
ಇಂದಿನ ಬ್ಯುಸಿ, ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಹಾಗಾಗಿ ಹೆಚ್ಚಿನವರು ಯೋಗ, ವ್ಯಾಯಾಮವನ್ನು (exercise) ಅಭ್ಯಾಸ ಮಾಡುತ್ತಾರೆ. ಬಹುಪಾಲು ಜನ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೌದು ತೂಕ ಇಳಿಸಿಕೊಳ್ಳಲು, ದೇಹವನ್ನು ಫಿಟ್ ಆಗಿರಿಸಲು ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಒಂದಷ್ಟು ಜನ ಔರ್ಕ್‌ಔಟ್ ಮಾಡುವ ಮುನ್ನ ದೇಹವನ್ನು ವಾರ್ಮ್‌ಅಪ್ ಮಾಡೋದಿಲ್ಲ. ನೇರವಾಗಿ ವ್ಯಾಯಾಮವನ್ನೇ ಮಾಡುತ್ತಾರೆ. ವ್ಯಾಯಾಮಕ್ಕೂ ಮುನ್ನ ವಾರ್ಮ್‌ಅಪ್ ಮಾಡದಿದ್ದರೆ ಏನಾಗುತ್ತದೆ, ವಾರ್ಮ್‌ಅಪ್ ಮಾಡುವುದು ಏಕೆ ಮುಖ್ಯ, ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.
ವಾಹನವನ್ನು ಪ್ರಾರಂಭಿಸುವ ಮೊದಲು ಎಂಜಿನ್ ಅನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಾಗಿಸುತ್ತೇವೆ. ಅದೇ ರೀತಿ, ವ್ಯಾಯಾಮದಂತಹ ಯಾವುದೇ ಕಠಿಣ ದೈಹಿಕ ಚಟುವಟಿಕೆಗೆ ನಮ್ಮ ದೇಹವನ್ನು ಸಿದ್ಧಪಡಿಸುವಾಗ, ಲಘು ವ್ಯಾಯಾಮದೊಂದಿಗೆ ದೇಹವನ್ನು ಬೆಚ್ಚಗಾಗುವುದು ಮುಖ್ಯ. ವಾರ್ಮ್ ಅಪ್ ಎಂದರೆ ದೇಹವನ್ನು ತೀವ್ರವಾದ ವ್ಯಾಯಾಮ ಅಥವಾ ವ್ಯಾಯಾಮಗಳಿಗೆ ಕ್ರಮೇಣ ಸಿದ್ಧಪಡಿಸಲು ಹಗುರವಾದ ದೈಹಿಕ ಚಟುವಟಿಕೆ ಅಥವಾ ಸ್ಟ್ರೆಚಿಂಗ್ ಆಗಿದೆ. ಇದು ದೇಹವು ವಿಶ್ರಾಂತಿ ಸ್ಥಿತಿಯಿಂದ ವ್ಯಾಯಾಮಕ್ಕೆ ಸಿದ್ಧ ಸ್ಥಿತಿಗೆ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಜಾಗಿಂಗ್, ಸ್ಟ್ರೆಚಿಂಗ್, ಜಂಪಿಂಗ್ ಜ್ಯಾಕ್ಸ್ ಅಥವಾ ತೋಳನ್ನು ತಿರುಗಿಸುವಂತ 5-10 ನಿಮಿಷಗಳ ಲಘು ವ್ಯಾಯಾಮಗಳು ಸೇರಿವೆ.
ಈ ವಾರ್ಮ್ ಅಪ್ ದೇಹವನ್ನು ಹಠಾತ್ ದೈಹಿಕ ಒತ್ತಡಕ್ಕೆ ಸಿದ್ಧಪಡಿಸುತ್ತದೆ. ಕ್ರಮೇಣ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ, ಸ್ನಾಯುಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ, ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೆಚ್ಚು ಸಮಯ ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಇದು ನಮ್ಯತೆಯನ್ನು ಸುಧಾರಿಸುತ್ತದೆ, ಗಾಯಗಳಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸರಿಯಾದ ವಾರ್ಮ್ ಅಪ್ ಗಾಯಗಳನ್ನು ತಡೆಯುವುದಲ್ಲದೆ, ವ್ಯಾಯಾಮದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ
ಫಿಟ್ನೆಸ್ ತರಬೇತುದಾರರು ಹೇಳುವಂತೆ ವಾರ್ಮ್ ಅಪ್ ಮಾಡದೆ ತೀವ್ರವಾದ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ತಣ್ಣಗಾಗುತ್ತವೆ. ಇದು ಸ್ನಾಯು ಸೆಳೆತ, ಗಾಯಗಳು ಅಥವಾ ಹೆಚ್ಚಿದ ನೋವಿಗೆ ಕಾರಣವಾಗಬಹುದು. ಆದ್ದರಿಂದ, ವ್ಯಾಯಾಮದ ಮೊದಲು ವಾರ್ಮ್ ಅಪ್ ಮಾಡುವುದು ಬಹಳ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ