ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರ ಕಾಣಿಸಿಕೊಳ್ಳುತ್ತವೆ. ದೈನಂದಿನ ಚಟುವಟಿಕೆಗಳಿಗೆ ಬಿಡಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ. ಹೌದು, ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ, ಕೊಳ, ನದಿ ಸೇರಿದಂತೆ ಅದೆಷ್ಟೋ ಸಿಹಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಿಗೂ ಕುಡಿಯಲು ನೀರಿಲ್ಲ. ಅದಲ್ಲದೇ, ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆಯಾದರೂ ನೀರನ್ನು ಮಿತವಾಗಿ ಬಳಸುವವರು ಕೆಲವೇ ಕೆಲವು ಜನರಷ್ಟೇ. ಹೀಗಾಗಿ ನೀರಿನ ಬಳಕೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು ನೀರನ್ನು ಉಳಿತಾಯ ಮಾಡುವುದು ಕಷ್ಟವೇನಲ್ಲ.
ನೀರಿನ ಉಳಿತಾಯಕ್ಕೆ ಇಲ್ಲಿದೆ ಸರಳ ಮಾರ್ಗಗಳು:
- ಮನೆಯಲ್ಲಿ ಪಾತ್ರೆ ತೊಳೆಯುವಾಗ ನಳ್ಳಿ ನೀರು ಪೋಲಾಗುವುದನ್ನು ಮೊದಲು ನಿಲ್ಲಿಸಿ.
- ಮನೆಯಲ್ಲಿ ಲೀಕೇಜ್ ಇರುವ ಪೈಪ್ ಗಳು, ನಳ್ಳಿಗಳಿದ್ದರೆ ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದನ್ನು ಮರೆಯದಿರಿ.
- ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯುವಾಗ ನೀರು ಪೋಲಾಗುವುದನ್ನು ತಪ್ಪಿಸಿ. ಬಟ್ಟಲಿನಲ್ಲಿ ನೀರು ತೆಗೆದುಕೊಂಡು ತೊಳೆಯುವುದರಿಂದ ನೀರನ್ನು ಸಂರಕ್ಷಿಸಿದಂತಾಗುತ್ತದೆ.
- ವೇಸ್ಟ್ ನೀರನ್ನು ಮನೆಯ ಹಿಂಭಾಗದಲ್ಲಿರುವ ಹೂವಿನ ಗಿಡಗಳಿಗೆ ಬಿಡುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳಿ.
- ವಾಷಿಂಗ್ ಮೆಶಿನ್ ಆಯ್ಕೆ ಮಾಡುವಾಗ ಹೆಚ್ಚು ದಕ್ಷತೆ ಇರುವ ಮೆಶಿನ್‌ಗಳನ್ನು ಖರೀದಿ ಮಾಡಿದರೆ ನೀರಿನ ಬಳಕೆಯು ಕಡಿಮೆಯಾಗುತ್ತದೆ. ಅದಲ್ಲದೇ ಸ್ವಲ್ಪ ಬಟ್ಟೆಗಳಿದ್ದರೆ ಎರಡು ದಿನಕ್ಕೊಮ್ಮೆ ಬಟ್ಟೆಗಳನ್ನು ವಾಶ್ ಗೆ ಹಾಕಿ.
- ಮನೆಗಳಲ್ಲಿ ಶವರ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿದರೆ ನೀರನ್ನು ಸಹಜವಾಗಿಯೇ ಉಳಿತಾಯ ಮಾಡಬಹುದು.
- ಮನೆಗಳಲ್ಲಿ ಫ್ಲಶ್ ಗಳ ಬಳಕೆಯಿಂದಲೇ ಹೆಚ್ಚು ನೀರು ವ್ಯಯವಾಗುತ್ತದೆ. ಹೀಗಾಗಿ ಡ್ಯುವೆಲ್ ಫ್ಲಶ್ ಟಾಯ್ಲೆಟ್ ಬಳಸಿದರೆ ನೀರನ್ನು ಉಳಿತಾಯ ಮಾಡಿದಂತಾಗುತ್ತದೆ.
- ವಾಹನಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿ ಪೋಲು ಮಾಡುವುದನ್ನು ತಪ್ಪಿಸಿ. ದಿನಾಲೂ ವಾಹನಗಳನ್ನು ತೊಳೆಯದಿರಿ. ವಾಹನ ತೊಳೆದ ನೀರನ್ನು ನೇರವಾಗಿ ಹೂತೋಟಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ.
- ಮನೆ ಸ್ವಚ್ಛ ಮಾಡುವ ಸಮಯದಲ್ಲಿ ಹೆಚ್ಚು ನೀರನ್ನು ಬಳಕೆ ಮಾಡದಿರಿ.
- ನೆಲ ಒರೆಸಿದ ನೀರು ಹಾಗೂ ಅಕ್ಕಿ ತೊಳೆದ ನೀರನ್ನು ಹೂವಿನ ಗಿಡಗಳಿಗೆ ಬಳಸಬಹುದು.
- ಕಾರ್ಪೊರೇಷನ್ ನೀರು ಬಂದಾಗ ಮನೆಯಲ್ಲಿರುವ ಪಾತ್ರೆಗಳಿಗೆ ತುಂಬಿಕೊಂಡು ನೀರನ್ನು ಮಿತವಾಗಿ ಬಳಸುವುದನ್ನು ಕಲಿಯಿರಿ.
- ಸಾರ್ವಜನಿಕ ನಲ್ಲಿಯ ನೀರು ಪೋಲಾಗುತ್ತಿದ್ದರೆ ನಳ್ಳಿ ಬಂದ್ ಮಾಡಿ ಬನ್ನಿ.
- ನಿಮ್ಮ ಮನೆಯಲ್ಲಿರುವ ಮಕ್ಕಳಿಗೂ ನೀರನ್ನು ಉಳಿಸುವುದು ಹೇಗೆ ಎನ್ನುವುದನ್ನು ಬಗ್ಗೆ ಹೇಳುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ