
ದೆಹಲಿ: ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಗೀಡಾದ ಗುಜರಾತ್ಗೆ ತಕ್ಷಣದ ಪರಿಹಾರವಾಗಿ 1000 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ. ಇಂದು ಗುಜರಾತ್ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ಚಂಡಮಾರುತದಿಂದ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬೆನ್ನಲ್ಲೇ ತಕ್ಷಣದ ಪರಿಹಾರ ಘೋಷಣೆ ಮಾಡಿದ್ದಾರೆ.
ಗುಜರಾತ್ನ ಗಿರ್ಸೋಮನಾಥ್, ಅಮ್ರೇಲಿ, ಭಾವನಗರ ಜಿಲ್ಲೆಗಳು ಮತ್ತು ದಿಯುವಿನಲ್ಲಿ ಇಂದು ಪ್ರಧಾನಿ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಚಂಡಮಾರುತದಿಂದಾದ ಅವಘಡದಿಂದ ಪ್ರಾಣಕಳೆದುಕೊಂಡವರ ಪ್ರತಿ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ನೀಡುವುದಾಗಿ ಪಿಎಂ ಮೋದಿ ತಿಳಿಸಿದ್ದಾರೆ.
ವೈಮಾನಿಕ ಸಮೀಕ್ಷೆ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಗುಜರಾತ್ ಮತ್ತು ದಿಯುವಿನಲ್ಲಿ ತೌಕ್ತೆ ಚಂಡಮಾರುತ ಉಂಟು ಮಾಡಿದ ಹಾನಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕಿಸಿದ್ದೇನೆ. ಚಂಡಮಾರುತದಿಂದ ಹಾನಿಗೊಳಗಾದ ಎಲ್ಲ ರಾಜ್ಯಗಳ ಆಡಳಿತಗಳೊಂದಿಗೂ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ. ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
ವೈಮಾನಿಕ ಸಮೀಕ್ಷೆಯ ನಂತರ ಅಹ್ಮದಾಬಾದ್ನಲ್ಲಿ ಪರಿಶೀಲನಾ ಸಭೆಯನ್ನೂ ನಡೆಸಿದ್ದಾರೆ. ಇನ್ನು ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿಯವರೊಂದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಸೇರಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು. ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಉಳಿದ ರಾಜ್ಯಗಳಿಗೂ ತಕ್ಷಣದ ಪರಿಹಾರ ಘೋಷಣೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
22 ಮಂದಿ ಸಾವು
ಇನ್ನು ತೌಕ್ತೆ ಚಂಡಮಾರುತದ ಅಬ್ಬರಕ್ಕೆ P305 ಬಾರ್ಜ್ನಲ್ಲಿ 22 ಜನ ಮೃತಪಟ್ಟಿದ್ದಾರೆ. ಇನ್ನೂ 65 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: WTC Final:ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಆಗಲ್ಲ! ಭಾರತವೆಂದರೆ ಉರಿದು ಬೀಳುವ ಮೈಕಲ್ ವಾನ್ ಹೇಳಿಕೆ
1,000 Crore assistance announced by Prime Minister Narendra modi for immediate relief to Cyclone Tauktae Hit Gujarat
Published On - 7:14 pm, Wed, 19 May 21