3 ವರ್ಷಗಳಲ್ಲಿ ಮೂರು ದೇಶಗಳ 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ; ಸಚಿವ ನಿತ್ಯಾನಂದ ರೈ ಮಾಹಿತಿ

| Updated By: Lakshmi Hegde

Updated on: Dec 22, 2021 | 3:44 PM

2014ರ ಡಿಸೆಂಬರ್​ 31ರ ಮೊದಲು ಮತ್ತು ಆ ದಿನ ಭಾರತವನ್ನು ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ( ಆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ) ಭಾರತದ ನಾಗರಿಕತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಳಿಸಿದೆ.

3 ವರ್ಷಗಳಲ್ಲಿ ಮೂರು ದೇಶಗಳ 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ; ಸಚಿವ ನಿತ್ಯಾನಂದ ರೈ ಮಾಹಿತಿ
ಸಚಿವ ನಿತ್ಯಾನಂದ ರೈ
Follow us on

2018ರಿಂದ 2021ರವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಒಟ್ಟು 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.  ಸಂಸತ್ತಿನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ರಾಜ್ಯ ಸಭಾ ಸಂಸದ ಡಾ. ಕೆ.ಕೇಶವ ರಾವ್​ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್ ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಗುಂಪುಗಳಿಂದ 2018-2021ರವರೆಗೆ ಪಡೆದ ಒಟ್ಟು ಅರ್ಜಿಗಳು ಮತ್ತು ಎಷ್ಟು ಜನರಿಗೆ ಪೌರತ್ವ ನೀಡಲಾಗಿದೆ ಎಂಬುದರ ಬಗ್ಗೆ ಡಾ. ಕೆ.ಕೇಶವ ರಾವ್​ ಪ್ರಶ್ನೆ ಕೇಳಿದ್ದರು.  

2018-2021ರವರೆಗೆ ಕೇಂದ್ರ ಸರ್ಕಾರ, ನೆರೆರಾಷ್ಟ್ರಗಳ ಅಲ್ಪಸಂಖ್ಯಾತರಿಂದ ಒಟ್ಟು 8244 ಪೌರತ್ವ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ 3117 ಅರ್ಜಿದಾರರಿಗೆ ಭಾರತದ ಪೌರತ್ವ ನೀಡಲಾಗಿದೆ. ಇವರಲ್ಲಿ ನಿರಾಶ್ರಿತರೂ ಸೇರಿದ್ದಾರೆ. ಇವರೆಲ್ಲರೂ ವಿದೇಶಿಯರ ಕಾಯ್ದೆ 1946, ವಿದೇಶಿಯರ ನೋಂದಣಿ ಕಾಯ್ದೆ 1939, ಪಾಸ್​ಪೋರ್ಟ್​ (ಭಾರತಕ್ಕೆ ಪ್ರವೇಶ) ಕಾಯ್ದೆ 1920 ಮತ್ತು ಪೌರತ್ವ ಕಾಯ್ದೆ  1955ರಲ್ಲಿರುವ ನಿಬಂಧನೆಗಳ ಮೂಲಕ ನಿಯಂತ್ರಿಸಲ್ಪಡುತ್ತಾರೆ ಎಂದು  ರೈ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಇನ್ನು ಪೆಂಡಿಂಗ್​ ಇರುವ ಪೌರತ್ವ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರೈ, ಅಫ್ಘಾನಿಸ್ತಾನದಿಂದ ಬಂದಿರುವ 1152 ಅರ್ಜಿಗಳು ಬಾಕಿ ಇವೆ. 224 ಶ್ರೀಲಂಕಾ ಮತ್ತು ಯುಎಸ್​ಎ, ನೇಪಾಳ ಮೂಲದವರ 189 ಮತ್ತು ಬಾಂಗ್ಲಾದೇಶಿಗರು ಕಳಿಸಿದ ಅರ್ಜಿಗಳಲ್ಲಿ 161 ಇನ್ನೂ ಪೆಂಡಿಂಗ್​ ಇದೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಹಾಗೇ, ಚೀನಾ ಮೂಲದ 10 ಮಂದಿ ಕೂಡ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವಿಷ್ಟೂ ಹಾಗೇ ಇದೆ ಎಂದು ಹೇಳಿದ್ದಾರೆ.

2014ರ ಡಿಸೆಂಬರ್​ 31ರ ಮೊದಲು ಮತ್ತು ಆ ದಿನ ಭಾರತವನ್ನು ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ( ಆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ) ಭಾರತದ ನಾಗರಿಕತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಳಿಸಿದೆ. ಆ ಸಿಎಎ ಕಾಯ್ದೆ ವಿರೋಧಿಸಿ ಅಸ್ಸಾಂ ಸೇರಿ ಇತರ ಈಶಾನ್ಯ ರಾಜ್ಯಗಳಲ್ಲಿ ವಿಪರೀತ ಪ್ರತಿಭಟನೆ ನಡೆದಿತ್ತು. ದೆಹಲಿಯ ಶಹೀನ್​ ಬಾಗ್​ನಲ್ಲಿ 2020ರವರೆಗೂ ಪ್ರತಿಭಟನೆ ನಡೆದು, ಅದು ಹಿಂಸಾಚಾರ ಸ್ವರೂಪವನ್ನೂ ತಲುಪಿತ್ತು.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ