ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ
Image Credit source: Getty Images
ಬಾಲ್ಯವು ಜೀವನದ ಅತ್ಯಂತ ಸ್ಮರಣೀಯ ಘಟ್ಟವಾಗಿದ್ದು, ಪ್ರತಿಯೊಂದು ಮಗುವಿಗೂ ಈ ಬಾಲ್ಯವನ್ನು ಆನಂದಿಸುವ, ಶಾಲೆಗೆ ಹೋಗುವ, ಸ್ನೇಹಿತರ ಜೊತೆ ಸೇರಿ ಆಡುವ ಹಕ್ಕಿದೆ. ಆದರೆ ಬಾಲ ಕಾರ್ಮಿಕ (Child Labour) ಪದ್ಧತಿ ಎಂದು ಅನಿಷ್ಠ ಪಿಡುಗಿನ ಕಾರಣ ಅದೆಷ್ಟೋ ಮಕ್ಕಳಿಗೆ ತಮ್ಮ ಸುಂದರ ಬಾಲ್ಯವನ್ನು ಸವಿಯುವ ಅವಕಾಶವೇ ಇಲ್ಲದಂತಾಗಿದೆ. ಹೌದು 14 ವರ್ಷದೊಳಗಿನ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಬಾರದು, ಅವರನ್ನು ಶಾಲೆಗೆ ಕಳುಹಿಸಬೇಕು ಎಂಬ ಕಠಿಣ ನಿಯಮವಿದ್ದರೂ, ಇಂದಿಗೂ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಮಕ್ಕಳ ಹಕ್ಕುಗಳನ್ನು ರಕ್ಷಿಸಲು, ಜಾಗತಿಕ ಸಮಸ್ಯೆಯಾಗಿರುವ ಬಾಲ ಕಾರ್ಮಿಕ ಪದ್ಧತಿನ್ನು ನಿರ್ಮೂಲನೆ ಮಾಡಲು ಪ್ರತಿವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಇತಿಹಾಸವೇನು?
ಬಾಲ ಕಾರ್ಮಿಕ ಪದ್ಧತಿಯೆಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ 2002 ರಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವವೇನು?
- ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ದೂರವಿಟ್ಟು ಅವರನ್ನು ಶಿಕ್ಷಣದತ್ತ ಸಾಗುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವದಾದ್ಯಂತ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
- ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ. ಹಾಗಾಗಿ ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಮಕ್ಕಳನ್ನು ರಕ್ಷಿಸಲು ಈ ದಿನವನ್ನು ಆಚರಿಸಲಾಗುತ್ತದೆ.
- ಈ ದಿನವು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ, ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದೆ.
- ಈ ದಿನದಂದು ಮಕ್ಕಳಿಂದ ದುಡಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ಹಾಗೂ ಜಾಥಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ರಕ್ತ ಸಂಬಂಧಕ್ಕೂ ಮಿಗಿಲಾದ ಪವಿತ್ರ ಬಂಧವೇ ಸ್ನೇಹ
ಬಾಲ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸಲು ನಾವು ಏನು ಮಾಡಬಹುದು?
- ದೇಶದ ಪ್ರಗತಿಗಾಗಿ ಮತ್ತು ಪ್ರತಿ ಮಗುವಿನ ಉತ್ತಮ ಭವಿಷ್ಯದ ದೃಷ್ಟಿಯಿಂದ, ಬಾಲ ಕಾರ್ಮಿಕ ಪದ್ಧತಿಯನ್ನು ಕಂಡಾಗ ಮೌನವಾಗಿರಬೇಡಿ. ಬದಲಿಗೆ ತಕ್ಷಣವೇ ಪೊಲೀಸ್ ಅಥವಾ ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿ.
- ಬಡ ಮಕ್ಕಳಿಗೆ ಓದಲು ಪ್ರೋತ್ಸಾಹಿಸಿ. ಶಿಕ್ಷಣವು ಆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದು ಅವರ ಪೋಷಕರಿಗೆ ತಿಳಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ