ಭವಿಷ್ಯದ ಯುದ್ಧಗಳಲ್ಲಿ ಎಐ, ಡ್ರೋನ್‌ಗಳದ್ದೇ ಮೇಲುಗೈ, ಭಾರತದ ರಕ್ಷಣಾ ವ್ಯವಸ್ಥೆ ಬದಲಾಗಬೇಕು: ಸಿಡಿಎಸ್ ಸುಬ್ರಮಣಿ

ಭವಿಷ್ಯದ ಯುದ್ಧಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್‌ಗಳ ಪಾತ್ರ ಮಹತ್ವದ್ದು. ದುಬಾರಿ ಶಸ್ತ್ರಾಸ್ತ್ರಗಳೊಂದಿಗೆ ಕಡಿಮೆ ವೆಚ್ಚದ ಡ್ರೋನ್‌ಗಳು ಸವಾಲಾಗುತ್ತಿವೆ. ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಈ ಬದಲಾವಣೆಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ಸ್ವದೇಶಿ ಉತ್ಪಾದನೆ ಮತ್ತು ಖಾಸಗಿ ಪಾಲುದಾರಿಕೆ ಅಗತ್ಯ ಎಂದು ಸಿಡಿಎಸ್ ಸುಬ್ರಮಣಿ ಕರೆ ನೀಡಿದ್ದಾರೆ.

ಭವಿಷ್ಯದ ಯುದ್ಧಗಳಲ್ಲಿ ಎಐ, ಡ್ರೋನ್‌ಗಳದ್ದೇ ಮೇಲುಗೈ, ಭಾರತದ ರಕ್ಷಣಾ ವ್ಯವಸ್ಥೆ ಬದಲಾಗಬೇಕು: ಸಿಡಿಎಸ್ ಸುಬ್ರಮಣಿ
ಸಿಡಿಎಸ್ ಸುಬ್ರಮಣಿ
Image Credit source: PTI

Updated on: Nov 19, 2026 | 7:58 AM

ನವದೆಹಲಿ, ನವೆಂಬರ್ 19: ಮುಂದಿನ ದಿನಗಳಲ್ಲಿ ಯುದ್ಧದ ಸ್ವರೂಪ ಸಂಪೂರ್ಣ ಬದಲಾಗಲಿದೆ. ಕೇವಲ ಅತ್ಯಾಧುನಿಕ ಕ್ಷಿಪಣಿಗಳು, ಯುದ್ಧವಿಮಾನಗಳು ಮತ್ತು ದುಬಾರಿ ಶಸ್ತ್ರಾಸ್ತ್ರಗಳಿಂದ ಮಾತ್ರ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ , ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಶಕ್ತಿಯೂ ನಿರ್ಣಾಯಕವಾಗಲಿದೆ ಎಂದು ಸಿಡಿಎಸ್ ಜನರಲ್ ಎನ್ಎಸ್ ರಾಜಾ ಸುಬ್ರಮಣಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಎಫ್​ಐಸಿಸಿಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಯುದ್ಧದ ತಂತ್ರಜ್ಞಾನ ಮತ್ತು ಅದರ ಆರ್ಥಿಕತೆ ಬದಲಾಗುತ್ತಿರುವುದನ್ನು ವಿವರಿಸಿದರು. ಈ ಬದಲಾವಣೆಗಳಿಗೆ ಅನುಗುಣವಾಗಿ ಭಾರತದ ರಕ್ಷಣಾ ವ್ಯವಸ್ಥೆಯೂ ಸಿದ್ಧವಾಗಬೇಕು ಎಂದು ಒತ್ತಿ ಹೇಳಿದರು.

Loading...

ಒಂದೇ ದಿನದಲ್ಲಿ ಸಾವಿರ ಗುರಿಗಳ ಮೇಲೆ ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಉದಾಹರಣೆಯಾಗಿ ನೀಡಿದ ಜನರಲ್ ಸುಬ್ರಮಣಿ, ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳ ನೆರವಿನಿಂದ ಅಮೆರಿಕ ಮೊದಲ ದಿನವೇ ಸುಮಾರು 1,000 ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದರು.
ಅವರ ಪ್ರಕಾರ, ಈ ದಾಳಿಗಳಲ್ಲಿ 999 ಗುರಿಗಳ ಮೇಲೆ ನಿಖರವಾಗಿ ದಾಳಿ ನಡೆದಿದ್ದರೆ, ಒಂದು ಕ್ಷಿಪಣಿ ಶಾಲೆಯ ಮೇಲೆ ಬಿದ್ದು ಮಕ್ಕಳು ಸಾವನ್ನಪ್ಪಿದ್ದಾರೆ. ತಂತ್ರಜ್ಞಾನದಲ್ಲಿ ತಪ್ಪುಗಳು ಸಂಭವಿಸುವ ಸಾಧ್ಯತೆ ಇದ್ದರೂ, ಅದಕ್ಕಾಗಿ ಎಐ ಬಳಕೆಯ ಮಹತ್ವವನ್ನು ಕಡೆಗಣಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಹೌತಿ ಕ್ಷಿಪಣಿ ದಾಳಿಗಳ ಭೀತಿ: ಬಂಕರ್‌ಗಳಿರುವ ಅರಮನೆಯಿಂದ ಅರಮನೆಗೆ ಶಿಫ್ಟ್ ಆಗ್ತಿದ್ದಾರೆ ಸೌದಿ ಕ್ರೌನ್ ಪ್ರಿನ್ಸ್

ಇಂತಹ ಬೃಹತ್ ಪ್ರಮಾಣದ ಗುರಿಗಳನ್ನು ಗುರುತಿಸಿ ದಾಳಿ ನಡೆಸುವ ಕಾರ್ಯವನ್ನು ಮಾನವ ಸಿಬ್ಬಂದಿ ಮಾತ್ರ ಬಳಸಿಕೊಂಡು ಮಾಡಿದರೆ ಹಲವು ವರ್ಷಗಳೇ ಬೇಕಾಗಬಹುದು. ಆದರೆ ಎಐ ನೆರವಿನಿಂದ ಅದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಮಾಡಲು ಸಾಧ್ಯ ಎಂದು ಅವರು ವಿವರಿಸಿದರು.

50 ಸಾವಿರ ಡಾಲರ್ ಡ್ರೋನ್‌ಗೆ 40 ಲಕ್ಷ ಡಾಲರ್ ಕ್ಷಿಪಣಿ

ಯುದ್ಧದಲ್ಲಿ ಕಡಿಮೆ ಬೆಲೆಯ ಶಸ್ತ್ರಾಸ್ತ್ರಗಳು ದುಬಾರಿ ರಕ್ಷಣಾ ವ್ಯವಸ್ಥೆಗಳಿಗೆ ಸವಾಲಾಗುತ್ತಿವೆ ಎಂದು ಸಿಡಿಎಸ್ ಗಮನ ಸೆಳೆದರು. ಅವರು ನೀಡಿದ ಉದಾಹರಣೆಯ ಪ್ರಕಾರ, ಇರಾನ್ ಬಳಸುವ ಶಹೀದ್ ಡ್ರೋನ್ ಒಂದರ ಬೆಲೆ ಸುಮಾರು 50 ಸಾವಿರ ಡಾಲರ್. ಆದರೆ ಅದನ್ನು ತಡೆಯಲು ಬಳಸುವ ಅಮೆರಿಕದ ಪೇಟ್ರಿಯಾಟ್ ಇಂಟರ್‌ಸೆಪ್ಟರ್ ಕ್ಷಿಪಣಿಯ ಬೆಲೆ ಸುಮಾರು 40 ಲಕ್ಷ ಡಾಲರ್ ಇರಬಹುದು.

ಅಂದರೆ, ಕಡಿಮೆ ಬೆಲೆಯ ಒಂದು ಡ್ರೋನ್ ಅನ್ನು ಹೊಡೆದುರುಳಿಸಲು ಅದಕ್ಕಿಂತ ಹಲವು ಪಟ್ಟು ದುಬಾರಿ ಕ್ಷಿಪಣಿಯನ್ನು ಬಳಸಬೇಕಾಗುತ್ತದೆ. ಇದೇ ರೀತಿ ನೂರಾರು ಅಥವಾ ಸಾವಿರಾರು ಡ್ರೋನ್‌ಗಳು ದಾಳಿ ನಡೆಸಿದರೆ, ಅವುಗಳನ್ನು ತಡೆಯಲು ದೊಡ್ಡ ಪ್ರಮಾಣದ ಹಣ ಮತ್ತು ಶಸ್ತ್ರಾಸ್ತ್ರಗಳ ಅಗತ್ಯವಿರುತ್ತದೆ.

ಹೀಗಾಗಿ ದುಬಾರಿ ಶಸ್ತ್ರಾಸ್ತ್ರಗಳ ಜೊತೆಗೆ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ರಕ್ಷಣಾ ಸಾಧನಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.

ಭಾರತದ ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಪಾತ್ರ ಹೆಚ್ಚಲಿ

ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಮತ್ತು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದು ಜನರಲ್ ಸುಬ್ರಮಣಿ ಕರೆ ನೀಡಿದರು.

ಫ್ರಾನ್ಸ್ ಮತ್ತು ಬ್ರಿಟನ್‌ನಂತಹ ದೇಶಗಳು ಕ್ರೂಸ್ ಕ್ಷಿಪಣಿಗಳ ಉತ್ಪಾದನೆಯಲ್ಲಿ ಆಟೋಮೊಬೈಲ್ ಉದ್ಯಮದ ಕಂಪನಿಗಳನ್ನೂ ತೊಡಗಿಸಿಕೊಂಡಿವೆ. ಭಾರತದಲ್ಲಿಯೂ ವಾಹನ ತಯಾರಿಕಾ ಕಂಪನಿಗಳು ಸೇರಿದಂತೆ ವಿವಿಧ ಕೈಗಾರಿಕೆಗಳ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ರಕ್ಷಣಾ ಕ್ಷೇತ್ರಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಯುದ್ಧದ ಸಮಯದಲ್ಲಿ ಶಸ್ತ್ರಾಸ್ತ್ರಗಳ ಬೇಡಿಕೆ ಏಕಾಏಕಿ ಹೆಚ್ಚಾಗಬಹುದು. ಆಗ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯ ದೇಶಕ್ಕೆ ಇರಬೇಕು. ಇದಕ್ಕಾಗಿ ಸರ್ಕಾರ, ರಕ್ಷಣಾ ಪಡೆಗಳು, ಖಾಸಗಿ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಹೌತಿಗಳೂ ಎಐ ತಂತ್ರಜ್ಞಾನ ಬಳಸುತ್ತಿವೆ

ಯುದ್ಧದಲ್ಲಿ ತಂತ್ರಜ್ಞಾನವನ್ನು ದೊಡ್ಡ ರಾಷ್ಟ್ರಗಳು ಮಾತ್ರವಲ್ಲ, ಸಣ್ಣ ಸಂಘಟನೆಗಳೂ ಬಳಸುತ್ತಿವೆ ಎಂಬುದನ್ನು ಸಿಡಿಎಸ್ ಪ್ರಸ್ತಾಪಿಸಿದರು.

ಯೆಮನ್‌ನ ಹೌತಿ ಬಂಡುಕೋರರು ತಮ್ಮ ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕ್ಲೌಡ್ ಆಧಾರಿತ ಎಐ ತಂತ್ರಜ್ಞಾನವನ್ನು ಮಾರ್ಪಡಿಸಿಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಸಾಫ್ಟ್‌ವೇರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಬಲಿಷ್ಠವಾಗಿರುವ ಭಾರತವು ತನ್ನದೇ ಆದ ಎಐ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಯುದ್ಧ ಗೆಲ್ಲಲು ಆತ್ಮನಿರ್ಭರತೆ ಮುಖ್ಯ

ಆಧುನಿಕ ಯುದ್ಧಗಳಲ್ಲಿ ತಂತ್ರಜ್ಞಾನವನ್ನು ಹೊಂದಿರುವುದಷ್ಟೇ ಸಾಕಾಗುವುದಿಲ್ಲ. ಅದನ್ನು ವೇಗವಾಗಿ ಬಳಸಿಕೊಳ್ಳುವುದು, ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದು ಮತ್ತು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ದೇಶದಲ್ಲೇ ಉತ್ಪಾದಿಸುವ ಸಾಮರ್ಥ್ಯವೂ ಇರಬೇಕು. ಬೇರೆ ದೇಶಗಳ ಶಸ್ತ್ರಾಸ್ತ್ರಗಳ ಮೇಲೆ ಸಂಪೂರ್ಣ ಅವಲಂಬಿತರಾಗದೆ, ಸ್ವದೇಶಿ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಭಾರತದ ಭದ್ರತೆಗೆ ಅತ್ಯಗತ್ಯ ಎಂದು ಜನರಲ್ ಸುಬ್ರಮಣಿ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us