Electricity Shocks Prevention: ಈ ಮಳೆಗಾಲದಲ್ಲಿ ಕರೆಂಟ್‌ ಶಾಕ್‌ ಅಪಾಯಗಳನ್ನು ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಿ

Electricity Shocks Prevention: ಮಳೆಗಾಲದಲ್ಲಿನ ಒಂದು ದೊಡ್ಡ ಸಮಸ್ಯೆಯೆಂದರೆ ಕರೆಂಟ್‌ ಶಾಕ್‌ ಹೊಡೆಯೋದು. ಹೌದು ಹೆಚ್ಚಿನ ಮನೆಗಳಲ್ಲಿ ಸ್ವಿಚ್‌ಬೋರ್ಡ್‌, ಫ್ರಿಡ್ಜ್‌, ವಾಷಿಂಗ್‌ ಮಿಷನ್‌ ಇತ್ಯಾದಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆಯುತ್ತದೆ. ಇಂತಹ ವಿದ್ಯುದಾಘಾತದಿಂದ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲೂ ವಿದ್ಯುತ್‌ಗೆ ಸಂಬಂಧಿಸಿದ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ನಿಮ್ಮನ್ನು ನೀವು ಸುರಕ್ಷಿತವಾಗಿರಿಸಲು ಈ ಕೆಲವೊಂದು ಅಗತ್ಯ ಸಲಹೆಗಳನ್ನು ಪಾಲಿಸಿ.

Electricity Shocks Prevention: ಈ ಮಳೆಗಾಲದಲ್ಲಿ ಕರೆಂಟ್‌ ಶಾಕ್‌ ಅಪಾಯಗಳನ್ನು ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Jul 09, 2026 | 5:43 PM

ಮುಖ್ಯಾಂಶಗಳು

  • ಮಳೆಗಾಲದಲ್ಲಿ ಶಾರ್ಟ್‌ ಸರ್ಕ್ಯೂಟ್‌, ಕರೆಂಟ್‌ ಶಾಕ್‌ನಂತಹ ಅಪಾಯಗಳು ಕಾಣಿಸಿಕೊಳ್ಳುತ್ತವೆ
  • ಮಳೆಗಾಲದಲ್ಲಿ ವಿದ್ಯುತ್‌ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನಗಳ ಬಗ್ಗೆಯೂ ಹೆಚ್ಚು ಜಾಗ್ರತೆ ವಹಿಸಬೇಕು
  • ಕರೆಂಟ್‌ ಶಾಕ್‌ನಂತಹ ಅಪಾಯಗಳ ಸಣ್ಣ ನಿರ್ಲಕ್ಷ್ಯ ಪ್ರಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ

ಮಳೆಗಾಲದಲ್ಲಿ ಸಿಡಿಲು ಬಡಿಯುವುದು, ಪ್ರವಾಹ ಇತ್ಯಾದಿ ಸಮಸ್ಯೆಗಳು ಒಂದೆಡೆಯಾದರೆ, ಇನ್ನೊಂದು ಕಡೆ ಮನೆಯೊಳಗೆ ವಿದ್ಯುತಾಘಾತಗಳು (Electricity Shocks) ತೀರಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೌದು ಸ್ವಿಚ್‌ಬೋರ್ಡ್‌, ಫ್ರಿಡ್ಜ್‌, ವಾಷಿಂಗ್‌ ಮಷನ್‌ ಇತ್ಯಾದಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆಯುವುದು, ಶಾರ್ಟ್‌ ಸರ್ಕ್ಯೂಟ್‌ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯವಹಿಸಬಾರದು ಏಕೆಂದರೆ ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲೂ ವಿದ್ಯುತ್‌ಗೆ ಸಂಬಂಧಿಸಿದ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಈ ಕೆಲಸಗಳನ್ನು ಮಾಡಿ.

ಮಳೆಗಾಲದಲ್ಲಿ ಮನೆಯಲ್ಲಿ ವಿದ್ಯುತ್‌ ಶಾಕ್‌ ಹೊಡೆಯಲು ಮುಖ್ಯ ಕಾರಣಗಳೇನು?

ಮಳೆಯಿಂದಾಗಿ ಗೋಡೆಗಳು ಒದ್ದೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಹಾಗೂ  ಸ್ವಿಚ್‌ಬೋರ್ಡ್‌ಗೆ ನೀರು ತಾಕಿದ್ರೆ ಅದನ್ನು ಮುಟ್ಟಿದ್ದಾಗ ಕರೆಂಟ್‌ ಶಾಕ್‌ ಹೊಡೆಯುತ್ತದೆ. ಅರ್ಥಿಂಗ್‌ ಅಳವಡಿಸದಿದ್ದರೆ, ಅರ್ಥಿಂಗ್‌ ಅಳವಡಿಸಿದ್ದು ಸರಿಯಾಗದಿದ್ದರೂ ಶಾಕ್‌ ಹೊಡೆಯುತ್ತದೆ. ಇದಲ್ಲದೆ ಒದ್ದೆ ಕೈಯಲ್ಲಿ ಸ್ವಿಚ್‌, ಫ್ರಿಡ್ಜ್‌ ಇತ್ಯಾದಿ ವಿದ್ಯುತ್‌ ಸಂಪರ್ಕದಲ್ಲಿರುವ ಉಪಕರಣಗಳನ್ನು ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆಯುವ ಸಾಧ್ಯತೆ ಇರುತ್ತದೆ.

ಮಳೆಗಾಲದಲ್ಲಿ ಕರೆಂಟ್‌ ಶಾಕ್‌ ಹೊಡೆಯದಂತೆ ನೋಡಿಕೊಳ್ಳುವುದು ಹೇಗೆ?

ಮನೆಯ ಅರ್ಥಿಂಗ್ ವ್ಯವಸ್ಥೆ ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳಿ: ಹೆಚ್ಚುವರಿ ವಿದ್ಯುತ್ ಪ್ರವಾಹವನ್ನು ಸುರಕ್ಷಿತವಾಗಿ ನೆಲಕ್ಕೆ ಸಾಗಿಸುವ ಕಾರ್ಯವನ್ನು ಅರ್ಥಿಂಗ್‌ ಮಾಡುತ್ತದೆ. ಮನೆಯ ಅರ್ಥಿಂಗ್ ವ್ಯವಸ್ಥೆ ದೋಷಪೂರಿತವಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಈ ಹೆಚ್ಚುವರಿ ವಿದ್ಯುತ್ ನೆಲವನ್ನು ತಲುಪುವ ಬದಲು ವಿದ್ಯುತ್ ಉಪಕರಣಗಳು ಮತ್ತು ಸ್ವಿಚ್‌ಬೋರ್ಡ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ, ಇದು ವಿದ್ಯುತ್ ಆಘಾತದ ಅಪಾಯವನ್ನು ಹೆಚ್ಚಿಸುತ್ತದೆ. ‌ಶಾರ್ಟ್‌ ಸರ್ಕ್ಯೂಟ್‌ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಎಲೆಕ್ಟ್ರಿಷಿಯನ್‌ ಕರೆಸಿ ಅರ್ಥಿಂಗ್‌ ವ್ಯವಸ್ಥೆಯನ್ನು ಸರಿ ಮಾಡಿಸಿಕೊಳ್ಳಿ ಅಥವಾ ಬೆರೆಯೇ ಅರ್ಥಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಬಹುದು.

ವಿದ್ಯುತ್ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಸಿ: ವಿದ್ಯುತ್ ನೀರಿನ ಮೂಲಕ ವೇಗವಾಗಿ ಚಲಿಸುತ್ತದೆ, ಆದ್ದರಿಂದ ಯಾವುದೇ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಒದ್ದೆ ಕೈಯಲ್ಲಿ ಮುಟ್ಟಬೇಡಿ. ಯಾವಾಗಲ ಐಎಸ್‌ಐ ಗುರುತು ಹೊಂದಿರುವ ಉಪಕರಣಗಳನ್ನು ಬಳಸಿ. ಇದು ಶಾರ್ಟ್ ಸರ್ಕ್ಯೂಟ್‌ ಅಪಾಯವನ್ನು ಕಡಿಮೆ ಮಾಡುತ್ತದೆ. ಇನ್ನೂ ಮಳೆಗಾಲದಲ್ಲಿ ವೈರ್‌ಗಳಲ್ಲಿ ಸಮಸ್ಯೆಯಿರುವ ಉಪಕರಣಗಳನ್ನು ಬಳಸಬೇಡಿ, ಇದರಿಂದ ಕರೆಂಟ್‌ ಶಾಕ್‌ ಹೊಡೆಯುವ ಅಪಾಯ ಹೆಚ್ಚಿರುತ್ತದೆ.

ಇದನ್ನೂ ಓದಿ: ಟೈಲ್ಸ್‌ ಫಳ ಫಳ ಹೊಳಿಬೇಕಾ? ಹಾಗಿದ್ರೆ ನೆಲ ಒರೆಸುವ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ

ಪ್ಲಗ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ: ಪ್ಲಗ್‌ಗಳನ್ನು ಸಾಕೆಟ್‌ಗೆ ಪ್ಲಗ್‌ ಮಾಡುವಾಗ ಬಹಳ ಜಾಗರೂಕರಾಗಿರಿ. ಪ್ಲಗ್‌ ಮಾಡಿದ ನಂತರವೇ ಸ್ವಿಚ್‌ ಆನ್‌ ಮಾಡಿ. ಅನ್‌ಪ್ಲಗ್ ಮಾಡುವಾಗ, ವೈರ್ ಹಿಡಿದುಕೊಂಡು ಸಂಪರ್ಕ ಕಡಿತಗೊಳಿಸಬೇಡಿ. ಪ್ಲಗ್ ಮಾತ್ರ ಬಳಸಿ ಬಳಸಿ. ಮಕ್ಕಳ ಕೈಗೆ ಎಟಕಬಹುದಾದಂತಹ ಸಾಕೆಟ್‌ ಬೋರ್ಡ್‌ಗಳನ್ನು ಮುಚ್ಚಿಡಿ. ಇನ್ನೂ ಮಳೆಗಾಲದಲ್ಲಿ ಗೀಸರ್‌, ಫ್ರಿಡ್ಜ್‌, ವಾಷಿಂಗ್‌ ಮಿಷನ್‌ನಂತಹ ದೊಡ್ಡ ವಿದ್ಯುತ್‌ ಉಪಕರಣಗಳಿಗೆ ಸೇಫ್ಟಿ ಪ್ಲಗ್‌ ಬಳಸಿ.

ರಬ್ಬರ್‌ ಬೂಟ್‌, ಗ್ಲಾವ್ಸ್‌ ಧರಿಸಿ: ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಬಳಸುವ ಮೊದಲು ಯಾವಾಗಲೂ ರಬ್ಬರ್ ಬೂಟುಗಳನ್ನು ಧರಿಸಿ ಅಥವಾ ಒಣ ಚಪ್ಪಲಿಯನ್ನೂ ಧರಿಸಬಹುದು. ಇನ್ನೂ ಎಲೆಕ್ಟ್ರಾನಿಕ್‌ ವಸ್ತುಗಳನ್ನು ರಿಪೇರಿ ಮಾಡುವಾಗ ರಬ್ಬರ್‌ ಗ್ಲಾವ್ಸ್‌ ಧರಿಸಬೇಕು.  ನೀರಿನ ಮೂಲಗಳು ಅಥವಾ ನಲ್ಲಿಗಳ ಬಳಿ ಯಾವುದೇ ವಿದ್ಯುತ್ ಸಾಧನವನ್ನು ಇಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Thu, 9 July 26

Follow Us