ದಿನಕ್ಕೊಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು?

ಈಗಂತೂ ಮಾರುಕಟ್ಟೆಯಲ್ಲಿ ಪೇರಳೆಹಣ್ಣು ಹೇರಳವಾಗಿ ಲಭ್ಯವಿದೆ. ತುಂಬಾನೇ ಸಿಹಿಯಾಗಿರುವ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಹೌದು ಈ ಹಣ್ಣು ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ದಿನಕ್ಕೊಂದು ಪೇರಳೆ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ದಿನಕ್ಕೊಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು?
ಪೇರಳೆಹಣ್ಣಿನ ಆರೋಗ್ಯ ಪ್ರಯೋಜನ
Image Credit source: vecteezy

Updated on: Oct 20, 2026 | 7:31 PM

ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿಯೊಂದು ಹಣ್ಣು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ಋತುಮಾನದಲ್ಲಿ ಲಭ್ಯವಿರುವ ಹಣ್ಣುಗಳನ್ನು ತಿನ್ನುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಪೇರಳೆ ಹಣ್ಣು (guava) ಹೇರಳವಾಗಿ ಲಭ್ಯವಿದ್ದು, ದಿನಕ್ಕೊಂದು ಸೀಬೆಹಣ್ಣನ್ನು ತಿನ್ನಲು ಪ್ರಾರಂಭಿಸಿ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಿದ್ದು, ಇದು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆಯ ಸುಧಾರಣೆಯಿಂದ ಹಿಡಿದು ತೂಕನಿಯಂತ್ರಣದವರೆಗೆ ಪೇರಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಪೇರಳೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ:

ಸೀಬೆಹಣ್ಣು ಫೈಬರ್‌ನಿಂದ ಸಮೃದ್ಧವಾಗಿದೆ. ಈ ಫೈಬರ್ ಕರುಳಿನ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಈ ಹಣ್ಣು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಡಲು ಸಹಾಯ ಮಾಡುತ್ತದೆ.

ಸೀಬೆಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:

ಪೇರಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು  ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಪೇರಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ:

ಪೇರಳೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದರ ಫೈಬರ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಆದರೆ ಪೇರಳೆ ತಿನ್ನುವುದರಿಂದ ಮಾತ್ರ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುವುದಿಲ್ಲ. ಇದಕ್ಕಾಗಿ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಅಗತ್ಯ. ಇದಲ್ಲದೆ ಪೇರಳೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ತುಂಬಾನೇ ಸಹಕಾರಿ.

ತೂಕವನ್ನು ನಿಯಂತ್ರಿಸಲು ಪೇರಳೆಹಣ್ಣು ಸಹಕಾರಿ:

ಸೀಬೆಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಇದಲ್ಲದೆ, ಪೇರಳೆ ಸೇವಿಸುವುದರಿಂದ ಹೊಟ್ಟೆ ಹೆಚ್ಚು ಸಮಯದವರೆಗೆ ತುಂಬಿರುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಈ ಹಣ್ಣು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:

ಪೇರಳೆಹಣ್ಣು ಹೇರಳವಾದ ನೀರಿನಾಂಶವನ್ನು ಹೊಂದಿದ್ದು, ಇದು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕರ ಚರ್ಮದ ಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು  ಚರ್ಮದ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲ ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ದಿನಕ್ಕೆ ಎಷ್ಟು ಪೇರಳೆ ಹಣ್ಣು ತಿನ್ನಬೇಕು?

ಪೇರಳೆವು ಪೌಷ್ಟಿಕ ಹಣ್ಣಾಗಿದ್ದರೂ, ಅತಿಯಾಗಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್‌ ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಆದ್ದರಿಂದ ಸಾಮಾನ್ಯವಾಗಿ, ದಿನಕ್ಕೆ ಒಂದು ಮಧ್ಯಮ ಗಾತ್ರದ ಪೇರಳೆ ಅಥವಾ ಒಂದು ಸಣ್ಣ ಕಪ್ ಕತ್ತರಿಸಿದ ಪೇರಳೆ ತಿನ್ನುವುದು ಉತ್ತಮ. ಮೂತ್ರಪಿಂಡದ ಸಮಸ್ಯೆ ಇರುವವರು ಪೇರಳೆ ಸೇವಿಸುವ ಮೊದಲು ತಮ್ಮ ವೈದ್ಯರ ಸಲಹೆಯನ್ನು ಕೇಳುವುದು ಉತ್ತಮ.

ಇದನ್ನೂ ಓದಿ: ಸತತ 15 ದಿನಗಳವರೆಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಪೇರಳೆ ಎಲೆಗಳು ಸಹ ಆರೋಗ್ಯಕ್ಕೆ  ಪ್ರಯೋಜನಕಾರಿ:

  • ಪೇರಳೆ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಹಚ್ಚುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
  • ಪೇರಳೆ ಎಲೆಗಳನ್ನು ಅಗಿಯುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
  • ಪೇರಳೆ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.
  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಅಗಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ,
  • ಪೇರಳೆ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
  • ಪೇರಳೆ ಎಲೆಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us