ದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ವಿರುದ್ಧ ರಾಜ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಕೊವಿಡ್ ಪಿಪಿಇ ಕಿಟ್ ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ (defamation case) ದಾಖಲಿಸಿದ್ದಾರೆ. ಪಿಪಿಇ ಕಿಟ್‌ಗಳ (PPE Kit)ಗುತ್ತಿಗೆಯನ್ನು ಶರ್ಮಾ ಅವರು ತಮ್ಮ ಪತ್ನಿಯ ಒಡೆತನದ ಕಂಪನಿಗೆ ನೀಡಿದ್ದಾರೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಅದಕ್ಕಾಗಿ ಹೆಚ್ಚಿನ ಹಣ ಪಾವತಿಸಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಈಗಾಗಲೇ ಸಿಸೋಡಿಯಾ ವಿರುದ್ಧ ₹ 100 ಕೋಟಿ ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಹಿಮಂತ ಶರ್ಮಾ ಅವರು ಅವರ ಪತ್ನಿಯ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಅವರು ಪಿಪಿಇ ಕಿಟ್ ಗೆ 990 ರೂ ನೀಡಿ ಖರೀದಿಸಿದ್ದರೆ ಇತರರು ಅದೇ ಪಿಪಿಇ ಕಿಟ್ನ್ನು ಅದೇ ದಿನ ಬೇರೊಂದು ಕಂಪನಿಯಿಂದ 600 ಪಾವತಿ ಮಾಡಿ ಖರೀದಿಸಿದ್ದಾರೆ. ಇದು ದೊಡ್ಡ ಅಪರಾಧ ಎಂದು ಸಿಸೋಡಿಯಾ ಆರೋಪಿಸಿದ್ದು, ಈ ಕುರಿತು ತನ್ನಲ್ಲಿ ದಾಖಲೆಗಳಿವೆ ಎಂದಿದ್ದರು. ನೀವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ. ಶೀಘ್ರದಲ್ಲಿ ಗುವಾಹಟಿಯಲ್ಲಿ ನಿಮ್ಮನ್ನು ನೋಡುತ್ತೇನೆ ಎಂದು ಶರ್ಮಾ ಎಚ್ಚರಿಕೆ ನೀಡಿದ್ದರು.
ಜೂನ್ 1ರಂದು ದೆಹಲಿ ಮೂಲದ ಡಿಜಿಟಲ್ ನ್ಯೂಸ್ ವೆಬ್ಸೈಟ್ ‘ದಿ ವೈರ್’ ಮತ್ತು ಗುವಾಹಟಿ ಮೂಲದ ದಿ ಕ್ರೋಸ್ ಕರೆಂಟ್ ಜಂಟಿಯಾಗಿ ಮಾಡಿದ ತನಿಖಾ ವರದಿಯಲ್ಲಿ ಅಸ್ಸಾಂ ಸರ್ಕಾರವು ಹೆಚ್ಚಾಗಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ನಾಲ್ಕು ಕೊವಿಡ್-19 ಸಂಬಂಧಿತ ತುರ್ತು ವೈದ್ಯಕೀಯ ಪೂರೈಕೆ ಆದೇಶಗಳನ್ನು ನೀಡಿತ್ತು ಎಂದಿದೆ.
2020 ರ ಮಾರ್ಚ್ 18 ಮತ್ತು ಮಾರ್ಚ್ 23 ರ ನಡುವೆ ಮಾಡಲಾದ ಎಲ್ಲಾ ನಾಲ್ಕು ಆರ್ಡರ್‌ಗಳನ್ನು ರಿನಿಕಿ ಭುಯಾನ್ ಶರ್ಮಾ ಮತ್ತು ಕುಟುಂಬದ ವ್ಯಾಪಾರ ಸಹವರ್ತಿ ಘನಶ್ಯಾಮ್ ಧನುಕಾ ಒಡೆತನದ ಮೂರು ಸಂಸ್ಥೆಗಳು ಪಡೆದುಕೊಂಡಿವೆ ಎಂದು ಈ ಸುದ್ದಿ ವೆಬ್ಸೈಟ್ ಗಳು ವರದಿ ಮಾಡಿ, ಮಾಹಿತಿ ಹಕ್ಕು ಅಡಿಯಲ್ಲಿ ಪಡೆದ ಉತ್ತರಗಳನ್ನು ಉಲ್ಲೇಖಿಸಿವೆ.
ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಪಿಪಿಇ ಕಿಟ್‌ಗಳ ಪೂರೈಕೆಯಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ ಎಂದು ಶ್ರೀಮತಿ ಶರ್ಮಾ ಆರೋಪ ನಿರಾಕರಿಸಿದ್ದಾರೆ. ನಾನು ಈ ಪಿಪಿಇ ಕಿಟ್ ಪೂರೈಕೆಗೆ ಹಣವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಅಸ್ಸಾಂ ಸರ್ಕಾರ ಮತ್ತು ಶರ್ಮಾ ಅವರು ಮುಖ್ಯಮಂತ್ರಿಯ ಕುಟುಂಬವು ಆಪಾದಿತ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲಾ ಆರೋಪಗಳನ್ನು ಪ್ರತ್ಯೇಕವಾಗಿ ನಿರಾಕರಿಸಿದ್ದಾರೆ. ಅದೇ ವೇಳೆ ಎರಡು ಡಿಜಿಟಲ್ ಮಾಧ್ಯಮಗಳ ಆರೋಪಗಳನ್ನು “ಸುಳ್ಳು, ಕಾಲ್ಪನಿಕ, ದುರುದ್ದೇಶಪೂರಿತ ಮತ್ತು ಪಟ್ಟಭದ್ರ ಹಿತಾಸಕ್ತಿ” ಎಂದು ಹೇಳಿದ್ದಾರೆ. ಶರ್ಮಾ ಅವರು 2020 ರಲ್ಲಿ ಮೊದಲ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
ಪ್ರತಿಪಕ್ಷಗಳಾದ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್)-ಲಿಬರೇಶನ್, ಆರ್‌ಸಿಪಿಐ, ಟಿಎಂಸಿ, ರೈಜೋರ್ ದಳ, ಅಸ್ಸಾಂ ರಾಷ್ಟ್ರೀಯ ಪರಿಷತ್ ಮತ್ತು ಅಂಚಲಿಕ್ ಗಣ ಮೋರ್ಚಾ ಆಪಾದಿತ ಭ್ರಷ್ಟಾಚಾರದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿವೆ.
Published On - 12:16 pm, Fri, 1 July 22