ದೆಹಲಿ: ಭಾರತದ ಒಂದಿಂಚು ಜಾಗವನ್ನೂ ಚೀನಾಕ್ಕೆ ಬಿಟ್ಟುಕೊಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಅವರು ಕೆಲ ಕ್ಷಣಗಳ ಹಿಂದೆ ರಾಜ್ಯಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದರು. ಚೀನಾ ಜತೆ ಸೆಪ್ಟೆಂಬರ್‌ನಿಂದಲೂ ಮಿಲಿಟರಿ ಸೇರಿದಂತೆ 9 ಹಂತದಲ್ಲಿ ಮಾತುಕತೆ ನಡೆದಿದ್ದು, ಪಾಂಗಾಂಗ್ ಸರೋವರದ (Pangong Lake) ಉತ್ತರ ದಡದಿಂದ ಸೇನೆ ಹಿಂತೆಗೆದುಕೊಳ್ಳಲು ಎರಡೂ ದೇಶಗಳ ಸೇನೆಗಳು ಒಪ್ಪಿವೆ. ಎರಡು ದೇಶಗಳು ಸಂಘರ್ಷ (India China Border Conflict) ಮುಕ್ತಾಯಕ್ಕೆ ನಿರ್ಧರಿಸಿವೆ ಎಂದು ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಿದರು.
9 ಹಂತದಲ್ಲಿ ಮಾತುಕತೆ ಬಳಿಕ ಗಡಿಯಿಂದ ಕಾಲ್ತೆಗೆಯಲು ಚೀನಾ ನಿರ್ಧಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಎರಡೂ ದೇಶಗಳ (India China border) ನಡುವೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಲು ಭಾರತ ಸಿದ್ಧವಾಗಿದೆ. ಈ ಮೂಲಕ ಶಾಂತಿ ಕಾಪಾಡಲು ಭಾರತ ಬದ್ಧವಾಗಿದೆ. ಗಡಿ ವಿವಾದವನ್ನ ಮಾತುಕತೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು. ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದರಿಂದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಅವರು ಚೀನಾದ ಆಕ್ರಮಣಶೀಲ ನಡೆಗಳ ಕುರಿತು ದೇಶದ ನಿಲುವನ್ನು ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: ಪ್ಯಾಂಗೋಂಗ್ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್ಗಳು; ಚೀನಾಕ್ಕೆ ಸೆಡ್ಡು
ಭಾರತೀಯ ಸೇನೆ ಈವರೆಗೆ ಎಲ್ಲ ಸವಾಲುಗಳನ್ನ ಎದುರಿಸಿದೆ. 2020 ರಲ್ಲಿ ಚೀನಾ ಭಾರತದ ಭೂಮಿ ಅತಿಕ್ರಮಿಸಿದ್ದು, ಆವರೆಗಿನ ಯಥಾಸ್ಥಿತಿಯನ್ನ ಬದಲಾಯಿಸಲು ಚೀನಾ ಯತ್ನಿಸಬಾರದು ಎಂದು ರಾಜನಾಥ್ ಸಿಂಗ್ ಚೀನಾಕ್ಕೆ ಎಚ್ಚರಿಕೆ ನೀಡಿದರು. ಜತೆಗೆ, 2020 ರ ಏಪ್ರಿಲ್ಗಿಂತ ಮುಂಚಿನ ಶಾಂತ ಸ್ಥಿತಿ ಬರುವ ಭರವಸೆಯಿದೆ ಎಂದು ರಾಜ್ಯಸಭೆಗೆ ತಿಳಿಸಿದರು. ಹಲವು ಮಹತ್ವದ ಸ್ಥಳಗಳಲ್ಲಿ ಸೇನೆ ನಿಯೋಜಿಸಲಾಗಿದ್ದು, ಎಲ್‌ಎಸಿಯಲ್ಲಿ ನಮ್ಮ ಸೇನೆ ಅತ್ಯಂತ ಬಲಿಷ್ಠವಾಗಿದೆ.ಭಾರತೀಯ ಸೇನೆ ಈವರೆಗೂ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದರು.
ಸೇನೆಯ ವಿಷಯದಲ್ಲಿ ಒಮ್ಮತ ಅಗತ್ಯ
ಇಡೀ ಸದನ ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಒಂದೇ ನಿಲುವು ಹೊಂದಿರಬೇಕು. ಸೇನೆಯ ಶೌರ್ಯವನ್ನು ಪ್ರಶಂಸಿಸಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ನಿಲುವು ತಳೆದಿದ್ದರೂ ಸೇನೆಯ ವಿಷಯದಲ್ಲಿ ದೇಶದ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಬೇಕು. ಸೇನೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ಕರೆ ಕೊಟ್ಟರು.
ಚೀನಾ ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜನೆ, ಶಸ್ತ್ರಾಸ್ತ್ರ, ಸಾಮಗ್ರಿಗಳ ಸಂಗ್ರಹ ಹೊಂದಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸೇನೆ ನಿಯೋಜನೆ ಮಾಡಿದ್ದು, ಚೀನಾದ ಸೇನೆ ಫಿಂಗರ್ 8 ರವರೆಗೆ ಹಿಂದೆ ಸರಿದ ನಂತರ ಭಾರತದ ಸೇನೆ ಫಿಂಗರ್ 3ರ ಧನಸಿಂಗ್ ಪೋಸ್ಟ್ಗೆ ಹಿಂದಿರುಗಲಿದೆ ಎಂದು ಅವರು ತಿಳಿಸಿದರು.
ಪಾಂಗೋಂಗೋ ತ್ಸೋ ಸರೋವರದ ಉತ್ತರ ಭಾಗದ ಫಿಂಗರ್ ವಲಯದಲ್ಲಿ ಭಾರತ-ಚೀನಾ ಪೆಟ್ರೋಲಿಂಗ್ ಸ್ಥಗಿತವಾಗಲಿದೆ. ಫಿಂಗರ್ 8ರ ವಿಷಯಗಳ ಬಗ್ಗೆ ಚೀನಾದ ಜೊತೆಗೆ ಮಾತುಕತೆ ಬಾಕಿ ಇದ್ದು, ಒಪ್ಪಂದದ ಪ್ರಕಾರ 48 ಗಂಟೆಯಲ್ಲಿ ಚೀನಾ ಸೇನೆ ಹಿಂತೆಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.
Published On - 11:48 am, Thu, 11 February 21