ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ

ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಇಂದು ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗ ಭಾರಿ ಗಾಳಿಗೆ ಸಿಲುಕಿದೆ. ಇದರಿಂದಾಗಿ ಇದ್ದಕ್ಕಿದ್ದಂತೆ ವಿಮಾನದ ಎತ್ತರದಲ್ಲಿ ವಿಮಾನ ಪಲ್ಟಿ ಹೊಡೆಯುತ್ತಾ 300 ಅಡಿ ಕುಸಿದಿದೆ. ಇದರಿಂದಾಗಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ. ಆದರೂ ಯಾವುದೇ ತೊಂದರೆಯಿಲ್ಲದೆ ಆ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ
Air India
Image Credit source: TV9

Updated on: Aug 04, 2026 | 4:13 PM

ನವದೆಹಲಿ, ಆಗಸ್ಟ್ 4: ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಆಗಸದಲ್ಲಿ ತೀವ್ರ ಸ್ವರೂಪದ ಗಾಳಿಗೆ ಸಿಲುಕಿ, ಕ್ಷಣಾರ್ಧದಲ್ಲಿ ಬರೋಬ್ಬರಿ 300 ಅಡಿ ಕೆಳಕ್ಕೆ ಕುಸಿದ ಪರಿಣಾಮವಾಗಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ. ವಿಮಾನವು ಇದ್ದಕ್ಕಿದ್ದಂತೆ ಸುಮಾರು 300 ಅಡಿಗಳಷ್ಟು ಆಳಕ್ಕೆ ಧುಮುಕಿದ್ದರಿಂದ ಒಳಗಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು. ಸೀಟ್ ಬೆಲ್ಟ್ ಧರಿಸದಿದ್ದ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ವಿಮಾನದ ಸಿಬ್ಬಂದಿ ವಿಮಾನದ ಸೀಲಿಂಗ್​ಗೆ ಬಡಿದು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಕೂಡ ಸೇರಿದ್ದಾರೆ.

ವಿಮಾನದಲ್ಲಿ ಉಂಟಾದ ತೀವ್ರ ಆತಂಕದ ವಾತಾವರಣದ ನಡುವೆಯೂ ಏರ್ ಇಂಡಿಯಾ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ತುರ್ತು ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದೆ. ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದನ್ನೂ ಓದಿ: Plane Crash: ಪೆರುವಿನ ನಾಜ್ಕಾ ಲೈನ್ಸ್ ಬಳಿ ಪ್ರವಾಸಿ ವಿಮಾನ ಪತನ: 11 ವಿದೇಶಿಯರು ಸೇರಿ ಎಲ್ಲಾ 13 ಮಂದಿ ದಾರುಣ ಸಾವು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ವಿಮಾನದ ಒಳಗಿನ ಸೀಲಿಂಗ್ ಪ್ಯಾನೆಲ್‌ಗಳು ಜಖಂಗೊಂಡಿರುವುದು ಕಂಡುಬಂದಿದೆ. ಆರಂಭಿಕ ಮಾಹಿತಿಯ ಪ್ರಕಾರ, ಹಾರಾಟದ ಸಮಯದಲ್ಲಿ ವಿಮಾನವು ತಕ್ಷಣವೇ ಸುಮಾರು 300 ಅಡಿ ಕೆಳಕ್ಕೆ ಧುಮುಕಿದೆ ಎಂದು ಪೈಲಟ್ ತಿಳಿಸಿದ್ದಾರೆ. ಆಗಸದಲ್ಲೇ ವಿಮಾನ ಪಲ್ಟಿ ಹೊಡೆಯುತ್ತಾ ಕುಸಿದ ಕಾರಣದಿಂದ ಶೇ. 80ರಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟು 14 ಜನರಿಗೆ ಹೆಚ್ಚಿನ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ವಿಮಾನದಲ್ಲಿನ ಪ್ರಯಾಣಿಕರು ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.


ವಿಮಾನವು ಇನ್ನೂ ಆಗಸದಲ್ಲಿದ್ದಾಗಲೇ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು, ಹೀಗಾಗಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ವೈದ್ಯಕೀಯ ತಂಡಗಳನ್ನು ಸಿದ್ಧವಾಗಿಡಲಾಗಿತ್ತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಕೆಳಗಿಳಿದರು. ಗಾಯಗೊಂಡವರನ್ನು ತಕ್ಷಣವೇ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.


ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಈ ಘಟನೆಯ ಕುರಿತು ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, “ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI2379 ವಿಮಾನವು ಹಾರಾಟದ ಮಧ್ಯೆ ಹಠಾತ್ ಗಾಳಿಗೆ ಸಿಲುಕಿ ಕೆಲ ಕ್ಷಣಗಳ ಕಾಲ ಆಗಸದಲ್ಲೇ ಹೊಯ್ದಾಡಿತು ಎಂಬುವುದನ್ನು ದೃಢಪಡಿಸುತ್ತೇವೆ” ಎಂದು ಹೇಳಿದೆ. “ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ವಹಿಸಿ ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗಾಗಿ ವಿಮಾನ ನಿಲ್ದಾಣದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದ್ದು, ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us