
ಸಾರ್ವಜನಿಕ ಸಾರಿಗೆಯನ್ನು (public transport) ಬಳಸುವುದರಿಂದ ಹಣ ಉಳಿತಾಯವಾಗುವುದಲ್ಲದೆ, ಪರಿಸರಕ್ಕೂ ಒಳ್ಳೆಯದು. ಆದರೆ ಇಂದಿನ ಈ ಕಾಲಘಟ್ಟದಲ್ಲಿ ಜನರು ಸ್ವಂತ ವಾಹನಗಳನ್ನು ಖರೀದಿಸಿ ಅದರಲ್ಲೇ ಓಡಾಡಲು ಆರಂಭಿಸಿದ್ದಾರೆ. ಇದರಿಂದ ಹೆಚ್ಚಿನವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೀಗೆ ರಸ್ತೆಗಳಲ್ಲಿ ಹೆಚ್ಚು ಹೆಚ್ಚು ವಾಹನಗಳ ಓಡಾಟ ಹೆಚ್ಚಾದಂತೆ ವಾಹನಗಳು ಸೂಸುವ ಹೊಗೆ, ಹಾರ್ನ್ ಸದ್ದುಗಳಿಂದ ಪರಿಸರ ಮಾಲಿನ್ಯ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಟ್ರಾಫಿಕ್ ಜಾಮ್, ಇಂಧನದ ಅತಿಯಾದ ಬಳಕೆಯಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಅದೇ ಪ್ರತಿಯೊಬ್ಬರೂ ಬಸ್ಸು, ಮೆಟ್ರೋಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವ ಮೂಲಕ ಸಂಚಾರದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಕೊಡುಗೆಯನ್ನು ನೀಡಬಹುದು. ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಇನ್ನೂ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಸ್ವಂತ ವಾಹನಗಳ ಬಳಕೆ ಹೆಚ್ಚಾದಂತೆ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಇಂಧನದಂತಹ ಸಂಪನ್ಮೂಲಗಳ ಸವಕಳಿ ಸಮಸ್ಯೆಗಳು ಕೂಡಾ ಹೆಚ್ಚಾದವು. ಹೀಗೆ ನಗರೀಕರಣದಿಂದ ಉಂಟಾದ ಈ ಸಮಸ್ಯೆಗಳಿಂದ ಪರಿಸರವನ್ನು ರಕ್ಷಿಸಲು ಜನರು ಹೆಚ್ಚಾಗಿ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಬೇಕು ಎಂದು ಜಾಗೃತಿ ಮೂಡಿಸಲು 2000 ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 10 ರಂದು ವಿಶ್ವ ಸಾರಿಗೆ ದಿನವನ್ನು ಆಚರಿಸುತ್ತಾ ಬರಲಾಗುತ್ತದೆ.
ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜನರು ಸಾರ್ವಜನಿಕ ಸಾರಿಗೆಗಳ ಬದಲು ಸ್ವಂತ ವಾಹನಗಳನ್ನು ಉಪಯೋಗಿಸಿದಾಗ ವಿಷಕಾರಿ ಹೊಗೆಗಳು ಹೊರಸೂಸಿ ಹಾಗೂ ಶಬ್ದಗಳಿಂದ ಪರಿಸರ ಮಾಲಿನ್ಯವಾಗುವುದು ಮಾತ್ರವಲ್ಲದೆ ಇದು ಟ್ರಾಫಿಕ್ ಜಾಮ್ ಸಮಸ್ಯೆ, ಆಕ್ಸಿಡೆಂಟ್‌ಗಳಂತಹ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ. ಹೀಗಿರುವಾಗ ನಾವು ನಮ್ಮ ಸ್ವಂತ ವಾಹನಗಳನ್ನು ಬಳಸುವುದನ್ನು ಬಿಟ್ಟು ನಮ್ಮ ದಿನನಿತ್ಯದ ಓಡಾಟಕ್ಕೆ ರೈಲುಗಳು, ಟ್ಯಾಕ್ಸಿಗಳು, ಬಸ್, ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದಾಗ ಟ್ರಾಫಿಕ್ ಜಾಮ್ ಜಾಮ್ ಸಮಸ್ಯೆಯಿಂದ ಹಿಡಿದು ವಾಹನಗಳಿಂದ ಹೊರಸೂಸುವ ವಿಷಕಾರಿ ಹೊಗೆಗಳಿಂದ ಉಂಟಾಗುವ ಮಾಲಿನ್ಯವನ್ನು ಸಹ ಕಡಿಮೆಯಾಗುತ್ತದೆ. ಇದು ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯಗಳಂತಹ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಮಾತ್ರವಲ್ಲದೆ ನೈಸರ್ಗಿಕ ಇಂಧನದ ಮಿತಿಮೀರಿದ ಬಳಕೆಗೂ ಕಡಿವಾಣ ಹಾಕಿದಂತಾಗುತ್ತದೆ.
ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ನಿಮ್ಮ ಪ್ರಯಾಣ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಸ್ವಂತ, ಖಾಸಗಿ ವಾಹನದಲ್ಲಿ ಪ್ರಯಾಣಿಸುವುದರಿಂದ ಇಂಧನ, ಪಾರ್ಕಿಂಗ್ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಾಗುತ್ತವೆ, ಆದರೆ ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುವುದರಿಂದ ಇದು ನಿಮ್ಮ ಜೇಬಿನ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ನಿಮ್ಮ ಉಳಿತಾಯವನ್ನು ಇತರ ಅಗತ್ಯ ವಸ್ತುಗಳಿಗೆ ಖರ್ಚು ಮಾಡಲು ಅನುವು ಮಾಡಿಕೊಡುತ್ತದೆ.
ಜನರು ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದರಿಂದ ಟ್ರಾಫಿಕ್ ಜಾಮ್ ನಿವಾರಣೆಯಾಗುತ್ತದೆ. ಇದು ನಿಮ್ಮ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ಹೆಚ್ಚಿನ ಟ್ರಾಫಿಕ್ ಇರುವ ದೊಡ್ಡ ನಗರಗಳಲ್ಲಿ, ಮೆಟ್ರೋಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವುದೇ ಉತ್ತಮ. ಇದಲ್ಲದೆ, ಸಾರ್ವಜನಿಕ ಸಾರಿಗೆಯು ನಿಗದಿತ ವೇಳಾಪಟ್ಟಿಯನ್ನು ಹೊಂದಿರುತ್ತವೆ, ಇದರಿಂದ ನೀವು ನಿಮ್ಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬಹುದು ಮತ್ತು ಇತರ ಪ್ರಮುಖ ಕಾರ್ಯಗಳಿಗೆ ಸಮಯವನ್ನು ಮೀಸಲಿಡಬಹುದು.
ಇದನ್ನೂ ಓದಿ: ಸುನಾಮಿಗೆ ಕಾರಣವೇನು? ಅದು ಹೇಗೆ ಸಂಭವಿಸುತ್ತೆ?
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದರಿಂದ ನಿಮಗೆ ವಿವಿಧ ರೀತಿಯ ಜನರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಇದು ನಿಮ್ಮ ಸಾಮಾಜಿಕ ಸಂಪರ್ಕಗಳನ್ನು ಹೆಚ್ಚಿಸುತ್ತದೆ ಮತ್ತು ಹೊಸ ಸ್ನೇಹಗಳಿಗೆ ಕಾರಣವಾಗಬಹುದು. ಇದಲ್ಲದೆ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ನೀವು ಸ್ಥಳೀಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಹತ್ತಿರದಿಂದ ತಿಳಿದುಕೊಳ್ಳಬಹುದು. ಈ ಅನುಭವವು ನಿಮ್ಮ ಜೀವನವನ್ನು ಹೆಚ್ಚು ಆಸಕ್ತಿದಾಯಕವಾಗಿಸುತ್ತದೆ ಮತ್ತು ಹೊಸ ದೃಷ್ಟಿಕೋನಗಳಿಗೆ ನಿಮ್ಮನ್ನು ಪರಿಚಯಿಸುತ್ತದೆ.
ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ನೀವು ಸ್ವಲ್ಪ ನಡೆಯಬೇಕಾಗುತ್ತದೆ, ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ವಿಶೇಷವಾಗಿ ಮೆಟ್ರೋ ನಿಲ್ದಾಣಕ್ಕೆ ನಡೆದುಕೊಂಡು ಹೋಗುವುದರಿಂದ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದು ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು ನಿಮ್ಮನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ, ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಆರ್ಥಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಪರಿಸರ ದೃಷ್ಟಿಕೋನದಿಂದಲೂ ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಇನ್ನು ಮುಂದೆ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನೇ ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ