
ಅಯೋಧ್ಯೆ, ನವೆಂಬರ್ 19: ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಸಂತಸದ ಸುದ್ದಿ. ರಾಮಲಲ್ಲಾ ದರ್ಶನದ ಸಮಯವನ್ನು ಐದು ದಿನಗಳ ಕಾಲ ಒಂದು ಗಂಟೆ ವಿಸ್ತರಿಸಲಾಗಿದೆ. ನವೆಂಬರ್ 18ರಿಂದ 22ರವರೆಗೆ ಭಕ್ತರು ರಾತ್ರಿ 11 ಗಂಟೆಯವರೆಗೆ ರಾಮಲಲ್ಲಾನ ದರ್ಶನ ಪಡೆಯಬಹುದು.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಚೌದಾ ಕೋಸಿ ಮತ್ತು ಪಂಚಕೋಸಿ ಪರಿಕ್ರಮ ಮೇಳದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಿಗೆ ಸುಲಭವಾಗಿ ದರ್ಶನ ಕಲ್ಪಿಸುವ ಉದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದರ್ಶನದ ಅವಧಿಯನ್ನು ವಿಸ್ತರಿಸಿದೆ.
ಟ್ರಸ್ಟ್ ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ನವೆಂಬರ್ 18ರಿಂದ 22ರವರೆಗೆ ರಾತ್ರಿ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರಲಿದೆ.
ಸಂಜೆಯ ದರ್ಶನದ ಸಮಯದಲ್ಲಿ ಕೆಲವು ಬದಲಾವಣೆಗಳಿವೆ.
ರಾತ್ರಿ 8.45: ಭೋಗ ಮತ್ತು ಸಂಧ್ಯಾ ಆರತಿಗಾಗಿ ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ರಾತ್ರಿ 9.30: ಆರತಿ ಮುಗಿದ ಬಳಿಕ ಮುಖ್ಯ ದ್ವಾರದ ಮೂಲಕ ಮತ್ತೆ ಪ್ರವೇಶ ಆರಂಭವಾಗಲಿದೆ.
ರಾತ್ರಿ 11.00: ದಿನದ ದರ್ಶನ ಮುಕ್ತಾಯವಾಗಲಿದೆ.
ಸಾಮಾನ್ಯವಾಗಿ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ ಈ ಐದು ದಿನಗಳ ಕಾಲ ಹೆಚ್ಚುವರಿಯಾಗಿ ಒಂದು ಗಂಟೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದರ್ಶನ ವೇಳಾಪಟ್ಟಿ ಬದಲಾವಣೆ: ನವೆಂಬರ್ 1 ರಿಂದ ಹೊಸ ನಿಯಮ ಜಾರಿ!
ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಅಕ್ಷಯ ನವಮಿ, ಚೌದಾ ಕೋಸಿ ಪರಿಕ್ರಮ ಮತ್ತು ಪಂಚಕೋಸಿ ಪರಿಕ್ರಮದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಪರಿಕ್ರಮ ಪೂರ್ಣಗೊಳಿಸಿದ ಬಳಿಕ ರಾಮಲಲ್ಲಾನ ದರ್ಶನ ಪಡೆಯುವುದು ಅನೇಕ ಭಕ್ತರ ಆಶಯ. ಹೀಗಾಗಿ ದೇವಾಲಯದಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಟ್ರಸ್ಟ್ ದರ್ಶನದ ಸಮಯವನ್ನು ವಿಸ್ತರಿಸಿದೆ.
ಚೌದಾ ಕೋಸಿ ಪರಿಕ್ರಮ ನವೆಂಬರ್ 18ರ ಮುಂಜಾನೆ ಆರಂಭವಾಗಿದ್ದು, ನವೆಂಬರ್ 20ರ ಮುಂಜಾನೆ ಮುಕ್ತಾಯಗೊಳ್ಳಲಿದೆ. ಪಂಚಕೋಸಿ ಪರಿಕ್ರಮದ ಧಾರ್ಮಿಕ ಕಾರ್ಯಕ್ರಮಗಳೂ ನವೆಂಬರ್ 22ರವರೆಗೆ ನಡೆಯಲಿವೆ.
ರಾಮ ಮಂದಿರಕ್ಕೆ ರಾತ್ರಿ ಭೇಟಿ ನೀಡಲು ಯೋಜಿಸುವ ಭಕ್ತರು ಆರತಿಯ ಸಮಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ರಾತ್ರಿ 8.45ರಿಂದ 9.30ರವರೆಗೆ ದರ್ಶನ ಸ್ಥಗಿತವಾಗುವುದರಿಂದ ಆ ಸಮಯದಲ್ಲಿ ದೇವಾಲಯಕ್ಕೆ ಹೋದರೆ ಪ್ರವೇಶಕ್ಕಾಗಿ ಕಾಯಬೇಕಾಗುತ್ತದೆ. ಪರಿಕ್ರಮದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆಯಿದೆ. ಹೀಗಾಗಿ ಭಕ್ತರು ಪ್ರಯಾಣಕ್ಕೆ ಸಾಕಷ್ಟು ಸಮಯ ಕಾಯ್ದಿರಿಸಬೇಕು. ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಮತ್ತು ಆಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು.
ರಾಮಲಲ್ಲಾ ದರ್ಶನದ ಸಮಯ ವಿಸ್ತರಣೆಯು ತಾತ್ಕಾಲಿಕ ವ್ಯವಸ್ಥೆಯಾಗಿದೆ. ನವೆಂಬರ್ 22ರವರೆಗೆ ಮಾತ್ರ ಈ ಹೊಸ ವೇಳಾಪಟ್ಟಿ ಜಾರಿಯಲ್ಲಿರಲಿದೆ. ನಂತರ ದೇವಾಲಯದ ಸಾಮಾನ್ಯ ದರ್ಶನ ಸಮಯ ಮುಂದುವರಿಯುವ ನಿರೀಕ್ಷೆಯಿದೆ. ಪರಿಕ್ರಮ ಮೇಳದ ಸಂದರ್ಭದಲ್ಲಿ ಅಯೋಧ್ಯೆಗೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಸಮಯದಲ್ಲಿ ದರ್ಶನ ಪಡೆಯಲು ಈ ನಿರ್ಧಾರ ಅನುಕೂಲ ಮಾಡಿಕೊಡಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Thu, 19 November 26