
ನವದೆಹಲಿ, ಅಕ್ಟೋಬರ್ 20: ಸಾರ್ವಜನಿಕ ಶಾಂತಿ ಕದಡುವ ಆತಂಕ ಹಾಗೂ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಕ್ಟೋಬರ್ 21, 2026 ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಅಕ್ಟೋಬರ್ 11 ರಂದು ನೈಋತ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಸಲ್ಲಿಸಲಾಗಿದ್ದ ಮುಚ್ಚಳಿಕೆ ಪತ್ರಗಳನ್ನು ಇಬ್ಬರೂ ಆರೋಪಿಗಳು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ, ಸಾರ್ವಜನಿಕ ಶಾಂತಿಗೆ ತಕ್ಷಣವೇ ಭಂಗ ತಂದಿದ್ದಾರೆ ಎಂದು ನ್ಯಾಯಾಲಯದ ಆದೇಶದ ಪ್ರತಿ ಸ್ಪಷ್ಟಪಡಿಸಿದೆ. ಪ್ರತಿವಾದಿಗಳ ವರ್ತನೆಯು ಕಾನೂನಿನ ಚೌಕಟ್ಟನ್ನು ಮೀರಿದ್ದು ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಮ್ಯಾಜಿಸ್ಟ್ರೇಟ್ ಕಟುವಾಗಿ ಅಭಿಪ್ರಾಯಪಟ್ಟಿದ್ದಾರೆ.
ಅಪರಾಧ ಪುನರಾವರ್ತನೆಯ ಭೀತಿ: ಪ್ರತಿಭಟನೆಗೆ ಅನುಮತಿ ಇಲ್ಲದ ನಿರ್ಬಂಧಿತ ಪ್ರದೇಶಗಳಲ್ಲೇ ಗುಂಪು ಸೇರಿಸಿ ಪ್ರತಿಭಟಿಸುವ ಚಾಳಿ ಇವರಲ್ಲಿದೆ. ತನಿಖಾಧಿಕಾರಿ (IO) ಸಲ್ಲಿಸಿರುವ ದಾಖಲೆಗಳ ಪ್ರಕಾರ, ಇವರು ಹೊರಬಂದರೆ ಮತ್ತೆ ಕಾನೂನು ಉಲ್ಲಂಘಿಸುವುದಿಲ್ಲ ಎಂಬ ಭರವಸೆಯ ಮೇಲೆ ನ್ಯಾಯಾಲಯಕ್ಕೆ ಯಾವುದೇ ನಂಬಿಕೆ ಉಳಿದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶಾಂತಿ ಕದಡುವ ಸಾಧ್ಯತೆ: ತನಿಖಾಧಿಕಾರಿ ಮಂಡಿಸಿದ ವಾದ ಮತ್ತು ಸಾಕ್ಷ್ಯಗಳು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಅಪಾಯವಿರುವುದನ್ನು ಪುಷ್ಟೀಕರಿಸಿವೆ. ತಮ್ಮ ವಾದವನ್ನು ಎರಡು ದಿನಗಳೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಆರೋಪಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಸೂಚನೆ
ಜಾಮೀನು ತಿರಸ್ಕೃತಿಗೆ ‘ಶ್ಯೂರಿಟಿ’ (ಜಾಮೀನುದಾರರ) ಎಡವಟ್ಟು ಪ್ರಮುಖ ಕಾರಣ
ವಿಚಾರಣೆ ವೇಳೆ ನಾಯಕರ ಪರವಾಗಿ ಹಾಜರುಪಡಿಸಲಾದ ಜಾಮೀನುದಾರರು ಸಂಪೂರ್ಣ ಅನರ್ಹರು ಎಂದು ಮ್ಯಾಜಿಸ್ಟ್ರೇಟ್ ಪತ್ತೆಹಚ್ಚಿದ್ದಾರೆ. ಜಾಮೀನು ಬಾಂಡ್‌ನಲ್ಲಿದ್ದ ವ್ಯಕ್ತಿಯ ಫೋಟೋಗೂ, ಆತ ನೀಡಿದ ಆಧಾರ್ ಕಾರ್ಡ್‌ನ ಫೋಟೋಗೂ ಯಾವುದೇ ಸ್ಪಷ್ಟ ಹೋಲಿಕೆ ಇರಲಿಲ್ಲ. ಬೇರೆ ಯಾವುದೇ ಅಧಿಕೃತ ಗುರುತಿನ ಚೀಟಿ ನೀಡಲು ಜಾಮೀನುದಾರ ವಿಫಲನಾಗಿದ್ದು, ಮ್ಯಾಜಿಸ್ಟ್ರೇಟ್ ಕೇಳಿದ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ನೀಡಿದ್ದಾನೆ.
ಮೂಲಭೂತ ವಿವರಗಳ ಅರಿವಿಲ್ಲ: ಸೌರವ್ ದಾಸ್ ಪರ ಜಾಮೀನುದಾರನಾಗಿ ನಿಂತಿದ್ದರೂ, ದಾಸ್ ಅವರ ಪೋಷಕರ ಹೆಸರು ಮತ್ತು ವಿಳಾಸದಂತಹ ಕನಿಷ್ಠ ವಿವರಗಳೂ ಆತನಿಗೆ ತಿಳಿದಿರಲಿಲ್ಲ. ಜಾಮೀನುದಾರರಿಗೆ ಆರೋಪಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಹಳೆಯ ಶ್ಯೂರಿಟಿಗಳನ್ನು ತಿರಸ್ಕರಿಸಿ ಹೊಸದಾಗಿ ಮಾನ್ಯ ಜಾಮೀನುದಾರರನ್ನು ಹಾಜರುಪಡಿಸಲು ನ್ಯಾಯಾಲಯ ಸೂಚಿಸಿದೆ.
ಆರೋಪಿಗಳ ಪರ ವಕೀಲರ ವಾದವೇನು?
ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಪರ ವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರು ಅಕ್ಟೋಬರ್ 10 ರ ನಂತರ ಯಾವುದೇ ಪ್ರತಿಭಟನೆಗೆ ಕರೆ ನೀಡಿಲ್ಲ. ಇಬ್ಬರೂ ಪ್ರತ್ಯೇಕವಾಗಿಯೇ ಜಂತರ್ ಮಂತರ್‌ಗೆ ತೆರಳಿದ್ದರು. ಅವರು ಯಾವುದೇ ಅಪರಾಧವನ್ನು ಪುನರಾವರ್ತಿಸುವುದಿಲ್ಲವಾದ್ದರಿಂದ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೋರಿದರು. ಆದರೆ ಈ ವಾದವನ್ನು ಮ್ಯಾಜಿಸ್ಟ್ರೇಟ್ ಒಪ್ಪಲಿಲ್ಲ.
ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಜಂತರ್ ಮಂತರ್‌ನ ಮುಚ್ಚಿದ ಬ್ಯಾರಿಕೇಡ್‌ಗಳನ್ನು ದಾಟಿ ನುಗ್ಗಿದ ಆರೋಪದ ಮೇಲೆ ಅಕ್ಟೋಬರ್ 13 ರಂದು ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರು. ಇಬ್ಬರೂ ಸದ್ಯ ತಿಹಾರ್ ಜೈಲಿನಲ್ಲಿದ್ದು, ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 21, 2026 ರಂದು ನಡೆಯಲಿದೆ. ಅಂದು ಹೊಸ ಹಾಗೂ ವಿಶ್ವಾಸಾರ್ಹ ಜಾಮೀನುದಾರರನ್ನು ಹಾಜರುಪಡಿಸಿದರೆ ಮಾತ್ರ ಅವರ ಜಾಮೀನು ಅರ್ಜಿಯನ್ನು ಮರುಪರಿಶೀಲಿಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ