“ನಾವು ಚೈನೀಸ್ ಅಲ್ಲ, ಭಾರತೀಯರು”: 4 ವರ್ಷದ ಪುಟಾಣಿ ನೀಡಿದ ಖಡಕ್ ಉತ್ತರ ವೈರಲ್

ಇಟಾನಗರದ 4 ವರ್ಷದ ಪುಟಾಣಿ ಕಾರ್ಗಾ ಟಿಂಕಲ್ 'ನೀನು ಚೈನೀಸ್ ಅಲ್ವಾ?' ಎಂಬ ಪ್ರಶ್ನೆಗೆ, 'ನಾವು ಭಾರತೀಯರು' ಎಂದು ದಿಟ್ಟ ಉತ್ತರ ನೀಡಿದ ವಿಡಿಯೋ ವೈರಲ್ ಆಗಿದೆ. ಇದು ಈಶಾನ್ಯ ಭಾರತೀಯರ ಮೇಲಿನ ಜನಾಂಗೀಯ ನಿಂದನೆ ಮತ್ತು ತಾರತಮ್ಯದ ಕಹಿ ಸತ್ಯವನ್ನು ದೇಶದ ಮುಂದಿಟ್ಟಿದೆ. ಈ ಮಗುವಿನ ಮಾತು ಪೂರ್ವಗ್ರಹ ಪೀಡಿತ ಸಮಾಜಕ್ಕೆ ಕನ್ನಡಿ ಹಿಡಿದಿದ್ದು, ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ನಾವು ಚೈನೀಸ್ ಅಲ್ಲ, ಭಾರತೀಯರು: 4 ವರ್ಷದ ಪುಟಾಣಿ ನೀಡಿದ ಖಡಕ್ ಉತ್ತರ ವೈರಲ್
ವೈರಲ್ ವಿಡಿಯೋ

Updated on: Aug 21, 2026 | 5:13 PM

ಇಟಾನಗರ, ಆ.21: ಈಶಾನ್ಯ ಭಾರತದ ಜನರು ಸ್ವಲ್ಪ ಚೀನಾದವರ ಮುಖ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಕಾರಣಕ್ಕೆ ಅನೇಕರು ಪ್ರಶ್ನೆ ಮಾಡುತ್ತಾರೆ, ನೀವು ಚೈನೀಸ್​​​​​​ ಎಂದು. ಇದೀಗ ಇಂತಹದೇ ಒಂದು ಘಟನೆಯ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಖಲಕ್ಷಣ ಹಾಗೂ ದೈಹಿಕ ರೇಖೆಗಳನ್ನು ನೋಡಿ ತಕ್ಷಣಕ್ಕೇ ‘ಚೈನೀಸ್’ ಎಂದು ಕೇಳುವ ಸಮಾಜದ ಪೂರ್ವಗ್ರಹ ಪೀಡಿತ ಮನಸ್ಥಿತಿಗೆ ಅರುಣಾಚಲ ಪ್ರದೇಶದ ಇಟಾನಗರದ 4 ವರ್ಷದ ಬಾಲಕಿ ನೀಡಿದ ದಿಟ್ಟ ಹಾಗೂ ಮುಗ್ಧವಾಗಿ ಉತ್ತರ ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಪುಟಾಣಿಯ ಮಾತಿಗೆ ಇಡೀ ದೇಶವೇ ಭಾವುಕಗೊಂಡಿದ್ದು, ಈಶಾನ್ಯ ಭಾರತೀಯರ ಮೇಲಿನ ಜನಾಂಗೀಯ ನಿಂದನೆ ಕುರಿತು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.

ಇಟಾನಗರದ ನಿವಾಸಿ ಕಾರ್ಗಾ ಟಿಂಕಲ್ (Karga Tinkle) ಎಂಬ ನಾಲ್ಕು ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬರು, “ನೀನು ಚೈನೀಸ್ ಅಲ್ವಾ?” ಎಂದು ಪ್ರಶ್ನಿಸಿದಾಗ, ಆ ಮುದ್ದು ಮಗು ಸಮಾಧಾನದಿಂದಲೇ, ಖಡಕ್ ಆಗಿ ಉತ್ತರ ನೀಡಿದ್ದಾಳೆ. ವಿಡಿಯೋದಲ್ಲಿ ಅತ್ಯಂತ ಮುಗ್ಧವಾಗಿ ಮಾತನಾಡಿರುವ ಕಾರ್ಗಾ, “ನಾವು ಭಾರತದವರು, ನೀವು ನಮ್ಮನ್ನು ‘ಚೈನೀಸ್’ ಎಂದು ಕರೆದಾಗ ನಮಗೆ ತುಂಬಾ ಕೋಪ ಮತ್ತು ಬೇಸರವಾಗುತ್ತದೆ. ನಮ್ಮನ್ನು ‘ಭಾರತೀಯರು’ ಎಂದು ಕರೆಯಿರಿ. ನಾವು ಭಾರತೀಯರು, ನಾವು ಇಟಾನಗರದಲ್ಲೇ ವಾಸಿಸುತ್ತಿದ್ದೇವೆ” ಎಂದು ಹೇಳಿದ್ದಾಳೆ. ನಾಲ್ಕೇ ವರ್ಷದ ಮಗು ತನಗೆ ಆಗುವ ನೋವನ್ನು ಇಷ್ಟೊಂದು ಸ್ಪಷ್ಟವಾಗಿ ವ್ಯಕ್ತಪಡಿಸಿರುವುದು ನೆಟ್ಟಿಗರ ಕಣ್ಣು ತೆರೆಸಿದೆ. ಹಾಗೂ ಅನೇಕ ಈಶಾನ್ಯ ಭಾರತೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಲಕ್ಷಾಂತರ ನೆಟ್ಟಿಗರು ಈ ಮಗುವಿನ ಬೆಂಬಲಕ್ಕೆ ನಿಂತಿದ್ದಾರೆ. ಭಾರತದ ಪ್ರಮುಖ ಭಾಗವಾಗಿರುವ ಈಶಾನ್ಯ ರಾಜ್ಯಗಳ ಜನರು ತಮ್ಮದೇ ದೇಶದಲ್ಲಿ ಇಂದಿಗೂ ಎದುರಿಸುತ್ತಿರುವ ‘ವರ್ಣಭೇದ’ ಹಾಗೂ ‘ಜನಾಂಗೀಯ ನಿಂದನೆ’ಯ ಕಹಿ ಅನುಭವಗಳನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.

ವಿಡಿಯೋಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, “ಈ ಮುಗ್ಧ ಮಗುವಿನ ನೋವು ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ತಲುಪಬೇಕು. ಗಡಿಯಲ್ಲಿ ಚೀನಾ ಕುತಂತ್ರ ನಡೆಸಿದಾಗ, ನಮಗೆ ಮೊದಲು ಎಚ್ಚರಿಕೆ ನೀಡುವುದೇ ಅರುಣಾಚಲ ಪ್ರದೇಶದ ಈ ಧೀರ ಜನರು. ದೇಶಪ್ರೇಮದಲ್ಲಿ ಈಶಾನ್ಯ ಭಾರತೀಯರು ಯಾರಿಗಿಂತಲೂ ಕಮ್ಮಿಯಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಾ, “ಕೇವಲ ನಾಲ್ಕು ವರ್ಷದ ಮಗುವೊಂದು ತಾನು ‘ಭಾರತೀಯಳು’ ಎಂದು ಸಾಬೀತುಪಡಿಸಲು ವಿನಂತಿಸುವ ಸ್ಥಿತಿ ಬಂದಿರುವುದು ನಿಜಕ್ಕೂ ದುಃಖಕರ. ಮುಖಲಕ್ಷಣಗಳ ಆಧಾರದ ಮೇಲೆ ಜನರನ್ನು ಹೊರಗಿನವರೆಂದು ನೋಡುವುದನ್ನು ಸಮಾಜ ತಕ್ಷಣವೇ ನಿಲ್ಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ‘ರಾಹುಲ್ ಗಾಂಧಿ ರೋಲ್ ಮಾಡೆಲ್’ ಎಂದಿದ್ದಕ್ಕೆ 40 ಲಕ್ಷ ರೂ. ಪ್ಯಾಕೇಜ್‌ನ ವರನನ್ನೇ ರಿಜೆಕ್ಟ್ ಮಾಡಿದ ಯುವತಿ

ಭಾರತವು ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ವಿಭಿನ್ನ ಸಮುದಾಯಗಳ ಸಂಗಮವಾಗಿದೆ. ಈಶಾನ್ಯ ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಮೃದ್ಧ ಸಂಸ್ಕೃತಿಯನ್ನು ಹೊಂದಿದೆ. ಆದರೆ, ಭಾರತೀಯರಲ್ಲೇ ಅನೇಕರು ಈಶಾನ್ಯದ ಜನರನ್ನು ಅವರ ದೈಹಿಕ ಸೌಂದರ್ಯ ಮತ್ತು ಮುಖಲಕ್ಷಣಗಳಿಂದ ನಿರ್ಣಯಿಸಿ ಅಪಹಾಸ್ಯ ಮಾಡುವುದು ಇಂದಿಗೂ ಮುಂದುವರಿದಿದೆ. ಕಾರ್ಗಾಳ ಈ ಮುಗ್ಧ ವೀಡಿಯೊ, ಪೂರ್ವಗ್ರಹಗಳನ್ನು ಬದಿಗೊತ್ತಿ ಪ್ರತಿಯೊಬ್ಬ ನಾಗರಿಕನನ್ನು ಸಮಾನವಾಗಿ ಗೌರವಿಸುವ ಅಗತ್ಯವನ್ನು ದೇಶಕ್ಕೆ ಮತ್ತೊಮ್ಮೆ ನೆನಪಿಸಿಕೊಟ್ಟಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us