂಟರ್ನೆಟ್, ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳಂತಹ ಎಲ್ಲಾ ಪ್ರಮುಖ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಈ ರೀತಿ ಮಾಡುವುದರಿಂದ ಬಿಲ್‌ ಕಟ್ಟಬೇಕು, ಅದಕ್ಕೆ ಹಣ ಹೊಂದಿಸಬೇಕು ಎಂಬ ತಲೆಬಿಸಿ ಇರೋದಿಲ್ಲ.

ಮೊದಲೇ ಉಳಿತಾಯದ ಹಣವನ್ನು ಭದ್ರವಾಗಿ ತೆಗೆದಿಟ್ಟುಕೊಳ್ಳಿ:

ಹೆಚ್ಚಿನ ಜನರು ಮೊದಲು ಖರ್ಚು ಮಾಡಿ ನಂತರ ಅದರಲ್ಲಿ ಉಳಿದ ಹಣವನ್ನು ಉಳಿತಾಯಕ್ಕೆ ಹಾಕುತ್ತಾರೆ. ಇಲ್ಲವೇ ತಿಂಗಳ ಕೊನೆಯಲ್ಲಿ ಹಣವನ್ನು ಉಳಿಸುವ ಬಗ್ಗೆ ಯೋಚಿಸುತ್ತಾರೆ. ಈ ರೀತಿ ಮಾಡುವುದರಿಂದ ಸರಿಯಾದ ರೀತಿಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಂಬಳ ಬಂದ ತಕ್ಷಣವೇ ಉಳಿತಾಯದ ಭಾಗವನ್ನು ಭದ್ರವಾಗಿ ತೆಗೆದಿಟ್ಟುಕೊಳ್ಳಿ. ಮತ್ತು ನೀವು ಈ ಹಣವನ್ನು ಉಳಿತಾಯ ಖಾತೆ, SIP, RD ಅಥವಾ ಇತರ ಹೂಡಿಕೆ ಆಯ್ಕೆಯಲ್ಲಿ ಹೂಡಿಕೆ ಮಾಡಬಹುದು. ಇದು ನಿಮ್ಮ ಭವಿಷ್ಯಕ್ಕೂ ಒಂದು ಭದ್ರತೆಯನ್ನು ಒದಗಿಸುತ್ತದೆ.

ಮಾಸಿಕ ಬಜೆಟ್ ಅನ್ನು ಮುಂಚಿತವಾಗಿ ಸಿದ್ಧಪಡಿಸಿ:

ಸಂಬಳವಾದ ತಕ್ಷಣವೇ, ಇಡೀ ತಿಂಗಳಿಗೆ ಬಜೆಟ್ ಅನ್ನು ಸಿದ್ಧಪಡಿಸುವುದು ಮುಖ್ಯ. ಮೊದಲಿಗೆ ನಿಮ್ಮ ಮಾಸಿಕ ಖರ್ಚುಗಳನ್ನು ಯೋಜಿಸಿ. ದಿನಸಿ, ಪ್ರಯಾಣ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳು, ಶಾಪಿಂಗ್ ಮತ್ತು ಮನರಂಜನೆಯಂತಹ ಸಂಗತಿಗಳಿಗೆ ಬಜೆಟ್‌ ರೂಪಿಸಿ, ಅದಕ್ಕೆ ಪ್ರತ್ಯೇಕವಾಗಿ ಮೊತ್ತವನ್ನು ಮೀಸಲಿಡಿ. ಈ ರೀತಿ ಜಾಣತನದಿಂದ ಬಜೆಟ್‌ ರೂಪಿಸುವುದರಿಂದ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು.

ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಒಂದಷ್ಟು ಮೊತ್ತವನ್ನು ತೆಗೆದಿಡಿ:

ಆರೋಗ್ಯ ಸಮಸ್ಯೆ, ಉದ್ಯೋಗ ನಷ್ಟದಂತಹ ತೊಂದರೆಗಳು ಯಾವಾಗ, ಹೇಗೆ ಬರುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯನ್ನು ಒಂದಷ್ಟು ಮೊತ್ತವನ್ನು ಮೀಸಲಿಡಲೇಬೇಕು. ಹಾಗಾಗಿ ಸಂಬಳ ಬಂದ ತಕ್ಷಣವೇ ಸ್ವಲ್ಪ ಮೊತ್ತವನ್ನು ತುರ್ತು ನಿಧಿಗಾಗಿ ಮೀಸಲಿಡಿ. ನೀವು ವಿವೇಚನೆಯಿಂದ ಮಾಡುವ ಈ ಸಣ್ಣ ಕಾರ್ಯ ತುರ್ತು ಸಂದರ್ಭದಲ್ಲಿ ಇತರರಿಂದ ಸಾಲ ಪಡೆಯುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ

ಸಣ್ಣ ಆಸೆ, ಗುರಿಗಳಿಗೆ ಪ್ರತ್ಯೇಕ ಉಳಿತಾಯವನ್ನು ರಚಿಸಿ:

ನೀವು ಹೊಸ ಬೈಕ್, ಮೊಬೈಲ್ ಫೋನ್ ಖರೀದಿಸಬೇಕೆಂದಿದ್ದರೆ ಅಥವಾ ಟ್ರಿಪ್‌ಗೆ ಹೋಗುವ ಯೋಜನೆಯಲ್ಲಿದ್ದರೆ ಈ ನಿಮ್ಮ ಆಸೆಗಳನ್ನು ಪೂರೈಸಲು ತಿಂಗಳು ತಿಂಗಳು ಸಂಬಳವಾದ ತಕ್ಷಣವೇ ಒಂದಷ್ಟು ಹಣವನ್ನು ಉಳಿತಾಯ ಮಾಡಿ. ಸಂಬಳವಾದ ತಕ್ಷಣ ಮಾಡುವ ಈ ಒಂದು ಸಣ್ಣ ಉಳಿತಾಯ ಸಾಲ ತೆಗೆದುಕೊಳ್ಳುವ ಅಥವಾ ಅತಿಯಾದ ಖರ್ಚುಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದನ್ನು ತಡೆಯುತ್ತದೆ.

ಉಳಿತಾಯದ ಜೊತೆಗೆ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ ಮಾತ್ರ ತಿಂಗಳ ಕೊನೆಯಲ್ಲಿ ಯಾವುದೇ ಹಣಕಾಸಿನ ತೊಂದರೆಗಳು ಉದ್ಭವಿಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us