
ರಕ್ತದಾನವು (Blood donation) ಮಹಾದಾನ ಮಾತ್ರವಲ್ಲ ಇದು ಮಾನವೀಯತೆಯ ಅಮೂಲ್ಯವಾದ ಅಭಿವ್ಯಕ್ತಿಯೂ ಹೌದು. ಅಪಘಾತಕ್ಕೀಡಾದವರಿಗೆ, ಕ್ಯಾನ್ಸರ್ ರೋಗಿಗಳಿಗೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ಹೀಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ರಕ್ತ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ರಕ್ತ ದಾನವನ್ನು ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ರಕ್ತದಾನದ ಈ ಮಹತ್ವವನ್ನು ಸಾರಲು, ರಕ್ತದಾನ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಹಾಗೂ ರಕ್ತದಾನಿಗಳನ್ನು ಗೌರವಿಸಲು ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಆರೋಗ್ಯ ಸಂಸ್ಥೆ (WHO), ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ ಒಕ್ಕೂಟ (IFRC), ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸಂಘ (ISBT), ಮತ್ತು ಅಂತರರಾಷ್ಟ್ರೀಯ ರಕ್ತದಾನ ಸಂಸ್ಥೆಗಳ ಒಕ್ಕೂಟ (IFBDO) ಜಂಟಿಯಾಗಿ ವಿಶ್ವ ರಕ್ತದಾನಿಗಳ ದಿನದ ಆಚರಣೆಯನ್ನು ಪ್ರಾರಂಭಿಸಿದವು. ಈ ದಿನವನ್ನು ಮೊದಲ ಬಾರಿಗೆ 2004 ರಲ್ಲಿ ಆಚರಿಸಲಾಯಿತು. ನಂತರ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನ . ABO ರಕ್ತ ಗುಂಪುಗಳನ್ನು ಕಂಡುಹಿಡಿದ ಮತ್ತು ರಕ್ತ ಗುಂಪುಗಳನ್ನು ವರ್ಗೀಕರಿಸಲು ಆಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಜೂನ್ 14 ರಂದೇ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಕ್ಕಳ ಸುಂದರ ಬಾಲ್ಯ, ಉಜ್ವಲ ಭವಿಷ್ಯವನ್ನು ಕಸಿಯುತ್ತಿದೆ ಬಾಲ ಕಾರ್ಮಿಕ ಪದ್ಧತಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ