ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ ‘ವಿಶ್ವ ಅನಸ್ತೇಷಿಯಾ ದಿನ’ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಈ ದಿನಕ್ಕೆ ಬಹಳ ಪ್ರಮುಖ ಸ್ಥಾನವಿದೆ. 1846ರಲ್ಲಿ ಮೊಟ್ಟಮೊದಲ ಬಾರಿಗೆ ಡೈಇಥೈಲ್ ಏಥರ್ ಅನಸ್ತೇಷಿಯಾವನ್ನು ತಯಾರಿಸಲಾಯಿತು. ಅನಸ್ತೇಷಿಯಾವನ್ನು ಚಿಕಿತ್ಸೆಯ ಸಂದರ್ಭದಲ್ಲಿ ದೇಹದ ಸಂವೇದನೆ ಕಳೆಯುವಂತೆ ಮಾಡಲು ಅಥವಾ ಪ್ರಜ್ಞೆ ತಪ್ಪುವಂತೆ ಮಾಡಲು ಕೂಡ ಬಳಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಸಾಧನವಾಗಿದ್ದು, ಆ ನಿಟ್ಟಿನಲ್ಲಿ 1846ರಲ್ಲಿ ಕಂಡುಹಿಡಿದ ಡೈಇಥೈಲ್ ಈಥರ್ ಅನಸ್ತೇಷಿಯಾ ಪ್ರಮುಖ ಹೆಜ್ಜೆಯಾಯಿತು.
ವಿಶ್ವ ಅನಸ್ತೇಷಿಯಾ ದಿನದ ಪ್ರಾಮುಖ್ಯತೆ ಮತ್ತು ಹಿನ್ನೆಲೆ:
ಪ್ರಸ್ತುತ ನಡೆಸಲಾಗುವ ಯಾವುದೇ ಶಸ್ತ್ರಚಿಕಿತ್ಸೆಗಳಲ್ಲಿ ರೋಗಿಗಳು ನೋವನ್ನು ಅನುಭವಿಸುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಅನಸ್ತೇಷಿಯಾದ ಪರಿಣಾಮ. ಆದ್ದರಿಂದಲೇ ಇದರ ಮಹತ್ವವನ್ನು ಸಾರಲು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಅನಸ್ತೇಷಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.
ಸುಮಾರು 173 ವರ್ಷದ ಹಿಂದೆ ಡಬ್ಲ್ಯೂ.ಟಿ.ಜಿ ಮಾರ್ಟನ್ ಎಂಬುವವರುಮೊದಲ ಬಾರಿಗೆ ಈಥರ್ ಅನ್ನು ಅನಸ್ತೇಷಿಯಾ ಆಗಿ ಬಳಸಿ ಯಶಸ್ವಿಯಾದರು. ನಂತರದಲ್ಲಿ ವೈದ್ಯಕೀಯ ಲೋಕದಲ್ಲಿ ಅನಸ್ತೇಷಿಯಾ ಕುರಿತ ಪ್ರತ್ಯೇಕ ಶಾಖೆಯೇ ಬೆಳೆದಿದ್ದು, ‘ಅನಸ್ತೇಷಿಯಾಲಜಿ’ ಎಂದು ಅದನ್ನು ಕರೆಯಲಾಗುತ್ತದೆ. ಪ್ರಸ್ತುತದ ವೈದ್ಯಕೀಯ ಲೋಕವನ್ನು ಅನಸ್ತೇಷಿಯಾವಿಲ್ಲದೇ ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಅಕ್ಟೋಬರ್ 16ರಂದು ‘ವಿಶ್ವ ಅನಸ್ತೇಷಿಯಾ ದಿನ’ವನ್ನುಆಚರಿಸಲಾಗುತ್ತಿದ್ದು, ಇಂದು ವಿಶ್ವದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅನಸ್ತೇಷಿಯಾದಲ್ಲಿ ಮೂರು ವಿಧಗಳಿವೆ. ಒಂದು, ಜನರಲ್ ಅನಸ್ತೇಷಿಯಾ. ಇದರಲ್ಲಿ ರೋಗಿಯನ್ನು ಸಂಪೂರ್ಣವಾಗಿ ಪ್ರಜ್ಞೆ ತಪ್ಪಿಸಲಾಗುತ್ತದೆ. ಇದರಲ್ಲಿ ಉಸಿರಾಟ ಅಥವಾ ಐವಿ ಮುಖಾಂತರ ಔಷಧವನ್ನು ನೀಡಲಾಗುತ್ತದೆ. ಎರಡನೆಯದು, ಲೋಕಲ್ ಅನಸ್ತೇಷಿಯಾ. ಇದರಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿ ತುಸು ಎಚ್ಚರದಿಂದಿರುತ್ತಾನೆ. ಮೂರನೆಯದು, ರೀಜಿನಲ್ ಅನಸ್ತೇಷಿಯಾ. ಇದರಲ್ಲಿ ರೋಗಿ ಎಚ್ಚರದಿಂದಿರುತ್ತಾನೆ. ಆದರೆ ಆತನ ದೇಹದ ಭಾಗಗಳು ಸಂವೇದನೆ ಕಳೆದುಕೊಂಡಿರುತ್ತವೆ. ಇದರಿಂದ ರೋಗಿಗೆ ನೋವಾಗುವುದಿಲ್ಲ. ಅನಸ್ತೇಷಿಯಾದಿಂದ ಇನ್ನೂ ಹಲವಾರು ಪ್ರಯೋಜನಗಳಿದ್ದು, ವೈದ್ಯಕೀಯ ಲೋಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇದು ಸಹಾಯ ಮಾಡಿದೆ.
ಇದನ್ನೂ ಓದಿ: