ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿ: ಛತ್ತೀಸ್‌ಗಢದಲ್ಲಿ 15 ವರ್ಷದ ಬಾಲಕ ಸಾವು; ಮೂವರು ಮಕ್ಕಳ ಸ್ಥಿತಿ ಗಂಭೀರ!

ಛತ್ತೀಸ್‌ಗಢದ ಜಾಂಜಗೀರ್ ಚಂಪಾದಲ್ಲಿ ಕಲ್ಲಂಗಡಿ ಸೇವಿಸಿ 15 ವರ್ಷದ ಬಾಲಕ ಮೃತಪಟ್ಟಿದ್ದು, ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮುಂಬೈ ಘಟನೆಯ ಬೆನ್ನಲ್ಲೇ ಈ ದುರಂತ ಸಂಭವಿಸಿದೆ. ಬೇಸಿಗೆಯಲ್ಲಿ ಕತ್ತರಿಸಿಟ್ಟ ಹಣ್ಣುಗಳನ್ನು ದೀರ್ಘಕಾಲ ತೆರೆದಿಡುವುದರಿಂದ ವಿಷಾಹಾರವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಸಾಮಾನ್ಯ ಆಹಾರಗಳೇ ಹೀಗೆ ಪ್ರಾಣಕ್ಕೆ ಮುಳುವಾಗುತ್ತವೆಯೇ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿ: ಛತ್ತೀಸ್‌ಗಢದಲ್ಲಿ 15 ವರ್ಷದ ಬಾಲಕ ಸಾವು; ಮೂವರು ಮಕ್ಕಳ ಸ್ಥಿತಿ ಗಂಭೀರ!
ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿ
Image Credit source: Pinterest

Updated on: May 12, 2026 | 5:23 PM

ಛತ್ತೀಸ್‌ಗಢ, ಮೇ 12: ಮುಂಬೈನಲ್ಲಿ ನಡೆದ ಕಲ್ಲಂಗಡಿ ಹಣ್ಣಿನ ದುರಂತದ ಬೆನ್ನಲ್ಲೇ, ಈಗ ಛತ್ತೀಸ್‌ಗಢದ ಜಾಂಜಗೀರ್-ಚಂಪಾದಲ್ಲಿ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಉಳಿದ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ:

ಜಾಂಜಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧಿವರ್ ಎಂದು ಗುರುತಿಸಲಾಗಿದೆ. ಈತ ತನ್ನ ಸೋದರ ಮಾವನ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಮೃತನ ಜೊತೆಗೆ ಪಿಂಟು (12), ಹಿತೇಶ್ (13) ಮತ್ತು ಮತ್ತೊಬ್ಬ 4 ವರ್ಷದ ಬಾಲಕ ಕೂಡ ಹಣ್ಣನ್ನು ಸೇವಿಸಿದ್ದರು.

ದುರಂತಕ್ಕೆ ಕಾರಣವಾಯಿತೇ ದೀರ್ಘಕಾಲ ಇಟ್ಟಿದ್ದ ಹಣ್ಣು?

ಸೋಮವಾರ ಬೆಳಿಗ್ಗೆ ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಕ್ಕಳು ಸಂಜೆ ಸೇವಿಸಿದ್ದರು ಎಂದು ವರದಿಯಾಗಿದೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅಖಿಲೇಶ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಸದ್ಯ ಉಳಿದ ಮೂವರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ವಿಷಾಹಾರದ ಶಂಕೆ, ತನಿಖೆಗೆ ಆದೇಶ:

ಕತ್ತರಿಸಿದ ಹಣ್ಣನ್ನು ದೀರ್ಘಕಾಲ ತೆರೆದಿಟ್ಟಿದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ‘ಫುಡ್ ಪಾಯಿಸನಿಂಗ್’ (Food Poisoning) ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಮಕ್ಕಳು ಕಲ್ಲಂಗಡಿ ಹಣ್ಣಿನ ಜೊತೆಗೆ ಕೋಳಿ ಮಾಂಸವನ್ನೂ ಸೇವಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಹಣ್ಣುಗಳನ್ನು ಸೇವಿಸುವಾಗ ಜಾಗ್ರತೆ ಇರಲಿ:

ಬೇಸಿಗೆಯ ಸಮಯದಲ್ಲಿ ಕತ್ತರಿಸಿದ ಹಣ್ಣುಗಳನ್ನು, ವಿಶೇಷವಾಗಿ ರಸ್ತೆಬದಿಯಲ್ಲಿ ಅಥವಾ ದೀರ್ಘಕಾಲ ತೆರೆದಿಟ್ಟ ಹಣ್ಣುಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಹಣ್ಣುಗಳನ್ನು ಕತ್ತರಿಸಿದ ಕೂಡಲೇ ಸೇವಿಸುವುದು ಅಥವಾ ಸರಿಯಾಗಿ ಮುಚ್ಚಿಡುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Tue, 12 May 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us