
ನವದೆಹಲಿ: ಸಿಬಿಎಸ್ಇ-2021ರ ಪರೀಕ್ಷಾ ವೇಳಾಪಟ್ಟಿ ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ ಘೋಷಣೆ ಆಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಹೇಳಿದ್ದಾರೆ.
10 ಹಾಗೂ 12ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಯಾವುದೇ ಕಾರಣಕ್ಕೂ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ. ಪರೀಕ್ಷೆ ಯಾವಾಗ ನಡೆಸಬೇಕು ಎನ್ನುವ ಬಗ್ಗೆ ನಂತರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಮೇಶ್ ಈ ಮೊದಲು ಹೇಳಿದ್ದರು. ಇದಾದ ಬೆನ್ನಲ್ಲೇ ಪರೀಕ್ಷಾ ವೇಳಾಪಟ್ಟಿ ದಿನಾಂಕ ಬಿಡುಗಡೆ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮೇಶ್ ಪೋಕ್ರಿಯಾಲ್, ಮಕ್ಕಳು ಹಾಗೂ ಪಾಲಕರಿಗಾಗಿ ಪ್ರಮುಖ ಘೋಷಣೆ. ಸಿಬಿಎಸ್ಇ ಬೋರ್ಡ್ ಪರೀಕ್ಷಾ ದಿನಾಂಕವನ್ನು ಡಿಸೆಂಬರ್ 31 ಸಂಜೆ 6 ಗಂಟೆಗೆ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
JEE 2020 ಪರೀಕ್ಷೆಯನ್ನು ಆನ್ಲೈನ್ನಲ್ಲೇ ನಡೆಸಲಾಗಿತ್ತು. ಹೀಗಾಗಿ, ಎಲ್ಲಾ ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ಮೊದಲು ಆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಯಾವುದೇ ಕಾರಣಕ್ಕೂ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಆನ್ಲೈನ್ನಲ್ಲಿ ನಡೆಯುವುದಿಲ್ಲ. ಎಲ್ಲ ಬೋರ್ಡ್ ಪರೀಕ್ಷೆಗಳು ಲಿಖಿತ ರೂಪದಲ್ಲೇ ನಡೆಯಲಿದೆ ಎಂದರು.
ಬೋರ್ಡ್ ಪರೀಕ್ಷೆಗಳು ಜನವರಿ- ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ: ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್