ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ, ಇದು ದೀರ್ಘಾವಧಿಯ ಹೋರಾಟ: ಅ. 10ರ ಜಂತರ್ ಮಂತರ್ ಚಲೋಗೆ ಸಿಜೆಪಿಯ ಸೌರವ್ ದಾಸ್ ಕರೆ

ಕಾಕ್ರೋಚ್ ಜನತಾ ಪಾರ್ಟಿ (CJP) ಅಕ್ಟೋಬರ್ 10ರಂದು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ, ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಸೌರವ್ ದಾಸ್ ನೇತೃತ್ವದಲ್ಲಿ ನಡೆಯುವ ಈ ಹೋರಾಟ ಕೇವಲ ಒಂದು ದಿನದ್ದಲ್ಲ, ಬದಲಿಗೆ ಸಮಗ್ರ ಚುನಾವಣಾ ಸುಧಾರಣೆಗಳಿಗಾಗಿ ದೀರ್ಘಾವಧಿಯ ಹೋರಾಟ ಎಂದು ಘೋಷಿಸಲಾಗಿದೆ.

ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ, ಇದು ದೀರ್ಘಾವಧಿಯ ಹೋರಾಟ: ಅ. 10ರ ಜಂತರ್ ಮಂತರ್ ಚಲೋಗೆ ಸಿಜೆಪಿಯ ಸೌರವ್ ದಾಸ್ ಕರೆ
ಜ್ಞಾನೇಶ್ ಕುಮಾರ್
Image Credit source: Newsonair

Updated on: Oct 07, 2026 | 2:51 PM

ನವದೆಹಲಿ, ಅಕ್ಟೋಬರ್ 07: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 10ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಸಂಬಂಧ ‘ಕಾಕ್ರೋಚ್ ಜನತಾ ಪಕ್ಷ’ದ (CJP) ಮುಖ್ಯ ವಕ್ತಾರ ಸೌರವ್ ದಾಸ್ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೆಹಲಿ ಪೊಲೀಸರಿಗೆ ಔಪಚಾರಿಕ ಪತ್ರ ನೀಡಿ ಮಾಹಿತಿ ರವಾನಿಸಿದ್ದಾರೆ. ದೇಶಾದ್ಯಂತ ಯುವಜನರು ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು, ಶಾಂತಿ-ಸುವ್ಯವಸ್ಥೆ ಮತ್ತು ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ, ಇದು ದೀರ್ಘಾವಧಿ ಹೋರಾಟ

ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ದಾಸ್, ಇದು ಕೇವಲ ಒಂದು ದಿನದ ಪ್ರತಿಭಟನೆಯಲ್ಲ, ದೀರ್ಘ ಹೋರಾಟ. ಪ್ರತಿಯೊಬ್ಬರೂ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ದೆಹಲಿಗೆ ಬನ್ನಿ. ಜ್ಞಾನೇಶ್ ಕುಮಾರ್ ಕೇವಲ ರಾಜೀನಾಮೆ ನೀಡಿದರೆ ಸಾಲದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಚುನಾವಣಾ ಆಯೋಗವು ಸಂಪೂರ್ಣವಾಗಿ ಪಾರದರ್ಶಕವಾಗುವವರೆಗೆ ಮತ್ತು ವ್ಯವಸ್ಥಿತ ಸುಧಾರಣೆಗಳು ಜಾರಿಯಾಗುವವರೆಗೆ ನಾವು ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದ್ದಾರೆ.

ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೂಲಕ ಆಡಳಿತಾರೂಢ ಬಿಜೆಪಿಗೆ ಚುನಾವಣಾ ಆಯೋಗ ಲಾಭ ಮಾಡಿಕೊಡುತ್ತಿದೆ ಎಂದು ಆರೋಪಿಸಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ ಮುಖಂಡರು, ಈ ಹೋರಾಟಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. “ಒಂದು ಕಡೆ ಇಡೀ ದೇಶದ ಯುವಕರು, ವಿದ್ಯಾರ್ಥಿಗಳು ಮತ್ತು ಇಂಡಿಯಾ ಒಕ್ಕೂಟವಿದ್ದರೆ, ಮತ್ತೊಂದೆಡೆ ಕೇವಲ ಬಿಜೆಪಿ ಮತ್ತು ಚುನಾವಣಾ ಆಯೋಗ ಮಾತ್ರ ನಿಂತಿವೆ. ಇತಿಹಾಸದ ಸರಿ ಬದಿಯಲ್ಲಿ ನಿಲ್ಲಲು ಬಯಸುವವರು ತಕ್ಷಣವೇ ಬಿಜೆಪಿ ಶಿಬಿರವನ್ನು ತೊರೆಯಬೇಕು” ಎಂದು ಕರೆ ನೀಡಿದ್ದಾರೆ.

ಮತ್ತಷ್ಟು ಓದಿ:
ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಆಗ್ರಹ, ಅಕ್ಟೋಬರ್ 2ರಿಂದ ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ

ಏನಿದು ವಿವಾದ?
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಏಕಾಏಕಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು ಕಸಿದುಕೊಳ್ಳುತ್ತದೆ ಎಂದು ವಿಪಕ್ಷಗಳು ಮತ್ತು ಯುವ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಿಜೆಪಿ ಮುಂದಿಟ್ಟಿರುವ 3 ಪ್ರಮುಖ ಷರತ್ತುರಹಿತ ಬೇಡಿಕೆಗಳು:

ಸಿಇಸಿ ರಾಜೀನಾಮೆ ಮತ್ತು ಬಂಧನ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ಅಧಿಕಾರಾವಧಿಯ ಅಕ್ರಮಗಳ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಿ ಬಂಧಿಸಬೇಕು.

ಎಸ್​ಐಆರ್ ಸ್ಥಗಿತ ಹಾಗೂ ಹಳೆಯ ಪಟ್ಟಿ ಮರುಸ್ಥಾಪನೆ:

ವಿವಾದಿತ ಎಸ್​ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು, ಮುಂಬರುವ ಚುನಾವಣೆಗಳನ್ನು ಮುಂದೂಡಬೇಕು, ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಿ, ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು.

2023ರ ನೇಮಕಾತಿ ಕಾನೂನು ರದ್ದು

ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ 2023ರ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ನ್ಯಾಯಾಂಗ ಮತ್ತು ಸ್ವತಂತ್ರ ವ್ಯವಸ್ಥೆಯನ್ನು ಒಳಗೊಂಡ ವಿಶ್ವಾಸಾರ್ಹ ಆಯ್ಕೆ ಸಮಿತಿಯನ್ನು ಪುನಃ ಸ್ಥಾಪಿಸಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us