
ನವದೆಹಲಿ, ನವೆಂಬರ್ 19: ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಇರಾನ್ನ ಇಸ್ಲಾಮಿಕ್ ಕಲ್ಚರ್ ಅಂಡ್ ರಿಲೇಶನ್ಸ್ ಆರ್ಗನೈಸೇಶನ್ (ICRO) ಅಧ್ಯಕ್ಷ ಡಾ. ಮೊಹಮ್ಮದ್ ಮಹದಿ ಇಮಾನಿಪೂರ್ ಅವರು ದೆಹಲಿಯ ಪ್ರಸಿದ್ಧ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಸಂತ ಜ್ಞಾನಮುನಿದಾಸ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನವೆಂಬರ್ 18ರಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಭಾರತದ ವೈವಿಧ್ಯತೆ, ಶ್ರೀಮಂತ ಪರಂಪರೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಈ ಭೇಟಿ ಪ್ರತಿಬಿಂಬಿಸಿದೆ ಎಂದು ರಾಯಭಾರ ಕಚೇರಿ ಹೇಳಿದೆ.
ಅಕ್ಷರಧಾಮ ಮಂದಿರದ ಭೇಟಿಯು ಕೇವಲ ಧಾರ್ಮಿಕ ಸ್ಥಳದ ವೀಕ್ಷಣೆಗೆ ಸೀಮಿತವಾಗಿರಲಿಲ್ಲ. ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳ ನಡುವೆ ಪರಸ್ಪರ ಗೌರವ, ತಿಳುವಳಿಕೆ ಹಾಗೂ ಸಂವಾದದ ಅಗತ್ಯವನ್ನು ಈ ಭೇಟಿ ಸಾರಿದೆ. ಇರಾನ್ ರಾಯಭಾರ ಕಚೇರಿ ತನ್ನ ಸಂದೇಶದಲ್ಲಿ, ‘ವಿಭಿನ್ನ ಸಂಪ್ರದಾಯಗಳು, ಒಂದೇ ರೀತಿಯ ಮೌಲ್ಯಗಳು, ಒಂದೇ ಮಾನವ ಕುಟುಂಬ’ ಎಂಬ ಆಶಯವನ್ನು ಹಂಚಿಕೊಂಡಿದೆ. ಭಾರತ ಮತ್ತು ಇರಾನ್ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧಗಳನ್ನೂ ಉಲ್ಲೇಖಿಸಿದೆ.
ಡಾ. ಮೊಹಮ್ಮದ್ ಮಹದಿ ಇಮಾನಿಪೂರ್ ಅವರು ಇರಾನ್ನ ಇಸ್ಲಾಮಿಕ್ ಕಲ್ಚರ್ ಅಂಡ್ ರಿಲೇಶನ್ಸ್ ಆರ್ಗನೈಸೇಶನ್ನ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ವಿದೇಶಗಳಲ್ಲಿ ಇರಾನ್ನ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಧಾರ್ಮಿಕ ಪರಂಪರೆಯನ್ನು ಪರಿಚಯಿಸುವುದು ಹಾಗೂ ಇತರ ದೇಶಗಳೊಂದಿಗೆ ಸಾಂಸ್ಕೃತಿಕ ಸಂಪರ್ಕ ಬೆಳೆಸುವ ಕೆಲಸ ಮಾಡುತ್ತದೆ.
ಅವರು ನವೆಂಬರ್ 20ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿರುವ ಮೊದಲ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಗಳ ಸಂವಾದ ವೇದಿಕೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ತಿಲಕ ಧರಿಸುವುದಕ್ಕೆ ಶಾಲೆಯ ಆಕ್ಷೇಪ: ಬ್ರಿಟನ್ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ 9 ವರ್ಷದ ಹಿಂದೂ ಬಾಲಕನ ಪೋಷಕರು
ಭಾರತ ಮತ್ತು ಇರಾನ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಮಾತುಕತೆ ಅಥವಾ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವೆ ಶತಮಾನಗಳ ಹಿಂದಿನಿಂದಲೂ ಭಾಷೆ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ವಿನಿಮಯ ನಡೆದಿದೆ.
ಇಂದಿಗೂ ಇಂಧನ, ವ್ಯಾಪಾರ ಮತ್ತು ಚಾಬಹಾರ್ ಬಂದರು ಯೋಜನೆಯಂತಹ ಪ್ರಮುಖ ವಿಚಾರಗಳಲ್ಲಿ ಎರಡೂ ದೇಶಗಳು ಸಂಪರ್ಕ ಹೊಂದಿವೆ. ಇಂತಹ ಸಂದರ್ಭಗಳಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ಧರ್ಮಗಳ ನಡುವಿನ ಸಂವಾದವು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವು ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಿದೆ. ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ಈ ಮಂದಿರವು ಭಾರತೀಯ ಸಂಸ್ಕೃತಿ, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುತ್ತದೆ. 2005ರಲ್ಲಿ ಸಾರ್ವಜನಿಕರಿಗೆ ತೆರೆಯಲಾದ ಈ ಮಂದಿರವು ತನ್ನ ಅದ್ಭುತ ಕೆತ್ತನೆಗಳು, ವಿಶಾಲ ವಿನ್ಯಾಸ ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ.
ಇರಾನ್ನ ಪ್ರಮುಖ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರ ಅಕ್ಷರಧಾಮ ಭೇಟಿ ಭಾರತ ಮತ್ತು ಇರಾನ್ ನಡುವಿನ ಸ್ನೇಹದ ಜೊತೆಗೆ ಧಾರ್ಮಿಕ ಸಾಮರಸ್ಯ, ಸಾಂಸ್ಕೃತಿಕ ವಿನಿಮಯ ಮತ್ತು ಪರಸ್ಪರ ಗೌರವದ ಮಹತ್ವವನ್ನೂ ಸಾರಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ