ಪಾಟ್ನಾ: ‘ಪ್ರತಿಭಟನೆ ಮಾಡುತ್ತಿರುವ ರೈತರಿಗೆ ನಾವು ಬೆಂಬಲ ಕೊಟ್ಟೇ ಕೊಡುತ್ತೇವೆ. ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ನಿಮಗೆ ಧೈರ್ಯ ಇದ್ದರೆ ನನ್ನನ್ನು ಅರೆಸ್ಟ್ ಮಾಡಿ’ ಹೀಗಂತ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲ ವ್ಯಕ್ತಪಡಿಸಿ, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಮಹಾಘಟ್ಬಂಧನ್ನ 18ಕ್ಕೂ ಹೆಚ್ಚು ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆ ನಡೆಸಲು ಇವರು ಅನುಮತಿ ಪಡೆದಿಲ್ಲ, ಕೋವಿಡ್-19 ನಿಯಂತ್ರಣಕ್ಕೆ ಜಾರಿ ಮಾಡಿರುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಪೊಲೀಸರು ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಕೇಸ್ ದಾಖಲಿಸಿದ ಬಿಹಾರ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ಓರ್ವ ಹೇಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬಿಹಾರ ಸರ್ಕಾರ ನಡೆಯುತ್ತಿದೆ. ರೈತರ ಪರ ನಿಂತ ನಮ್ಮ ವಿರುದ್ಧವೇ ಕೇಸ್ ಹಾಕಿದ್ದಾರೆ. ನಿಮಗೆ ನಿಜಕ್ಕೂ ಧೈರ್ಯ ಇದ್ದರೆ ನಮ್ಮನ್ನು ಬಂಧಿಸಿ. ಇಲ್ಲವೇ ನಾನೇ ಶರಣಾಗುತ್ತೇನೆ. ರೈತರಿಗಾಗಿ ನೇಣಿಗೇರಲೂ ನಾನು ಸಿದ್ಧ ಎಂದಿದ್ದಾರೆ.
ಅಷ್ಟೇ ಅಲ್ಲ, ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಬಿಹಾರ ಸರ್ಕಾರ ಸುಳ್ಳು ನೆಪವನ್ನು ಮುಂದಿಟ್ಟಿದೆ. ಈ ಮೂಲಕ ತನ್ನ ಮತ್ತೊಂದು ಮುಖದ ದರ್ಶನ ಮಾಡಿಸಿದೆ. ಇಂಥ ಸಾವಿರ ಎಫ್ಐಆರ್ ದಾಖಲಿಸಿದರೂ ನಾವು ಮತ್ತು ರೈತರು ಹೆದರುವುದಿಲ್ಲ ಎಂದು ಆರ್ಜೆಡಿ ಹೇಳಿದೆ. ಹಾಗೇ, ಬಿಜೆಪಿ ಕಚೇರಿಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಭೆ ನಡೆಸಿದ ಫೋಟೋವನ್ನು ಬಿಡುಗಡೆ ಮಾಡಿ, ನಮಗೆ ಮಾತ್ರ ಯಾಕೆ ಕೊರೊನಾ ನಿಯಮಗಳು ಅನ್ವಯ ಆಗುತ್ತವೆ ಎಂದು ಪ್ರಶ್ನಿಸಿದೆ.
ಬಿಹಾರದಲ್ಲಿ ಹೊಸ ರಾಜಕೀಯ ಸಂಚಲನ: ಎನ್ಡಿಎ ಬಿಟ್ಟುಹೋಗಿದ್ದ ಉಪೇಂದ್ರ ಕುಶ್ವಾಹಾ ಜೊತೆ ನಿತೀಶ್ ಚರ್ಚೆ
ಆನ್ಲೈನ್ ಕ್ಲಾಸ್ ಅಂತಾ ಅಪ್ಪನ ಮೊಬೈಲ್ ಪಡೆದ ಮಗಳಿಗೆ ಕಂಡಿದ್ದು ಪಾಠ ಅಲ್ಲ.. ಪಲ್ಲಂಗದ ಆಟ
Published On - 1:13 pm, Sun, 6 December 20