
ಹಣವನ್ನು (Money) ಸಂಪಾದಿಸುವ ಜೊತೆಗೆ, ಗಳಿಸಿದ ಹಣವನ್ನು ಉಳಿತಾಯ ಮಾಡಬೇಕು, ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡ್ಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇದೆ. ಆದರೆ ಅನೇಕರ ಕೈಯಲ್ಲಿ ಕಷ್ಟಪಟ್ಟು ಗಳಿಸಿದ ಹಣ ಉಳಿಯುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಹಣಕಾಸಿನ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು. ಅರಿವಿಲ್ಲದೆಯೇ ಮಾಡುವಂತಹ ಈ ಹಣಕಾಸಿನ ತಪ್ಪುಗಳು ಗಮನಾರ್ಹ ನಷ್ಟಗಳಿಗೆ ಕಾರಣವಾಗುತ್ತದೆ. ನೀವು ಸಹ ಈ ಕೆಟ್ಟ ಅಭ್ಯಾಸಗಳನ್ನು ಸಕಾಲದಲ್ಲಿ ಸರಿಪಡಿಸಿಕೊಳ್ಳದಿದ್ದರೆ, ಈ ಆರ್ಥಿಕ ತಪ್ಪುಗಳು ನಿಮ್ಮನ್ನು ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡಬಹುದು, ಇದು ನಿಮ್ಮನ್ನು ದಿವಾಳಿಯನ್ನಾಗಿ ಮಾಡಬಹುದು. ಹಾಗಿದ್ರೆ ಹಣಕಾಸಿನ ಯಾವ ತಪ್ಪುಗಳು ಅರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು ಎಂಬುದನ್ನು ನೋಡೋಣ ಬನ್ನಿ.
ಕ್ರೆಡಿಟ್ ಕಾರ್ಡ್‌ಗಳು ಮತ್ತು ವೈಯಕ್ತಿಕ ಸಾಲಗಳು ಅಗತ್ಯದ ಸಮಯದಲ್ಲಿ ಉಪಯುಕ್ತವಾಗಬಹುದು. ಈ ಕ್ರೆಡಿಟ್ ಕಾರ್ಡ್ ಸೌಲಭ್ಯವು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಮಾತ್ರ ಪ್ರಯೋಜನಕಾರಿಯಾಗಿದೆ. ಆದರೆ ಅವುಗಳ ಮೇಲೆ ವಿಧಿಸಲಾಗುವ ಬಡ್ಡಿಯು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ಕ್ರೆಡಿಟ್ ಕಾರ್ಡ್ ಮತ್ತು ವಿವಿಧ ಕಂಪೆನಿಗಳು ನೀಡುವ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಪ್ರತಿ ತಿಂಗಳು ನಿಮ್ಮ ಆದಾಯ ಮತ್ತು ಅಗತ್ಯ ಖರ್ಚುಗಳನ್ನು ಲೆಕ್ಕ ಹಾಕುವುದು ಮುಖ್ಯ. ಖರ್ಚು ಮಾಡುವಾಗ ಅಗತ್ಯ ಮತ್ತು ಬಯಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅನಗತ್ಯ ಸಾಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸಂಬಳ ಬಂದ ನಂತರ, ತಿಂಗಳ ಆರಂಭದಲ್ಲಿ ನೀವು ಇಡೀ ತಿಂಗಳು ಎಷ್ಟು ಮತ್ತು ಎಲ್ಲಿ ಖರ್ಚು ಮಾಡಬೇಕೆಂದು ಬಜೆಟ್ ಮಾಡಿ. ತಿಂಗಳ ಆರಂಭದಲ್ಲಿ ಬಜೆಟ್ ಮಾಡುವುದರಿಂದ ಎಷ್ಟು ಹಣ ಖರ್ಚು ಮಾಡಬೇಕು ಮತ್ತು ಎಷ್ಟು ಉಳಿಸಬೇಕು ಎಂದು ತಿಳಿಯಲು ಸಹಾಯವಾಗುತ್ತದೆ. ಇದು ಹಣಕಾಸಿನ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ.
ಉದ್ಯೋಗ ನಷ್ಟ, ಹಠಾತ್ ಅನಾರೋಗ್ಯ, ಮನೆ ದುರಸ್ತಿ ಅಥವಾ ಯಾವುದೇ ಇತರ ಪ್ರಮುಖ ವೆಚ್ಚಗಳು ಯಾವ ಸಮಯದಲ್ಲಿ ಬೇಕಾದರೂ ಉದ್ಭವಿಸಬಹುದು. ಅಂತಹ ಸಮಯಗಳಿಗಾಗಿ ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಾಲಗಳನ್ನು ಆಶ್ರಯಿಸಬೇಕಾಗುತ್ತದೆ. ಅದೇ ತುರ್ತು ನಿಧಿಯು ಅಂತಹ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ನಿಯಮಿತ ಉಳಿತಾಯದ ಒಂದು ಭಾಗವನ್ನು ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಿಡಿ.
ಆದಾಯ ಹೆಚ್ಚಾದಂತೆ ಕೆಲವರ ಖರ್ಚು ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಇದು ಕೂಡ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಆದಾಯ ಹೆಚ್ಚಾದಂತೆ ನಿಮ್ಮ ಖರ್ಚನ್ನು ಹೆಚ್ಚಿಸುವ ಬದಲು, ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದು ಉತ್ತಮ. ಇದು ಕಾಲಾನಂತರದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನೀವು ಹಣ ಉಳಿತಾಯ ಮಾಡಲು ಬಯಸಿದರೆ, ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ
ಕೇವಲ ಹಣ ಸಂಪಾದನೆ ಮಾಡಿದರೆ ಸಾಲದು, ನಿಮ್ಮ ಗುರಿಗಳು ಮತ್ತು ಸಮಯದ ಪ್ರಕಾರ ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸುವುದು ಸಹ ಮುಖ್ಯವಾಗಿದೆ. ಸರಿಯಾದ ಸ್ಥಳದಲ್ಲಿ ಹೂಡಿಕೆಯನ್ನು ಮಾಡಿ. ಹೂಡಿಕೆ ಮಾಡುವ ಮೊದಲು ನಿಮ್ಮ ಅಗತ್ಯತೆಗಳು ಮತ್ತು ಅಪಾಯದ ಹಂಬಲವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.
ಹಲವು ಬಾರಿ, ನಮಗೆ ಸಾಮಾನ್ಯವೆನಿಸುವ ಖರ್ಚುಗಳಿಂದಲೂ ದುಡ್ಡು ಸುಮ್ಮವೆ ವೇಸ್ಟ್ ಆಗುತ್ತವೆ. ಉದಾಹರಣೆಗೆ, ಕಾಲ್ನಡಿಗೆಯಲ್ಲಿ ಕ್ರಮಿಸಬಹುದಾದ ದೂರಕ್ಕೆ ಆಟೋರಿಕ್ಷಾ ಅಥವಾ ಟ್ಯಾಕ್ಸಿಯಲ್ಲಿ ಹೋಗುವುದು ಅಥವಾ ಆಫರ್ ನೋಡಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದು ಇವೆಲ್ಲವೂ ಸಣ್ಣ ವಿಷಯವಾದರೂ ಸುಮ್ಮನೆ ಹಣ ವ್ಯರ್ಥವಾಗಲು ಕಾರಣವಾಗುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ